” ವಿಜಯಪುರದ ಪತ್ರಿಕಾ ಭವನದಲ್ಲಿ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಮಾದ್ಯಮ ಪ್ರತಿನಿಧಿಗಳೊಂದಿಗೆ ಸಂವಾದ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಮ್ಮ ಸಾಂಸ್ಕೃತಿಕ ವೈಭವವನ್ನು ಪ್ರಪಂಚಾದ್ಯಂತ ಪಸರಿಸುವ ಕೆಲಸ ನಡೆಯಬೇಕಿದೆ, ಈ ನಿಟ್ಟಿನಲ್ಲಿ ಪ್ರಥಮ ಹೆಜ್ಜೆಯಾಗಿ ಕಲಾಧಾರಾ ಎಂಬ ವಿಶೇಷ ಕಾರ್ಯಕ್ರಮ ಸಂಘಟಿಸಲು ನಿರ್ಧರಿಸಲಾಗಿದೆ, ಸಾರ್ವಜನಿಕರ ಸಹಕಾರ ದೊರಕಿದರೆ ಪ್ರತಿ ವರ್ಷವೂ ಈ ಕಾರ್ಯಕ್ರಮವನ್ನು ಸಂಘಟಿಸುವ ಯೋಜನೆ ಹೊಂದಲಾಗಿದೆ ಎಂದು ರಾಜ್ಯಸಭಾ ಸದಸ್ಯೆ ಹಾಗೂ ಮೂರ್ತಿ ಟ್ರಸ್ಟ್ ಅಧ್ಯಕ್ಷೆ ಡಾ.ಸುಧಾಮೂರ್ತಿ ಹೇಳಿದರು.
ವಿಜಯಪುರದ ಪತ್ರಿಕಾ ಭವನದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದ ಅವರು, ಸಾಂಸ್ಕೃತಿಕ ಭವ್ಯತೆಯ ಪ್ರಸಾರದ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಪುರಾತತ್ವ ಸರ್ವೇಕ್ಷಣಾ ಇಲಾಖೆ, ಭಾರತೀಯ ವಿದ್ಯಾಭವನದ ಸಹಯೋಗದಲ್ಲಿ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ, ಹಿಂದೂಸ್ತಾನಿ, ಕರ್ನಾಟಕಿ, ಕಥಕ್ ಸೇರಿದಂತೆ ಅನೇಕ ಕಲಾ ಪ್ರಕಾರಗಳ ರಸ ದೌತಣ ಉಣ ಬಡಿಸುವ ಕಾರ್ಯ ಎರಡು ದಿನಗಳ ಕಾಲ ನಡೆಯಲಿದೆ. ಈ ವರ್ಷದ ಯಶಸ್ಸು ನೋಡಿ ಮುಂದಿನ ಸಾರಿಯೂ ಈ ಕಾರ್ಯಕ್ರಮವನ್ನು ನಿಯಮಿತವಾಗಿ ಸಂಘಟಿಸಲಾಗುವುದು, ನಮ್ಮ ಜಿಲ್ಲೆಯ ಸಾಂಸ್ಕೃತಿಕ ಅಭಿವೃದ್ಧಿಯ ಏಕೈಕ ದೃಷ್ಟಿಯಿಂದ ಈ ಮಹತ್ವದ ಕಾರ್ಯಯೋಜನೆ ರೂಪಿಸಲಾಗಿದೆ ಎಂದರು.
ಜ.೪ ರಂದು ಸಂಜೆ ೫.೩೦ ಕ್ಕೆ ಕರ್ನಾಟಕ ಸಂಗೀತ ವಾದ್ಯ ಗೋಷ್ಠಿ ನಡೆಯಲಿದ್ದು, ಡಿ. ಬಾಲಕೃಷ್ಣ ವೀಣೆ, ಆಧಿತಿ ಕೃಷ್ಣ ಪ್ರಕಾಶ ಪೀಟಿಲು, ವಿ. ವಂಶಿಧರ ಕೊಳಲು, ಅನಿರುದ್ಧ ಭಟ್ ಮೃದಂಗ, ಭಾಗ್ಯಲಕ್ಷ್ಮಿ ಭಟ್ ಮೊರ್ಸಿಂಗ್ ವಾದನದ ವೈಭವ ಸೃಜಿಸಲಿದ್ದಾರೆ. ಅದೇ ದಿನ ಸಂಜೆ ೭ ಕ್ಕೆ ವಿದೂಷಿ ಮಿಥುನ್ ಶ್ಯಾಮ್ ಹಾಗೂ ಸಂಗಡಿಗರಿಂದ ಭರತನಾಟ್ಯ ನಡೆಯಲಿದೆ. ನಾದಮ್ ನೃತ್ಯ ತಂಡದಿಂದ ಕಥಕ್ ಕೀ ಖನಕ್ ಎಂಬ ವಿಶೇಷ ಕಾರ್ಯಕ್ರಮ ನಡೆಯಲಿದೆ. ಖ್ಯಾತ ಕಲಾವಿದ ಪೊನ್ನಪ್ಪ ಕಡೇಮನಿ ಅವರ ನೇತೃತ್ವದಲ್ಲಿ ಕಲಾ ಶಿಬಿರ ನಡೆಯಲಿದೆ ಎಂದರು.
