ಸತ್ತ ನಂತರದ ಪರಿಹಾರಕ್ಕಿಂತ ಜೀವ ಉಳಿಸುವ ಕ್ರಮವೇ ಸರ್ವ ಶ್ರೇಷ್ಠ
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ
– ವಿವೇಕಾನಂದ ಎಚ್.ಕೆ, ಬೆಂಗಳೂರು
ಪಟಾಕಿ ಸ್ಪೋಟದ ಘಟನೆಗಳು ಆಕಸ್ಮಿಕವಲ್ಲ ಅವು ಖಂಡಿತ ನಿರೀಕ್ಷಿತ. ಮದ್ದು ಗುಂಡುಗಳು ಸ್ಪೋಟಿಸುವುದು ಸಹಜ ಅಲ್ಲವೇ. ಅದರಿಂದ ಆಗುವ ಹಾನಿಯೂ ಸ್ವಾಭಾವಿಕವಲ್ಲವೇ. ಹಾಗಾದರೆ ಅರಿವಿನ ಅಂಚಿನಲ್ಲಿನ ದುರಂತ ತಡೆಯುವುದು ಸರ್ಕಾರದ ಸಹಜ ಜವಾಬ್ದಾರಿಯಲ್ಲವೇ..
ಬಡ ಕೂಲಿ ಕಾರ್ಮಿಕರ ಜೀವ ಉಳಿಸಲು, ಅಂಗಡಿ ಮಾಲಿಕರ ಕುಟುಂಬ ಉಳಿಸಲು, ಪರಿಸರದ ಶುದ್ಧತೆ ಮತ್ತು ಸ್ವಚ್ಚತೆ ಉಳಿಸಲು ಪಟಾಕಿ ನಿಷೇಧಿಸಲೇಬೇಕು..
ಕೇವಲ ದೀಪಾವಳಿ ಹಬ್ಬಕ್ಕೆ ಮಾತ್ರವಲ್ಲ, ಹೊಸ ವರ್ಷ ಸೇರಿ ಎಲ್ಲಾ ಹಬ್ಬಗಳಿಗೂ, ರಾಜಕೀಯ ಧಾರ್ಮಿಕ ಕಾರ್ಯಕ್ರಮಗಳಿಗೂ ಒಟ್ಟಿನಲ್ಲಿ ಪಟಾಕಿ ಉತ್ಪಾದನೆಯನ್ನೇ ನಿಲ್ಲಿಸಬೇಕು. ಅದು ಮಾಡುತ್ತಿರುವ ಹಾನಿ ತುಂಬಾ ಭಯಂಕರವಾಗಿದೆ..
ಇಡೀ ಪಟಾಕಿ ಉದ್ಯಮವನ್ನೇ ನಿಷೇಧಿಸಿ ಅದರಲ್ಲಿ ತೊಡಗಿಸಿಕೊಂಡಿದ್ದವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಇದಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ರಫ್ತು ಸಹ ನಿಷೇಧ ಮಾಡಬೇಕು..
ಹಿಂದೆ ಪಟಾಕಿ ಒಂದು ಉತ್ತಮ, ಮನಸ್ಸಿಗೆ ಉಲ್ಲಾಸ ನೀಡುವ ಬೆಳಕಿನ ಆಚರಣೆಯಾಗಿತ್ತು. ಆ ವಿವಿಧ ಬಗೆಯ ಬೆಳಕಿನ ಚಿತ್ತಾರಗಳು ಬಾನಂಗಳದಲ್ಲಿ ಮೂಡಿ ಮುದ ನೀಡುತ್ತಿದ್ದವು. ಮಕ್ಕಳು ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತಿದ್ದವು. ಯಾರಿಂದಲೂ ಯಾವ ತಕರಾರು ಇರಲಿಲ್ಲ..
