೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಚಿನ್ ಕೌಶಿಕ್ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತಮ್ಮದಲ್ಲದ ಸಮಸ್ಯೆಗಳನ್ನು ತಮ್ಮದೇ ಎಂದು ಭಾವಿಸಿ ಪಕ್ಷಗಾರರಿಗೆ ನ್ಯಾಯ ಕೊಡಿಸುವ ಕಾರ್ಯ ಮಾಡುವ ಏಕೈಕ ವೃತ್ತಿ ವಕೀಲಿ ವೃತ್ತಿ ಮಾತ್ರ ಎಂದು ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಚಿನ್ ಕೌಶಿಕ್ ಅವರು ಹೇಳಿದರು.
ಇಲ್ಲಿನ ನ್ಯಾಯವಾದಿಗಳ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಕೀಲರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ತಮ್ಮ ಪಕ್ಷಗಾರರಿಗೆ ನ್ಯಾಯ ಕೊಡಿಸಲು ಪ್ರತೀ ದಿನ ಅಭ್ಯಾಸದಲ್ಲಿ ನಿರತರಾಗಿ, ನಾಳೆ ದಿನದ ಪ್ರಕರಣದಲ್ಲಿ ನಾನೇನು ಮಾಡಬೇಕು, ಹೇಗೆ ನಾನು ಈ ಪ್ರಕರಣವನ್ನು ಗೆಲ್ಲಬೇಕು ಎಂಬ ಬಗ್ಗೆ ಪೂರ್ವ ತಯಾರಿ ಮಾಡಿಕೊಳ್ಳುವಲ್ಲಿ ಸಾಕಷ್ಟು ಒತ್ತಡಗಳನ್ನು ಅನುಭವಿಸುವ ಎಲ್ಲ ವಕೀಲರದ್ದು ನೈತಿಕತೆ, ಪ್ರಾಮಾಣಿಕತೆ, ಸತ್ಯ ನಿಷ್ಟೆ-ಈ ಮೌಲ್ಯಗಳನ್ನು ಕಾಪಾಡುವ ಬಹುದೊಡ್ಡ ಕರ್ತವ್ಯವೂ ಕೂಡ ಇದೆ. ಹಾಗಾಗಿ ಎಲ್ಲ ವಕೀಲರು ತಮ್ಮ ಆರೋಗ್ಯದ ಕಡೆಗೆ ಗಮನ ಕೊಡುವಂತೆ ಕಿವಿಮಾತು ಹೇಳಿದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಅವರು ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೆಚ್ಚಾಗಿ ವಕೀಲ ಬಾಂಧವರು ಭಾಗಿಯಾಗಿದ್ದರು ಎಂದು ಹೇಳಿಕೊಳ್ಳಲು ಹೆಮ್ಮೆ ಆಗುತ್ತದೆ. ವಕೀಲರು ಸಮಾಜಮುಖಿಯಾಗಿ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ತಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತ ಬಂದಿರುವದರಿಂದ ಸಮಾಜದಲ್ಲಿ ವಕೀಲರಿಗೆ ಸಾಕಷ್ಟು ಗೌರವ ಇದೆ. ಆ ಗೌರವವನ್ನು ನಾವು ನೀವೆಲ್ಲ ಉಳಿಕೊಂಡು ಹೋಗೋಣ ಎಂದರು.
