ಉದಯರಶ್ಮಿ ದಿನಪತ್ರಿಕೆ
ವರದಿ: ದೇವೇಂದ್ರ ಹೆಳವರ
ವಿಜಯಪುರ: ಜ್ಞಾನಯೋಗಾಶ್ರಮದ ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ಪ್ರವಚನವಿದೆ ಎಂದರೆ ಸಾಕು ಸಹಸ್ರ- ಸಹಸ್ರ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದುದನ್ನು ನಾವು- ನೀವೆಲ್ಲಾ ಕಣ್ಣಾರೆ ಕಂಡಿದ್ದುಂಟು.
ಬದುಕಿನಲ್ಲಿ ಯಾವುದೇ ಆಸೆ-ಆಮಿಷಕ್ಕೆ ಒಳಗಾಗದೇ, ಗೌರವ ಪುರಸ್ಕಾರಗಳನ್ನು ಬಯಸದೇ ಆಧ್ಯಾತ್ಮಿಕ ಸಾಧನೆಯ ಉತ್ತುಂಗ ಶಿಖರಕ್ಕೆ ಏರಿದ ಶ್ರೀಗಳು, ಅತ್ಯಂತ ಸರಳವಾಗಿ ಬದುಕಿ ಹೋದರು. ಬದುಕಿನುದ್ದಕ್ಕೂ ತಮ್ಮ ಸಮಯವನ್ನು ಆಧ್ಯಾತ್ಮಿಕ ಚಿಂತನೆಗೆ, ಜ್ಞಾನದಾಸೋಹಕ್ಕೆ ಮೀಸಲಿಟ್ಟಿದ್ದ ಶ್ರೀಗಳು, ದೇಶ-ವಿದೇಶಗಳಲ್ಲಿ ಸಂಚರಿಸಿ ಜನತೆಗೆ ಆಧ್ಯಾತ್ಮಿಕ ಜ್ಞಾನದ ಜೊತೆಗೆ ಪ್ರೀತಿಯನ್ನು ಹಂಚಿ ಎಲ್ಲರ ಮನಸ್ಸು- ಹೃದಯಗಳನ್ನು ಅರಳಿಸಿದ ಶ್ರೇಷ್ಠ ಯೋಗಿಗಳು.
ಸಿದ್ಧೇಶ್ವರ ಶ್ರೀಗಳು ದೇಹತ್ಯಾಗ ಮಾಡಿ ಬಯಲಲ್ಲಿ ಬಯಲಾಗಿ ಮೂರು ವರ್ಷಗಳಾದರೂ ಅವರ ಬಗ್ಗೆ ಜನರಲ್ಲಿರುವ ಶ್ರದ್ಧಾಭಾವನೆ, ಭಕ್ತಿಭಾವನೆ ಒಂದಿಷ್ಟು ಕಡಿಮೆಯಾಗಿಲ್ಲ ಎನ್ನುವುದಕ್ಕೆ ಜ್ಞಾನಯೋಗಾಶ್ರಮದಲ್ಲಿ ಪ್ರತೀ ವರ್ಷ ಜನೇವರಿಯಲ್ಲಿ ಹಮ್ಮಿಕೊಳ್ಳುವ ಗುರುನಮನ ಮಹೋತ್ಸವಕ್ಕೆ ನಾಡಿನ ವಿವಿಧೆಡೆಯಿಂದ ಭಕ್ತಸಾಗರ ಹರಿದು ಬರುತ್ತಿರುವುದೇ ಸಾಕ್ಷಿಯಾಗಿದೆ.
ಪರಿಸರ ಪ್ರೇಮಿಗಳಾಗಿದ್ದ ಶ್ರೀಗಳಿಗೆ ಪಶು-ಪಕ್ಷಿ, ಹೂವು, ಗಿಡ-ಮರಗಳ ಮೇಲೆ ಬಹಳ ಪ್ರೀತಿ ಇತ್ತು. ಶ್ರೀಗಳು ಆಶ್ರಮದ ಆವರಣದಲ್ಲಿ ವಿಶಾಲವಾದ ಆಲದ ಮರದ ಕೆಳಗೆ ಕುಳಿತು ಪ್ರವಚನ ಹೇಳುತ್ತಿದ್ದರು. ಬೃಹದಾಕಾರವಾಗಿ ಬೆಳೆದ ಆಲದ ಮರದ ರೆಂಬೆಗಳು ಶ್ರೀಗಳು ಪ್ರವಚನ ಹೇಳುವ ಸ್ಥಳದ ಮೇಲೆ ಚಾಚಿ ಜೋತುಬಿದ್ದಿದ್ದವು. ಹೀಗೆ ಜೋತುಬಿದ್ದ ರೆಂಬೆಗಳನ್ನು ಕಡಿದು ಹಾಕದೇ ಶ್ರೀಗಳ ಸಲಹೆಯಂತೆ ಆ ರೆಂಬೆಗಳಿಗೆ ಉದ್ದನೆಯ ಕಟ್ಟಿಗೆಯ ಕಂಬಗಳನ್ನು ಆಧಾರ ಕೊಟ್ಟು ಮೇಲಕ್ಕೆತ್ತರಿಸಲಾಗಿದೆ.
