ಕಲಕೇರಿಗ್ರಾಪಂ ನಿರ್ಮಿಸಿದ ಗ್ರಾಮೀಣ ಸಂತೆ ಮಾರುಕಟ್ಟೆ ಹಾಗೂ ವಾಣಿಜ್ಯ ಮಳಿಗೆಗಳ ಉದ್ಘಾಟನೆ ಸಮಾರಂಭ
ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಜನತೆಯ ಆಶಿರ್ವಾದದಿಂದ ಸಿಕ್ಕ ಅಧಿಕಾರದ ಅವಧಿಯಲ್ಲಿ ಜನ ಮೆಚ್ಚುವ ಕೆಲಸ ಕಾರ್ಯಗಳನ್ನು ಮಾಡಿದರೆ ಮಾತ್ರ ಅದು ಜನತೆಯ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯವಾಗುತ್ತದೆ. ಅಂತಹ ಕೆಲಸವನ್ನು ಗ್ರಾಮದ ಮುಖ್ಯ ಬಜಾರನಲ್ಲಿ ಉತ್ತಮ ಗುಣಮಟ್ಟದ ೫೦ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡುವ ಮೂಲಕ ಕಲಕೇರಿಯ ಗ್ರಾಮ ಪಂಚಾಯತಿಯು ಇಡಿ ಜಿಲ್ಲೆಗೆ ಮಾದರಿಯಾಗಿದೆ ಎಂದು ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಕುದರಿಸಾಲೋಡಗಿ ಹೇಳಿದರು.
ಕಲಕೇರಿ ಗ್ರಾಮದ ಮುಖ್ಯ ಬಜಾರನಲ್ಲಿ ಜಿಲ್ಲಾ ಪಂಚಾಯತ್ ವಿಜಯಪುರ, ತಾಲೂಕು ಪಂಚಾಯತ್ ತಾಳಿಕೋಟಿ ಗ್ರಾಮ ಪಂಚಾಯತ್ ಕಾರ್ಯಾಲಯ ಕಲಕೇರಿ ಇವರ ವತಿಯಿಂದ ಹಮ್ಮಿಕೊಂಡ ಮಹಾತ್ಮಾ ಗಾಂಧೀಜಿ ಮಾರುಕಟ್ಟೆ ಹಾಗೂ ವಾಣಿಜ್ಯ ಮಳಿಗೆಗಳನ್ನು ಉದ್ಘಾಟಿಸಿ, ಸಸಿ ನೆಟ್ಟು ಅವರು ಮಾತನಾಡಿದರು.
ಇಲ್ಲಿಯ ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಸದಸ್ಯರು ಅತ್ಯಂತ ಕಡಿಮೆ ಅವಧಿಯಲ್ಲಿ ಮಳಿಗೆಗಳನ್ನು ನಿರ್ಮಿಸುವದರ ಜೊತೆಗೆ ಸುಮಾರು ೩೦-೪೦ ವರ್ಷಗಳಿಂದ ಈ ಜಾಗದಲ್ಲಿ ಭೂ ಬಾಡಿಗೆ ಕಟ್ಟಿ ಇಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದ ವ್ಯಾಪಾರಸ್ಥರಿಗೆ ಮೊದಲು ಆದ್ಯತೆ ನೀಡಿ ಅವರಿಗೆ ಅಂಗಡಿಗಳನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು, ಕಲಕೇರಿಗ್ರಾಮ ಸುಮಾರು ೧೮-೨೦ ಸಾವಿರ ಜನಸಂಖ್ಯೆ ಹೊಂದಿದ್ದು ತಾಲೂಕಿನಲ್ಲಿಯೇ ಅತೀ ದೊಡ್ಡ ಗ್ರಾಮ, ಜೊತೆಗೆ ಇಲ್ಲಿ ಎಲ್ಲ ರೀತಿಯ ಅಗತ್ಯ ಸೌಲಭ್ಯಗಳು ಕೂಡಾ ಇರುವದರಿಂದ ಈಗಾಗಲೇ ಕಲಕೇರಿ ಹಾಗೂ ಕೋರವಾರ ಗ್ರಾಮವನ್ನು ಹೋಬಳಿ ಮಾಡಲು ಸರ್ಕಾರದ ಮೇಲೆ ಒತ್ತಡ ಹಾಕಿದ್ದೇನೆ ಮುಖ್ಯವಾಗಿ ನನ್ನ ಅಧಿಕಾರದ ಅವಧಿಯಲ್ಲಿಯೇ ಕಲಕೇರಿ ಗ್ರಾಮವನ್ನು ಹೋಬಳಿ ಗ್ರಾಮವನ್ನಾಗಿ ಘೋಷಣೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಹೇಳಿದರು.