ಹಿರಿಯ ವಕೀಲರಾದ ಎಂ.ಎಚ್.ಹಾಲಣ್ಣವರ ಅವರು ಮಾತನಾಡಿ, ವಕೀಲಿ ವೃತ್ತಿಯಲ್ಲಿ ಅತ್ಯಂತ ಪ್ರಮಾಣಿಕವಾಗಿದ್ದ ಡಾ.ಬಾಬುರಾಜೇಂದ್ರ ಪ್ರಸಾದ ಅವರ ಹುಟ್ಟುಹಬ್ಬದ ನೆನಪಿಗೋಸ್ಕರವಾಗಿ ವಕೀಲರ ದಿನಾಚಣೆಯನ್ನು ಆಚರಿಸಲಾಗುತ್ತದೆ. ವಕೀಲರದ್ದು ಸದಾ ಒತ್ತಡದ ಜೀವನ. ಪಕ್ಷಗಾರರು ತಮ್ಮ ದಾಖಲೆಗಳನ್ನು ವಕೀಲರಿಗೆ ನೀಡಿ ನಿಶ್ಚಿಂತೆಯಿಂದ ಇರಲು ತಮ್ಮ ಎಲ್ಲ ಭಾರವನ್ನು ವಕೀಲರ ಮೇಲೆ ಹಾಕಿರುತ್ತಾರೆ. ಹಾಗಾಗಿ ವಕೀಲರು ಯಾವತ್ತೂ ಅಲಕ್ಷ್ಯ ಮಾಡಬಾರದು. ನ್ಯಾಯದಾನ ಪ್ರಕ್ರೀಯೆಯಲ್ಲಿ ವಕೀಲರೇನಾದರೂ ನಿರ್ಲಕ್ಷ ಮಾಡಿದಲ್ಲಿ ಒಂದು ಕುಟುಂಬವನ್ನು ಬಲಿಕೊಟ್ಟಂತಾಗುತ್ತದೆ ಎಂದರು.
ಎಸ್.ಎಸ್.ಹೂಗಾರ, ರವಿ ನಾಲತವಾಡ, ಜಯಾ ಸಾಲೀಮಠ ವಕೀಲರುಗಳು ಮಾತನಾಡಿದರು. ಕಾರ್ಯಕ್ರಮವನ್ನು ಕೇಕ್ ಕತ್ತರಿಸುವ ಮೂಲಕ ಪ್ರಾರಂಭಿಸಲಾಯಿತು. ನಿವೃತ್ತ ನ್ಯಾಯವಾದಿ ಬಿ.ವಿ.ನಾಡಗೌಡರ, ಹಿರಿಯ ನ್ಯಾಯವಾದಿ ಎಂ.ಎಚ್.ಹಾಲಣ್ಣವರ ಇವರುಗಳನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ, ಸಿವಿಲ್ ನ್ಯಾಯಾಧೀಶರಾದ ರಾಮಮೂರ್ತಿ ಎನ್, ಅಪರ್ ಸರ್ಕಾರಿ ವಕೀಲ ಎಚ್.ಎಲ್.ಸರೂರ, ಸಹಾಯಕ ಸರ್ಕಾರಿ ಅಭಿಯೋಜಕ ಬಸವರಾಜ ಆಹೇರಿ, ಅತಿಥಿಗಳಾಗಿದ್ದರು. ಹಿರಿಯ ವಕೀಲರಾದ ಜೆ.ಎ.ಚಿನಿವಾರ, ಬಿ.ಆರ್.ನಾಡಗೌಡರ, ಎಂ.ಎಚ್.ಕ್ವಾರಿ, ಎಂ.ಎ.ಮುದ್ದೇಬಿಹಾಳ, ಆರ್.ಬಿ.ಪಾಟೀಲ, ಎಸ್.ಬಿ.ಬಾಚಿಹಾಳ, ಎಸ್.ಆರ್.ಸಜ್ಜನ, ಎಚ್.ವಾಯ್.ಪಾಟೀಲ, ಎನ್.ಜಿ.ಕುಲಕರ್ಣಿ, ಎಂ.ಆರ್.ಪಾಟೀಲ, ಸಿ.ಎಂ.ಅಸ್ಕಿ, ವಿ.ಜಿ.ಮದರಕಲ್ಲ ನ್ಯಾಯವಾದಿಗಳಾದ ಎಸ್.