ಹಳೇಬೀಡು ಕದಂಬ ಉತ್ಸವ, ಹಂಪಿ ಉತ್ಸವ ಸೇರಿದಂತೆ ದೇಶ ವಿದೇಶದ ಅನೇಕ ಉತ್ಸವಗಳನ್ನು ನೋಡಿದ್ದೇನೆ,
ಸಾಂಸ್ಕೃತಿಕವಾಗಿ ಅತ್ಯಂತ ಸಿರಿವಂತಿಕೆಯುಳ್ಳ ಜಿಲ್ಲೆಗಳು ಕರ್ನಾಟಕದಲ್ಲಿವೆ, ವಿಜಯಪುರ ಜಿಲ್ಲೆಯ ವಿಮಾನ ನಿಲ್ದಾಣ ಮಾಡಿದರೆ ಸಾಂಸ್ಕೃತಿಕವಾಗಿಯೂ ಜಿಲ್ಲೆಗೆ ಅನುಕೂಲ, ಹೀಗಾಗಿಯೇ ಈ ಬಗ್ಗೆ ರಾಜ್ಯಸಭೆಯಲ್ಲಿಯೂ ಧ್ವನಿ ಎತ್ತಿರುವೆ, ಬೆಂಗಳೂರು, ಹೈದರಾಬಾದ್, ನವದೆಹಲಿ ಹೀಗೆ ಜನರು ಸುಲಭವಾಗಿ ಆಗಮಿಸಿ ಈ ಭಾಗದ ಸೌಂದರ್ಯವನ್ನು ಸವಿಯಲು ಅನುಕೂಲವಾಗುತ್ತದೆ ಎಂದರು.
ಕಾನಿಪ ಜಿಲ್ಲಾಧ್ಯಕ್ಷ ಅಶೋಕ ಯಡಹಳ್ಳಿ ಮಾತನಾಡಿ, ವಿಜಯಪುರ ಅನೇಕ ಸ್ಮಾರಕಗಳ ನೆಲವೀಡು, ಈ ಮಾರ್ಗದಿಂದ ಸಾಗಿದರೆ ಬಾದಾಮಿ, ಪಟ್ಟದಕಲ್ಲು, ಹಳೇಬೀಡು ಸೇರಿದಂತೆ ಅನೇಕ ಪ್ರವಾಸಿ ತಾಣಗಳಿಗೆ ದಾರಿಯಾಗಿದೆ, ಹೀಗಾಗಿಯೇ ಒಂದು ವಿಶೇಷ ಟೂರಿಸಂ ವೇ ರೂಪಿಸಿದರೆ ಅತ್ಯಂತ ಅನುಕೂಲವಾಗುತ್ತದೆ ಎಂದರು.
ಕಾನಿಪ ಸಂಘದ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ಸ್ವಾಗತಿಸಿದರು.
ಹಿರಿಯ ಪತ್ರಕರ್ತರಾದ ಗೋಪಾಲ ನಾಯಕ, ವಾಸುದೇವ ಹೆರಕಲ್ಲ, ಪ್ರವಾಸೋದ್ಯಮ ಇಲಾಖೆ ಸಂಯೋಜಕ ಅನೀಲ, ಭಾರತಿ ವಿದ್ಯಾಭವನದ ನಾಗಲಕ್ಷ್ಮಿ, ಪುರಾತತ್ವ ಇಲಾಖೆ ಸರ್ವೇಕ್ಷಣಾ ಇಲಾಖೆಯ ಅಧಿಕಾರಿ ರಮೇಶ ಮೂಲಿಮನಿ ಪಾಲ್ಗೊಂಡಿದ್ದರು.
ನವರಸಪುರದಲ್ಲಿ ಉತ್ಸವಕ್ಕೆ ನೆರವು ನೀಡಲು ಸಿದ್ಧ
ನವರಸಪುರ ಉತ್ಸವಕ್ಕೆ ಸರ್ಕಾರದ ಅನುದಾನ ಬಿಡಿ, ನಾನೇ ಅದಕ್ಕೆ ನೆರವು ನೀಡುವೆ, ಪೂರಕವಾದ ಬಸ್ ಸೌಲಭ್ಯ, ಆವರಣ ಸ್ವಚ್ಛತೆ ಸೇರಿದಂತೆ ವಿವಿಧ ಮಹತ್ವದ ಜವಾಬ್ದಾರಿಗಳನ್ನು ವಿವಿಧ ಸಂಘಟನೆಯವರು ಮುಂದೆ ಬಂದರೆ ಅದಕ್ಕೆ ಪೂರ್ಣ ಪ್ರಮಾಣದಲ್ಲಿ ನಾನು ಅನುದಾನದ ನೆರವು ನೀಡಲು ಸಿದ್ಧ ಎಂದು ಸುಧಾಮೂರ್ತಿ ಘೋಷಿಸಿದರು.
ಈ ವರ್ಷ ನವರಸಪುರ ಉತ್ಸವವನ್ನು ಮಾಡುವುದಾಗಿ ಸಚಿವ ಡಾ.ಎಂ.ಬಿ. ಪಾಟೀಲರು ಭರವಸೆ ನೀಡಿದ್ದಾರೆ, ಈ ವರ್ಷ ಆಗದೇ ಹೋದರೆ ಮುಂದಿನ ವರ್ಷ ನವರಸಪುರ ಉತ್ಸವವನ್ನು ನಮ್ಮ ಟ್ರಸ್ಟ್ ವತಿಯಿಂದಲೇ ನಡೆಸಲು ಚಿಂತನೆ ನಡೆಸಲಾಗುವುದು ಎಂದರು.

