ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಪವಾಡ ಬಸವೇಶ್ವರ ದೇವಾಲಯದಲ್ಲಿ ಇದೇ ದಿನಾಂಕ ೬ ರಂದು ಪಾರಂಪರಿಕ ವೈದ್ಯ ಪರಿಷತ್ ಸಮಾವೇಶ ನಡೆಯಲಿದೆ ಎಂದು ಪಾರಂಪರಿಕ ವೈದ್ಯ ಪರಿಷತ್ ಜಿಲ್ಲಾ ಸಂಚಾಲಕ ಶಿವಾನಂದ ಜಂಗಿನಮಠ ಹೇಳಿದರು.
ಶನಿವಾರ ನಗರದ ಜಿಪಂ ರಸ್ತೆಯಲ್ಲಿರುವ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಅವರು, ವಾತ, ಪಿತ್ತ, ಕಫ ಸೇರಿದಂತೆ ತ್ರಿದೋಷಗಳಿಗೆ ಪರಿಹಾರ ಕಲ್ಪಿಸುವ ವಿವಿಧ ಗಿಡಮೂಲಿಕೆಗಳು, ಆರೋಗ್ಯ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಈ ಮಹತ್ವದ ಸಮಾವೇಶ ನಡೆಯಲಿದ್ದು, ಸಂಘದ ರಾಜ್ಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದರು.
ಪಾರಂಪರಿಕ ವೈದ್ಯರ ಸಮಸ್ಯೆಗಳ ಬಗ್ಗೆ ಚರ್ಚೆ, ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸುವುದು, ಪಾರಂಪರಿಕ ವೈದ್ಯರಿಗೆ ಉಚಿತ ಬಸ್ ಸಂಪರ್ಕ ಕಲ್ಪಿಸುವುದು, ವೈದ್ಯರಿಗೆ ಮಾಶಾಸನ ನೀಡುವುದು, ಪಾರಂಪರಿಕ ವೈದ್ಯ ಕುಟುಂಬದ ಮಕ್ಕಳಿಗೆ ಬಿಎಎಂಎಸ್ ಸೀಟುಗಳನ್ನು ಹೆಚ್ಚಿಗೆ ಮೀಸಲಿರಿಸುವುದು ಸೇರಿದಂತೆ ಅನೇಕ ರೀತಿಯ ಬೇಡಿಕೆಗಳನ್ನು ಸರ್ಕಾರದ ಮುಂದೆ ಇರಿಸಲಾಗುವುದು ಎಂದರು.
ಕರ್ನಾಟಕದಲ್ಲಿ ೩ ರಿಂದ ೪ ಸಾವಿರ ಪಾರಂಪರಿಕ ವೈದ್ಯರಿದ್ದು, ವಿಜಯಪುರ ಜಿಲ್ಲೆಯಲ್ಲಿ ೨೦೦ ಕ್ಕೂ ಹೆಚ್ಚು ಪಾರಂಪರಿಕ ನೊಂದಾಯಿತ ವೈದ್ಯರಿದ್ದಾರೆ, ಪಾರಂಪರಿಕ ವೈದ್ಯರು ಎಲ್ಲೆಡೆ ಸೇವೆ ಒದಗಿಸುತ್ತಿದ್ದಾರೆ, ಬೀದರ್, ಆದಿಚುಂಚನಗರಿ, ಕೂಡಲಸಂಗಮ ಸೇರಿದಂತೆ ವಿವಿಧ ಭಾಗಗಳಲ್ಲಿ ಸಮಾವೇಶ ಯಶಸ್ವಿಯಾಗಿ ನಡೆದಿದೆ ಎಂದರು.
ಸಂಘಟನೆಯ ನಿಡಗುಂದಿ ತಾಲೂಕಾ ಸಂಚಾಲಕ ಇಮಾಮ್‌ಖಾನ್ ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತಿರದ್ದರು.

