ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಅಜ್ಞಾನದಿಂದ ಸುಜ್ಞಾನದೆಡೆಗೆ ಕೊಂಡೊಯ್ಯುವ ಮಹಾ ಶಕ್ತಿಯೇ ಗುರು ಅಂತಹ ಸದ್ಗುರುವಿನ ಸನ್ನಿಧಿಯಲ್ಲಿ ಜರುಗುವ ಹುಣ್ಣಿಮೆಯ ಸತ್ಸಂಗ ಮಹಾ ಬೆಳಕು ಎಂದು ಶಿವಬಸಯ್ಯ ಸ್ವಾಮಿ ಕುಕೂನೂರು ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶ್ರೀ ಗುರು ಕಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನದ ವತಿಯಿಂದ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿ ಉದ್ಘಾಟಿಸಿ ಉಪನ್ಯಾಸ ನೀಡಿದ ಅವರು ಗುರು ಎಂದರೆ ಅಭಿಮಾನ, ಗುರು ಎಂದರೆ ಆಶಿರ್ವಾದ, ಗುರು ಎಂದರೆ ಚೈತನ್ಯ ಸ್ವರೂಪ, ಎನ್ನುತ್ತಾ, ಜಗದ ಜನರು ಜಂಜಾಟಗಳಿಂದ ಜರ್ಜರಿತವಾದಗ ಜನಜೀವನಕ್ಕೆ ಜೀವಾಮೃತ ತುಂಬಿ ಜಾಗೃತಿಗೊಳಿಸುವ ಜಂಗಮ ಸ್ವರೂಪವೇ ಗುರು ಎಂದವರು, ಸಾಧು, ಸಂತರು, ಸತ್ಪುರುಷರು, ಚಿಂತಕರು, ಶ್ರೇಷ್ಠ ದಾರ್ಶನಿಕರು ತೋರಿದ ಮಾರ್ಗವನ್ನು ಅನುಸರಿಸುತ್ತಾ, ಭಗವಂತನ ಸಾಕ್ಷಾತ್ಕಾರಕ್ಕೆ ಸಾಕ್ಷಿಯಾಗುವ ಮೂಲಕ ಸದ್ಭಕ್ತರ ಬಾಳು ಬೆಳಗಲಿ ಎಂಬ ಸದುದ್ದೇಶದಿಂದ ಮಾಸಿಕ ಶಿವಾನುಭವ ಗೋಷ್ಠಿಯನ್ನು ಆಯೋಜಿಸಿ ಅನುಭವದ ಅಮೃತಧಾರೆ ಎರೆಯುವ ಷ ಬ್ರ ಚನ್ನಬಸವ ಶಿವಾಚಾರ್ಯರ ಘನ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ಸದ್ಭಕ್ತರಾದ ಮುದುಕಣ್ಣ ಸಾಹುಕಾರ ಹುಣಸಿಗಿ ಮಾತನಾಡಿ, ಭಕ್ತಿಯೇ ಮುಕ್ತಿಗೆ ಮೂಲ ಮಂತ್ರ ಎನ್ನುತ್ತಾ, ಪ್ರತಿಯೊಬ್ಬರ ಬದುಕಿನ ಬವಣೆಗಳು ದೂರಾಗಲು, ಬದುಕಲಿ ಕಠಿಣ ವ್ರತ ಆಚರಣೆಗಳು ಬೇಕು, ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಾಗ, ಪರಶಿವನ ಕೃಪೆ ಸುಲಭ ಸಾಧ್ಯ. ನೀತಿ ನಿಯಮ, ಚೌಕಟ್ಟುಗಳ ತತ್ವೂಪದೇಶ ಆಲಿಸಲು ಸತ್ಸಂಗದಲ್ಲಿ ಸೇರೋಣ ಎಂದರು.
ಷ ಬ್ರ ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಿದ್ದಲಿಂಗ ಸ್ವಾಮಿ ಚಿಂಚೋಳಿ ಹಾಗೂ ರಾಜಶೇಖರ ಸ್ವಾಮಿ ಅಳ್ಳೋಳ್ಳಿ ಇವರಿಂದ ಸಂಗೀತ ಕಾರ್ಯಕ್ರಮ ಮೂಡಿ ಬಂತು. ಪತ್ರಕರ್ತರಾದ ಇಲಿಯಾಸ್ ಪಟೇಲ್, ಪರಶುರಾಮ ಮಾಳಹಳ್ಳಿಕರ್, ವೀರೇಶ ಟಕ್ಕಳಕಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಡಾ ಯಂಕನಗೌಡ ಪಾಟೀಲ ನಿರೂಪಿಸಿ ವಂದಿಸಿದರು. ಪ್ರಮುಖರಾದ ಸಾಹಿತಿ ನಿಂಗನಗೌಡ ದೇಸಾಯಿ, ಮಹಾದೇವಪ್ಪ ವಜ್ಜಲ್, ಅಭಿಷೇಕ್ ಪಾಟೀಲ ನಿಜಗುಣಿ ವಿಶ್ವಕರ್ಮ, ಶ್ರೀಮಠದ ಸದ್ಭಕ್ತರು ಸೇರಿದಂತೆ ಮಹಿಳೆಯರು, ಮಕ್ಕಳು, ಉಪಸ್ಥಿತರಿದ್ದರು.