ಆದರೆ ಯಾವಾಗ ಜನಸಂಖ್ಯೆಯ ಸ್ಫೋಟ ಎಲ್ಲಾ ಮಿತಿಗಳನ್ನು ಮೀರಿ ಬೆಳೆಯತೊಡಗಿತೋ, ಅವರ ಮೂಲಭೂತ ಸೌಕರ್ಯಗಳ ಅವಶ್ಯಕತೆಗಾಗಿ ಕೈಗಾರಿಕೀಕರಣ ಅಭಿವೃದ್ಧಿಯಾಯಿತೋ ಆಗ ಪರಿಸರ ಮೇಲೆ ಬಹುದೊಡ್ಡ ಒತ್ತಡ ಬೀಳತೊಡಗಿತು. ಅದು ಎಷ್ಟರಮಟ್ಟಿಗೆ ಎಂದರೆ ವಾಯುಮಾಲಿನ್ಯದಿಂದ ಭಾರತದ ರಾಜಧಾನಿ ದೆಹಲಿ ಸೇರಿ ಕೆಲವು ನಗರಗಳು ಅಪಾಯಕಾರಿ ಹಂತಕ್ಕೆ ತಲುಪಿ ವಾಸಿಸಲು ಯೋಗ್ಯವಲ್ಲದ ನಗರಗಳಾದವು. ಗಾಳಿಯಲ್ಲಿನ ದೂಳಿನ ಕಣಗಳು ಉಸಿರಾಟದ ತೊಂದರೆಗೆ ಕಾರಣವಾದವು..
ಈಗ ಮನುಷ್ಯನ ಆರೋಗ್ಯ ಮತ್ತು ಅಸ್ತಿತ್ವದ ದೃಷ್ಟಿಯಿಂದ ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ಕನಿಷ್ಠ ಪ್ರಮಾಣಕ್ಕೆ ಇಳಿಸಬೇಕಿದೆ. ಆರೋಗ್ಯವೇ ಭಾಗ್ಯ ಎಂಬುದನ್ನು ನೆನಪಿಸಿಕೊಳ್ಳಬೇಕಿದೆ. ಮುಖ್ಯವಾಗಿ ಪಟಾಕಿ ದೀಪಾವಳಿ ಹಬ್ಬದ ಪ್ರಮುಖ ಸಂಪ್ರದಾಯ. ಆ ಸಂದರ್ಭದಲ್ಲಿ ಅತಿಹೆಚ್ಚು ಮಾಲಿನ್ಯ ಉಂಟಾಗುತ್ತದೆ. ಇದನ್ನು ಕೇವಲ ಈ ಹಬ್ಬದಲ್ಲಿ ಮಾತ್ರವಲ್ಲ ಅದರ ಸಂಪೂರ್ಣ ಉತ್ಪಾದನೆಯನ್ನೇ ನಿಷೇಧಿಸಬೇಕು. ಯಾವ ಕಾರಣಕ್ಕೂ ಇದಕ್ಕೆ ಧಾರ್ಮಿಕ ಬಣ್ಣ ನೀಡಬಾರದು..
ಮಣ್ಣಿನ ದೀಪದ ರೀತಿಯ ಹಣತೆ ಬೆಳಗುವುದಕ್ಕೆ ಹೆಚ್ಚು ಪ್ರಚಾರ ಮತ್ತು ಪ್ರೋತ್ಸಾಹ ನೀಡಬೇಕು. ಈಗ ಹಸಿರು ಪಟಾಕಿಗಳ ಬಗ್ಗೆ ಕೇಳಿ ಬರುತ್ತಿದೆ. ಇದು ಕಡಿಮೆ ಅಪಾಯಕಾರಿ ಎಂದು ಹೇಳಲಾಗುತ್ತದೆ. ಪರಿಸರ ಎಷ್ಟು ಹಾಳಾಗಿದೆ ಎಂದರೆ ಸಣ್ಣ ಪ್ರಮಾಣದ ಹಾನಿ ಸಹ ತುಂಬಾ ತೊಂದರೆ ಕೊಡಬಹುದು. ಆಹಾರ ಕಲಬೆರಕೆ, ನೀರಿನ ಗುಣಮಟ್ಟ ತುಂಬಾ ಹಾಳಾಗಿರುವಾಗ ಜೀವನಾವಶ್ಯಕ ಗಾಳಿಯನ್ನು ನಾವು ಸ್ವತಃ ಮಾಲಿನ್ಯ ಮಾಡುವುದು ಮುಂದಿನ ಜನಾಂಗ ನಮ್ಮನ್ನು ಕ್ಷಮಿಸಲಾರದ ತಪ್ಪು ಮಾಡಿದಂತಾಗುತ್ತದೆ..
ನೈಸರ್ಗಿಕವಾಗಿ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ ಪಟಾಕಿ..
ನೈತಿಕವಾಗಿ ಅನಧಿಕೃತ ಕೊಲೆಗಡುಕನಂತೆ ಕೆಲಸ ಮಾಡುತ್ತದೆ ಪಟಾಕಿ..
