ಲೇಖನ
– ಬಸವರಾಜ ಹೂಗಾರ
ಹವ್ಯಾಸಿ ಬರಹಗಾರರು
ಆಲಮೇಲ
ಮೊ: 9740207097
ಉದಯರಶ್ಮಿ ದಿನಪತ್ರಿಕೆ
ಭಾರತದ ರಾಜಕೀಯ ಇತಿಹಾಸವು ಕೆಲವರನ್ನು ನಾಯಕರೆಂದು ಗುರುತಿಸುತ್ತದೆ, ಕೆಲವರನ್ನು ಐಕಾನ್‌ಗಳೆಂದು ನೋಡುತ್ತದೆ. ಆದರೆ ಅಟಲ್ ಬಿಹಾರಿ ವಾಜಪೇಯಿ ಅವರು ನಾಯಕನಷ್ಟೇ ಅಲ್ಲ, ಅವರು ಒಂದು ಮೌಲ್ಯಗಳ ಯುಗ. ಅವರ ಹೆಸರನ್ನು ಉಚ್ಚರಿಸಿದಾಗಲೂ ದೇಶದ ನಾಗರಿಕರಿಗೆ ಒಂದು ವಿಶಿಷ್ಟವಾದ ಮೌನ-ಭಾವನೆ ಮೂಡುವುದು. ಅದು ಭಯದಿಂದ ಹುಟ್ಟಿದ ಮೌನವಲ್ಲ, ಗೌರವದಿಂದ ತುಂಬಿದ ಮೌನ.
ಅವರನ್ನು “ಅಜಾತಶತ್ರು” ಎಂದು ಕರೆಯುವುದು ಭಾವೋದ್ರೇಕದ ಪದವಲ್ಲ, ಅದು ವಾಜಪೇಯಿಯವರ ವ್ಯಕ್ತಿತ್ವದ ನಿಖರ ವಾಸ್ತವ್ಯ.
ನೆಹರು-ಅಟಲ್: ರಾಜಕೀಯ ಮೀರಿದ ಬಂಧ
ಅಟಲ್‌ಜಿಯವರ ರಾಜಕೀಯದ ದೃವತಾರೆಯಂತೆ ಇಂದು ನೆನಪಾಗುವುದು ಅವರ ನೆಹರುರವರೊಂದಿಗೆ ಹೊಂದಿದ್ದ ಒಡನಾಟ.
1957ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಮೊದಲಬಾರಿ ಲೋಕಸಭೆಗೆ ಆಯ್ಕೆಯಾದಾಗ ಅವರು ವಿರೋಧ ಪಕ್ಷದ ಯುವ ನಾಯಕ. ಆದರೆ ಅವರ ವಾಗ್ಮಿಯತೆ, ಅವರ ಸ್ವಚ್ಛ ರಾಜಕೀಯ ಧಾಟಿ, ಮತ್ತು ದೇಶದ ಬಗ್ಗೆ ಅವರ ಪ್ರೀತಿ ಇವು ನೆಹರುರವರ ಗಮನ ಸೆಳೆದಿದ್ದವು.
ಒಂದು ಬಾರಿ ಲೋಕಸಭೆಯಲ್ಲಿ ಅಟಲ್ ಜೀ ಉತ್ಸಾಹಪೂರ್ಣವಾಗಿ ಮಾತನಾಡಿದ ನಂತರ
ಜವಾಹರಲಾಲ್ ನೆಹರುರವರು ತಮ್ಮ ಮಂತ್ರಿ ಮಂಡಲ ಕ್ಕೆ ಹೇಳಿದ ಪ್ರಸಿದ್ಧ ವಾಕ್ಯ “ಈ ಯುವಕ ಒಮ್ಮೆ ಭಾರತದ ಪ್ರಧಾನ ಮಂತ್ರಿಯಾಗುತ್ತಾನೆ.”
ರಾಜಕೀಯವಾಗಿ ಪ್ರತಿಪಕ್ಷದಲ್ಲಿದ್ದ ಯುವಕನಲ್ಲಿರುವ ರಾಷ್ಟ್ರನಾಯಕತ್ವದ ಕಿರಣವನ್ನು ಗುರುತಿಸುವಷ್ಟು ದೊಡ್ಡ ಮನಸ್ಸು ನೆಹರುರವರದು ಮತ್ತು ಆ ಭವಿಷ್ಯವಾಣಿಯನ್ನು ಗೌರವಿಸುವಷ್ಟು ಸಾಧನೆ ಅಟಲ್‌ಜಿಯವರದು.
ಆ ದಿನದಿಂದ ನೆಹರು ಅಟಲ್ ಸಂಬಂಧ ರಾಜಕೀಯದ ಗಡಿಗಳನ್ನು ಮೀರಿ ಮಾನವೀಯ ಗೌರವದ ಸೇತುವೆಯಾಗಿತ್ತು.