ಶ್ರೀಗಳು ಭೌತಿಕವಾಗಿ ಈಗ ನಮ್ಮ ಮಧ್ಯೆ ಇಲ್ಲದಿದ್ದರೂ ಅವರು ಇದೇ ಆಲದ ಮರದ ರೆಂಬೆಗಳ ಕೆಳಗೆ ಕುಳಿತು ಪ್ರವಚನ ಹೇಳುತ್ತಿದ್ದರು ಎಂಬುದು ಆಶ್ರಮಕ್ಕೆ ಪ್ರವಚನ ಕೇಳಲು ಬರುತ್ತಿದ್ದ ಪ್ರತಿಯೊಬ್ಬರ ಸ್ಮೃತಿಪಟಲದಲ್ಲಿದೆ. ಶ್ರೀಗಳ ಪ್ರತೀ ಪ್ರವಚನಕ್ಕೆ ಸಾಕ್ಷಿಯಾದ ಆಲದ ಮರ ಈಗಲೂ ವಿಶಾಲವಾಗಿ ತನ್ನ ರೆಂಬೆ-ಕೊಂಬೆಗಳನ್ನು ಚಾಚಿಕೊಂಡು, ನೆಲಕ್ಕೆ ಬೇರುಗಳನ್ನು ಬಿಟ್ಟು ಗಟ್ಟಿಯಾಗಿ ನಿಂತಿದೆ. ಆದರೆ, ಪ್ರವಚನ ಹೇಳಲು ಶ್ರೀಗಳೇ ಇಲ್ಲದಂತಾಗಿದೆ. ಶ್ರೀಗಳು ನಮಗೆಲ್ಲ ಇನ್ನು ನೆನಪು ಮಾತ್ರ.
ಮೂರನೇ ವರ್ಷದ ಗುರುನಮನ ಮಹೋತ್ಸವದ ಸಂದರ್ಭದಲ್ಲಿ ಜ್ಞಾನಯೋಗಾಶ್ರಮದ ಆವರಣದಲ್ಲಿರುವ ಈ ಆಲದ ಮರದ ಕೆಳಗೆ ಶ್ರೀಗಳು ಪ್ರವಚನ ಹೇಳಲು ಕುಳಿತುಕೊಳ್ಳುವ ಜಾಗದಲ್ಲಿ ಆಕರ್ಷಕ ಮಂಟಪ ನಿರ್ಮಿಸಿ ಶ್ರೀಗಳ ಪ್ರವಚನ ಹೇಳುವ ಶೈಲಿಯ ಭಾವಚಿತ್ರವಿಟ್ಟು ದೀಪಾಲಂಕಾರ ಮಾಡಿದ್ದು ಗುರುನಮನ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಜ್ಞಾನಯೋಗಾಶ್ರಮಕ್ಕೆ ಆಗಮಿಸಿದ್ದ ಭಕ್ತಕೋಟಿಯ ಮನಸ್ಸನ್ನು ಬಹುವಾಗಿ ಆಕರ್ಷಿಸಿತು.
ಶ್ರೀಗಳ ಭಾವಚಿತ್ರಕ್ಕೆ ಪುಷ್ಪಗಳನ್ನು ಹಾಕುತ್ತ ಭಕ್ತರು ಭಕ್ತಿಭಾವದಿಂದ ನಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಶ್ರೀಗಳ ಆಕರ್ಷಕವಾದ ಭಾವಚಿತ್ರ ನೋಡಿದ ಎಲ್ಲರ ಮನದಲ್ಲೂ ಸಾಕ್ಷಾತ್ ಶ್ರೀಗಳೇ ಜೀವಂತವಾಗಿ ಕುಳಿತು ಪ್ರವಚನ ಹೇಳುತ್ತಿದ್ದಾರೇನೋ ಎಂಬ ಭಾವನೆ ಮೂಡದೇ ಇರಲಿಲ್ಲ.