ಅತಿ ಹೆಚ್ಚು ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವ ಉದ್ಯಮ ಪಟಾಕಿ,.
ಭಯಂಕರ ರೋಗಗಳಿಗಿಂತ ಬೇಗ ಅನಿರೀಕ್ಷಿತ ಸಾವು ತರುತ್ತದೆ ಪಟಾಕಿ,.
ಸಿಡಿಮದ್ದು ಸಿಡಿಸಿ, ಪರಿಸರ ನಾಶಪಡಿಸಿ, ಸಂಭ್ರಮಿಸಿ ಮಾಡಿಕೊಳ್ಳವ ಪರೋಕ್ಷ ಆತ್ಮಹತ್ಯೆ ಪಟಾಕಿ,.
ಬಗಲಲ್ಲಿ ಸಿಡಿಮದ್ದು ಇಟ್ಟುಕೊಂಡು, ಸುರಕ್ಷತೆಯ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ, ನಾಟಕ ಮಾಡುವ, ಆತ್ಮ ವಂಚನೆ ಮಾಡಿಸುತ್ತದೆ ಪಟಾಕಿ,.
ಚಿಕ್ಕಮಕ್ಕಳನ್ನು ಹೆದರಿಸುತ್ತದೆ, ವಯಸ್ಸಾದವರಿಗೆ ಕಿರಿಕಿರಿ ಮಾಡುತ್ತದೆ, ಮಹಿಳೆಯರಿಗೆ ಇಷ್ಟವಾಗುವುದಿಲ್ಲ.
ಮೂಕ ಪ್ರಾಣಿಗಳನ್ನು ಓಡಿಸುತ್ತದೆ,
ಪಕ್ಷಿಗಳಿಗೆ ಪ್ರಾಣಭಯ ಉಂಟು ಮಾಡುತ್ತದೆ ಪಟಾಕಿ,.
ಕ್ಷಣಮಾತ್ರದಲ್ಲಿ ಯಾವುದೇ ಉಪಯೋಗವಿಲ್ಲದೆ ಕೋಟ್ಯಾಂತರ ಹಣ ನೀರ ಮೇಲಿನ ಹೋಮದಂತೆ ಕರಗಿಸಿ ಹೊಗೆ ಉಗುಳುವ ಶಕ್ತಿ ಇರುವುದೇ ಪಟಾಕಿ,.
ಪುಂಡ ಪೋಕರಿಗಳ ಚೆಲ್ಲಾಟಕ್ಕೆ ಬೇಕು ಪಟಾಕಿ, ಪುಢಾರಿಗಳ, ಬಕೆಟ್ ರಾಜಕಾರಣಿಗಳ ಪ್ರದರ್ಶನಕ್ಕೆ ಬೇಕು ಪಟಾಕಿ,.
ಹಬ್ಬ, ಉತ್ಸವ, ಕ್ರಿಕೆಟ್ ನ ಅಂಧಾಭಿಮಾನಿಗಳಿಗೆ ಬೇಕು ಪಟಾಕಿ,.
ಬಡತನ, ಶೋಷಣೆ, ಬೂಟಾಟಿಕೆಯ ಸಂಕೇತ ಪಟಾಕಿ,.
ಶಾಸ್ತ್ರ, ಸಂಪ್ರದಾಯ, ಸಂಸ್ಕೃತಿ ಹೆಸರಿನ ದುರುಪಯೋಗ ಪಟಾಕಿ,.
ಮೌಢ್ಯ, ಅಜ್ಞಾನ, ಡಾಂಬಿಕತನ, ಉಢಾಪೆಗಳ ಪ್ರದರ್ಶನ ಪಟಾಕಿ,.
ಕೇವಲ ಕೆಲವು ಜನರಿಗೆ ಉದ್ಯೋಗ ನೀಡಿದೆ ಮತ್ತು ಅವರ ಆರ್ಥಿಕ ಚ್ಯೆತನ್ಯಕ್ಕೆ ದಾರಿ ಮಾಡಿಕೊಟ್ಟಿದೆ ಎಂಬ ಒಂದು ಒಳ್ಳೆಯ ಅಂಶ ಬಿಟ್ಟರೆ, ಅತ್ಯಂತ, ಅಪಾಯಕಾರಿ ಆಚರಣೆ ಈ ಪಟಾಕಿ ಸುಡುವುದು..