ನೆಹರುರವರ ಭಾವಚಿತ್ರವನ್ನು ಮತ್ತೆ ಅಳವಡಿಸಿದ ಅಟಲ್ ಜೀ
ರಾಜಕೀಯದ ಪೈಪೋಟಿಗಳು ಹೆಚ್ಚಾದಾಗ ಸಣ್ಣ ಘಟನೆಗಳೇ ದೊಡ್ಡ ತತ್ವಪಾಠಗಳನ್ನು ನೀಡುತ್ತವೆ.
ಒಮ್ಮೆ ಜನತಾ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದಾಗ (1977), ಕೆಲವು ಸ್ಥಳಗಳಲ್ಲಿ ನೆಹರುರವರ ಚಿತ್ರಗಳನ್ನು ತೆಗೆದುಹಾಕಲಾಗಿತ್ತು.
ಆದರೆ ಅಟಲ್ ಬಿಹಾರಿ ವಾಜಪೇಯಿ ರಾಜಕೀಯ ಪಕ್ವತೆಯ ಮತ್ತು ಸಂಸ್ಕಾರದ ಜೀವಂತ ಪ್ರತೀಕ ಅವರು ಅದನ್ನು ಒಪ್ಪಲಿಲ್ಲ.
ಅವರು ಸ್ವತಃ ಮುಂದೆ ಬಂದು, ನೆಹರುರವರ ಭಾವಚಿತ್ರವನ್ನು ಮರುಸ್ಥಾಪಿಸಿ, ಒಂದು ಅದ್ಭುತವಾದ ಮಾತು ಹೇಳಿದರು..
“ಇದು ಕೇವಲ ಕಾಂಗ್ರೆಸ್‌ನ ನಾಯಕನ ಚಿತ್ರವಲ್ಲ.
ಇದು ಭಾರತದ ಇತಿಹಾಸದ ಒಂದು ಅಧ್ಯಾಯ.
ದೇಶಪ್ರೇಮಕ್ಕೆ ಪಕ್ಷದ ಗಡಿ ಇರುವುದಿಲ್ಲ.”
ಇದು ಕೇವಲ ಒಂದು ಚಿತ್ರ ಮರುಸ್ಥಾಪನೆಯಲ್ಲ
ಭಾರತೀಯ ಪ್ರಜಾಪ್ರಭುತ್ವಕ್ಕೆ ಅವರು ಹಚ್ಚಿದ ಸಂಸ್ಕೃತಿ ಮತ್ತು ಸೌಜನ್ಯದ ಗುರುತು.
ಇತ್ತಿಚಿನ ರಾಜಕೀಯದ ಶಬ್ದ-ಗದ್ದಲದಲ್ಲಿ, ಆ ಒಂದು ಘಟನೆ ಇಂದಿಗೂ ಶಿಸ್ತು, ಸಹಾನುಭೂತಿ ಮತ್ತು ಗೌರವ ಪಾಲಿಟಿಕ್ಸ್ ಗೆ ಮಾದರಿಯಾಗಿದೆ.
ಕವಿಯ ಕಣ್ಣು, ರಾಷ್ಟ್ರನಾಯಕನ ದೃಷ್ಟಿ
ಅಟಲ್ ಬಿಹಾರಿಯವರು ರಾಜಕಾರಣಿಗಳು ಮಾತನಾಡುವ ರೀತಿಯನ್ನು ಬದಲಿಸಿದರು.
ಅವರು ವಾಕ್ಚಾತುರ್ಯದಿಂದ ವಿರೋಧಿಗೆ ತಿರುಗೇಟು ಕೊಟ್ಟರೂ, ಪ್ರತಿಯೊಂದು ವಾಕ್ಯದಲ್ಲೂ
ಕರುಣೆ, ಬದ್ಧತೆ, ದೂರದೃಷ್ಟಿ, ರಾಷ್ಟ್ರ ಪ್ರೇಮ, ನಿಲುವು ಇವೆ.
ಅವರ ಜನಪ್ರಿಯತೆ ಭಾಷಣಗಳಿಂದ ಮಾತ್ರವಲ್ಲ,
ಅವರ ಮೌನದಿಂದಲೂ ಬಂದದ್ದು.
ಮೌನದಲ್ಲೂ ಅಂತರ್ಜ್ಞಾನ,
ಭಾಷಣದಲ್ಲಿ ಕಾವ್ಯ,
ಆಡಳಿತದಲ್ಲಿ ದೃಢತೆ
ಈ ಮೂರು ಸೇರಿ ಅಟಲ್‌ಜಿಯವರನ್ನು ರಾಷ್ಟ್ರಪುರುಷರ ಸಾಲಿಗೆ ಕರೆದೊಯ್ದವು.