ಸಿಂದಗಿ ಶಾಸಕ ಅಶೋಕ ಮನಗೂಳಿ ಮಾತನಾಡಿ, ಸುಮಾರು ೨೫-೩೦ ವರ್ಷಗಳ ಹಿಂದೆಯೇ ಕಲಕೇರಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡುವಂತೆ ಅನೇಕ ಸಂಘಟನೆಗಳು ಹೋರಾಟಗಾರರು ಒತ್ತಾಯಿಸುತ್ತಾ ಬಂದಿರುವುದು ಇಂದಿಗೂ ನಮಗೆಲ್ಲಾ ನೆನಪಿದೆ, ಆದರೆ ಈ ಗ್ರಾಮ ಈಗ ತಾಳಿಕೋಟಿಗೆ ಸೇರ್ಪಡೆ ಆಗಿರುವದರಿಂದ ಈ ತಾಲೂಕಿನಲ್ಲಿಯೇ ಅತ್ಯಂತ ದೊಡ್ಡ ಗ್ರಾಮವಾಗಿದ್ದು, ಗ್ರಾಮಸ್ಥರು ಕಲಕೇರಿ ಗ್ರಾಮವನ್ನು ಹೋಬಳಿಯೆಂದು ಘೋಷಣೆ ಮಾಡಬೇಕೆನ್ನುವ ಬೇಡಿಕೆಗೆ ನನ್ನದು ಸಂಪೂರ್ಣ ಬೆಂಬಲವಿದೆ. ಈ ವಿಷಯದಲ್ಲಿ ಆಡಳಿತ ಪಕ್ಷದ ಶಾಸಕನಾಗಿ ಪಕ್ಷಾತೀತವಾಗಿ ಸ್ಥಳಿಯ ಶಾಸಕರೊಂದಿಗೆ ಕೂಡಿಕೊಂಡು ಕಲಕೇರಿಯನ್ನು ಹೋಬಳಿ ಕೇಂದ್ರವನ್ನಾಗಿ ಮಾಡಲು ನಾನೂ ಕೂಡಾ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಇದೇ ವೇಳೆ ಭೈರಿ ಫೌಂಡೇಶನ್ ವತಿಯಿಂದ ಸಂತೆ ಮಾರುಕಟ್ಟೆ ಮತ್ತು ವಾಣಿಜ್ಯ ಮಳಿಗೆಯ ಮಧ್ಯದಲ್ಲಿ ನಿರ್ಮಿಸಲಾದ ಸಿಸಿ ರಸ್ತೆ ಮತ್ತು ನೀರಿನ ಟ್ಯಾಂಕ್‌ನ್ನು ಪೂಜ್ಯರು ಮತ್ತು ಶಾಸಕರು ಉದ್ಘಾಟಿಸಿದರು.
ಮುಖಂಡರಾದ ಸುರೇಶ ನಾಡಗೌಡ ಬಿಂಜಲಭಾವಿ, ಪಿಡಿಓ ಬಿ ಎಂ ಸಾಗರ, ಗ್ರಾಪಂ ಸದಸ್ಯ ನಬಿಲಾಲ ನಾಯ್ಕೋಡಿ ಸೇರಿದಂತೆ ಇತರರು ಮಾತನಾಡಿದರು.
ಕಲಕೇರಿ ಗ್ರಾಮದ ಗುರುಮರುಳಾರಾಧ್ಯರ ಹಿರೇಮಠದ ಸಿದ್ದರಾಮ ಶ್ರೀಗಳು, ಮೌಲಾನಾ ನಾಸೀರ್ ಉಮ್ರೀ ಇನಾಮದಾರ ಸಾನಿಧ್ಯ ವಹಿಸಿದ್ದರು, ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜಅಹ್ಮದ ಸಿರಸಗಿ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಕುದರಿಸಾಲೋಡಗಿ ಕಲಕೇರಿ ಗ್ರಾಮ ಪಂಚಾಯತಿಯ ಎಲ್ಲ ೨೮ ಸದಸ್ಯರಿಗೆ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಬೇಡರ, ಭೈರಿ ಫೌಂಡೇಶನ್‌ನ ರಾಘು ದೊಡ್ಡಮನಿ, ಸಂಗನಗೌಡ ಲಿಂಗದಳ್ಳಿ ಚಬನೂರ, ಕನಕರಾಜ ವಡ್ಡರ, ಪಿಕೆಪಿಎಸ್ ಅಧ್ಯಕ್ಷ ರುದ್ರಪ್ಪ ಗುಮಶೆಟ್ಟಿ, ದಾವಲಸಾಬ ನಾಯ್ಕೋಡಿ, ದೊಡ್ಡಪ್ಪ ಗುಮಶೆಟ್ಟಿ, ಜಾಹಾಂಗೀರಬಾಷಾ ಸಿರಸಗಿ, ಶಾಂತಪ್ಪ ಪಟ್ಟಣಶೆಟ್ಟಿ, ಲಕ್ಕಪ್ಪ ಬಡಿಗೇರ, ರಮೇಶ ಹೊಸಮನಿ, ಖಾಜಾ ಅಮೀನ್ ವಲ್ಲಿಬಾಯಿ, ದೇವಿಂದ್ರ ಜಂಬಗಿ, ಕಿರಣಕುಮಾರ ದೇಸಾಯಿ, ರಾಮರಾವ್ ದೇಶಮುಖ, ಪ್ರೇಮು ಪವಾರ, ಸಿದ್ದಪ್ಪ ಕುದರಕಾರ, ಹಣಮಂತ ವಡ್ಡರ, ಡಾ.ಎಂ ಎಂ ಗುಡ್ನಾಳ, ಶರಣಪ್ಪ ಮೋಪಗಾರ ಸೇರಿದಂತೆ ಕಲಕೇರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪಿಡಿಓ ಬಿ ಎಂ ಸಾಗರ ಪ್ರಾಸ್ತಾವಿಕವಾಗಿ ಮಾತನಾಡಿದರು, ಗ್ರಾಪಂ ಸದಸ್ಯ ಚಾಂದಪಾಶಾ ಹವಾಲ್ದಾರ ಸ್ವಾಗತಿಸಿದರು, ಪ್ರಾಚಾರ್ಯರಾದ ಶಿವಾನಂದ ಸಜ್ಜನ್ ನಿರೂಪಿಸಿದರು, ಗ್ರಾಪಂನ ಈರಘಂಟಿ ಮೋಪಗಾರ ವಂದಿಸಿದರು.