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಇದಕ್ಕಾಗಿ ವಿಶೇಷ ಹೆಚ್ಚುವರಿ ವ್ಯವಸ್ಥೆ ಮಾಡಿಕೊಳ್ಳುತ್ತಾರೆ ಎಂದರೆ ಇದರ ಭಯಂಕರ ಹಾವಳಿ ಊಹಿಸಿ,..
ಮಕ್ಕಳು ಕಣ್ಣು ಕಳೆದುಕೊಳ್ಳುವ, ದೇಹ ಸುಟ್ಟುಕೊಳ್ಳುವ ದೃಶ್ಯ ನೆನಪಿಸಿಕೊಳ್ಳಿ..
ಪಟಾಕಿ ವಿಷಯದಲ್ಲಿ ಸುರಕ್ಷತೆ ಎಂಬುದು ಸದ್ಯಕ್ಕೆ ನಮ್ಮ ದೇಶದಲ್ಲಿ ಭ್ರಮೆ ಅಷ್ಟೆ,.
ಈ ಪಟಾಕಿ ಸಾವು ನಿನ್ನೆ ಮೊನ್ನೆಯದಲ್ಲ, ನಮ್ಮ ಮೂರ್ಖ ಸಂಭ್ರಮಕ್ಕೆ ಕಾರ್ಮಿಕರ ಬಲಿದಾನ ಪ್ರತಿವರ್ಷ ನಿರಂತರ,.
ಮಾನವೀಯ ದೃಷ್ಟಿಯಿಂದ ಪಟಾಕಿ ಅವಲಂಬಿತರಿಗೆ ಪರಿಹಾರ ನೀಡಿ ಇದನ್ನು ನಿಲ್ಲಿಸಿ,
ಸತ್ತ ಮೇಲೆ ಪರಿಹಾರ ನೀಡುವ ಪರಿಪಾಠ ನಿಲ್ಲಿಸಿ..
ಬೆಳಕಿನ ಹಬ್ಬ ಕೆಲವರ ಪಾಲಿಗೆ ಕತ್ತಲಾಗುವುದು ಬೇಡ.
ಹಬ್ಬದ ಸಂಭ್ರಮ ಎಲ್ಲರಿಗೂ ಸುಖ ಸಂತೋಷ ತರಲಿ..
ಪಟಾಕಿಗೆ ಅನುಕೂಲಕರ ಪರ್ಯಾಯ ಮಾರ್ಗ ಹುಡುಕೋಣ.
ಇದು ಧರ್ಮದ ಸಂಪ್ರದಾಯದ ವಿಷಯ ಅಲ್ಲ. ನಮ್ಮದೇ ಪ್ರಕೃತಿಯ ರಕ್ಷಣೆಯ ವಿಷಯ..
ಹಿಂದೆ ಜನಸಂಖ್ಯೆ ಕಡಿಮೆ ಇತ್ತು. ಜನರ ಕೊಳ್ಳುವ ಶಕ್ತಿ ಅಷ್ಟಾಗಿ ಇರಲಿಲ್ಲ. ಗಿಡಮರಗಳು ಯಥೇಚ್ಛವಾಗಿದ್ದವು. ಆಗ ಪಟಾಕಿ ಒಂದು ಸಂಭ್ರಮವಾಗಿತ್ತು..
ಈಗ ಉಸಿರಾಡುವ ಗಾಳಿಯೇ ವಿಷವಾಗಿರುವಾಗ ಇದನ್ನು ಸಂಪ್ರದಾಯದ ಹೆಸರಲ್ಲಿ ಮುಂದುವರಿಸುವುದು ಬೇಡ,
ಎಂದಿನಂತೆ ಮಣ್ಣಿನ ದೀಪ ಹಚ್ಚಿ ಆಚರಿಸೋಣ..
ಇತರೆ ಧರ್ಮದ ಕೆಲವು ಆಚರಣೆಗಳು ಪರಿಸರ ನಾಶ ಎಂದಾದರೆ ಮುಲಾಜಿಲ್ಲದೆ ಅದನ್ನು ನಿಷೇಧಿಸಬೇಕು.
ಪರಿಸರ ರಕ್ಷಣೆಯ ವಿಷಯ ಧರ್ಮ ರಕ್ಷಣೆಗಿಂತ ಬಹುಮಖ್ಯ..
ನಾವು ಆರೋಗ್ಯವಾಗಿದ್ದರೆ ಮಾತ್ರ ಎಲ್ಲಾ, ಉಳಿದದ್ದೆಲ್ಲ ಆಮೇಲೆ ಅಲ್ಲವೇ..