ಆರ್.ಜೋಗಿ, ಚೇತನ ಶಿವಶಿಂಪಿ, ಬಿ.ಎ.ಚಿನಿವಾರ, ಬುಡ್ಡಾ ನಾಯ್ಕೋಡಿ, ಬಸಣ್ಣ ಮುಂದಿನಮನಿ, ಎಸ್.ಎಂ.ಕಿಣಗಿ, ಪಿ.ಬಿ.ಗುಡಗುಂಟಿ, ಸಾಬಣ್ಣ ಚಳ್ಳಗಿ, ವಿರೇಶ ಹಿರೇಮಠ, ಯಾಸೀನ ಬಿದರಕುಂದಿ, ಆರ್.ಎಂ.ಢವಳಗಿ, ಎನ್.ಆಯ್.ಕೇಸಾಪೂರ, ಎಂ.ಎಲ್.ರಿಸಾಲದಾರ, ಎಚ್.ಎಚ್.ಬಡಿಗೇರ, ಎಂ.ಬಿ.ಹುಡೇದ, ಎನ್.ಎಸ್.ಪಾಟೀಲ, ಎನ್.ಬಿ.ಮುದ್ನಾಳ, ಬಿ.ವಾಯ್.ಮೇಟಿ, ಎಂ.ಬಿ.ಹೊಸಮನಿ, ಎಂ.ಎ.ಲಿಂಗಸೂರ, ಹಸೀನಾ ಅನಂತಪೂರ, ಶ್ರೀದೇವಿ ರಾಜೂರ, ರೇಣುಕಾ ಪಾಟೀಲ, ಸಾವಿತ್ರಿ ಚೌವ್ಹಾಣ, ಪೂರ್ಣಿಮಾ ಮೇಟಿ, ರಕ್ಷಿತಾ ಕುಲಕರ್ಣಿ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ನ್ಯಾ.ಸಂಘದ ಪ್ರ.ಕಾರ್ಯದರ್ಶಿ ಪಿ.ಬಿ.ಗೌಡರ ಕಾರ್ಯಕ್ರಮವನ್ನು ನಿರ್ವಹಿಸಿದರು.
“ಕಾನೂನು ಒಂದು ಪುಸ್ತಕವಲ್ಲ. ಅದು ಸಮಾಜದ ನೈತಿಕ ದಿಕ್ಕು. ಆ ದಿಕ್ಕನ್ನು ಜನತೆಗೆ ಸರಿಯಾಗಿ ತೋರಿಸುವಲ್ಲಿ ವಕೀಲರ ಪಾತ್ರ ಪ್ರಮುಖವಾದದ್ದು. ನ್ಯಾಯಕ್ಕಾಗಿ ನಮ್ಮ ಧ್ವನಿ ಸದಾ ನೇರ, ನಿರ್ಭಯ ಮತ್ತು ನಿಷ್ಪಕ್ಷಪಾತವಾಗಿರಬೇಕು.”
– ಸಚಿನ್ ಕೌಶಿಕ
೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು
ನಮ್ಮ ದೇಶದ ನ್ಯಾಯ ವ್ಯವಸ್ಥೆಯ ಬಲವಾದ ಕಂಬಗಳು ನಾವು. ಜನತೆಯ ಹಕ್ಕುಗಳನ್ನು ಕಾಪಾಡುವದು, ದುರ್ಬಲರಿಗೆ ಧೈರ್ಯ ನೀಡುವದು, ಮತ್ತು ನ್ಯಾಯವನ್ನು ಸಾಮಾನ್ಯರಿಗೆ ತಲುಪಿಸುವದು ನಮ್ಮ ಪವಿತ್ರ ಕರ್ತವ್ಯ. ಈ ಕರ್ತವ್ಯವನ್ನು ಎಲ್ಲ ನ್ಯಾಯವಾದಿಗಳೂ ತಪ್ಪದೇ ಪಾಲಿಸೋಣ.
– ಶಶಿಕಾಂತ ಮಾಲಗತ್ತಿ ಅಧ್ಯಕ್ಷರು, ನ್ಯಾಯವಾದಿಗಳ ಸಂಘ.