ಪೋಖ್ರಾನ್: ಭಾರತದ ದಿಟ್ಟತನದ ಘೋಷಣೆ
1998ರ ಪೋಖ್ರಾನ್ ಪರಮಾಣು ಪರೀಕ್ಷೆಯು ವಾಜಪೇಯಿ ಅವರ ದಿಟ್ಟ ಮನೋಭಾವದ ಅತ್ಯುತ್ತಮ ಉದಾಹರಣೆ.

ಅಂತರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಒತ್ತಡ, ನಿರ್ಬಂಧಗಳ ಭೀತಿ, ಆದರೂ ಅಟಲ್ ಜೀ ಹೇಳಿದರು “ಭಾರತದ ಸುರಕ್ಷತೆ, ಭಾರತದ ಭವಿಷ್ಯ,
ನನಗೆ ಎಲ್ಲ ರಾಜಕೀಯ ಲಾಭ-ನಷ್ಟಗಳಿಗಿಂತ ಮೇಲಿನದ್ದು.”
ಭಾರತದ ಪರಮಾಣು ಸಾಮರ್ಥ್ಯ ವಿಶ್ವದ ಮುಂದೆ ಗರ್ಜಿಸಿತು ಅಟಲ್‌ಜಿಯವರ ಮೃದುನಗೆಯ ಹಿಂದೆ ಇದ್ದ ಉಕ್ಕಿನ ಧೈರ್ಯದಿಂದ.
ಲಾಹೋರ್ ಬಸ್ ಯಾತ್ರೆ: ಶಾಂತಿಯ ರಾಜತಾಂತ್ರಿಕ ಘೋಷ
ಇತಿಹಾಸವು ಕೆಲವರನ್ನು ಯೋಧರೆಂದು ಗುರುತಿಸುತ್ತದೆ, ಕೆಲವರನ್ನು ಶಾಂತಿದೂತರಾಗಿಯೂ.
ಅಟಲ್‌ಜಿಯವರಲ್ಲಿ ಎರಡೂ ಅಸ್ತಿತ್ವದಲ್ಲಿದ್ದವು.
1999ರಲ್ಲಿ ಅವರು ಲಾಹೋರ್ ಪ್ರಯಾಣಿಸಲು ತೆಗೆದುಕೊಂಡ ನಿರ್ಧಾರ ಒಂದು ರಾಜಕೀಯ ಜೂಜು ಅಲ್ಲ, ಅದು ಮಾನವೀಯತೆಯ ಮತ್ತು ರಾಜತಾಂತ್ರಿಕ ಧೈರ್ಯದ ಕಾವ್ಯ.
ಈ ಯಾತ್ರೆ ತಕ್ಷಣ ಶಾಂತಿ ಕೊಟ್ಟಿಲ್ಲ; ಕಾರ್ಗಿಲ್ ಯುದ್ಧವೂ ಅದರ ನಂತರವೇ ನಡೆದಿದೆ.
ಆದರೆ ಶಾಂತಿಯ ಸಂದೇಶ ಹೇಳುವ ನಾಯಕತ್ವದ ಸ್ತಂಭವಾಗಿ, ಈ ಯಾಣ ಇತಿಹಾಸದಲ್ಲಿ ಬೇರೂರಿದೆ.
“ಕಾರ್ಗಿಲ್‌ನ ಕಠೋರ ಪರ್ವತಗಳಲ್ಲಿ ಉದಯಿಸಿದ ಅಟಲ್ ನಾಯಕತ್ ಶಾಂತಿಯ ಮನಸ್ಸು, ಯುದ್ಧದ ದೃಢತೆ”
ಕಾರ್ಗಿಲ್ ಯುದ್ಧವು ಅಟಲ್‌ಜಿಯವರ ನಾಯಕತ್ವದ ನಿಜದ ಪರೀಕ್ಷೆ.
ಅವರು ಸೇನೆಗೆ ಸಂಪೂರ್ಣ ಮುಕ್ತ ಸ್ವಾತಂತ್ರ್ಯ ನೀಡಿದರು,
ಆದರೆ ಅಂತರರಾಷ್ಟ್ರೀಯ ಗಡಿ ದಾಟದಂತೆ ಕಟ್ಟುನಿಟ್ಟಿನ ರಾಜತಾಂತ್ರಿಕ ನಿಯಮ ಪಾಲಿಸಿದರು.
ದೇಶದ ಯೋಧರ ಧೈರ್ಯಕ್ಕೆ ಸದಾ ಮನ್ನಣೆ ನೀಡುತ್ತಾ ಹೇಳಿದರು.. “ನಾವು ಯುದ್ಧಹಾಕಲು ಹೊರಟ ದೇಶವಲ್ಲ.
ಆದರೆ ಶಾಂತಿಗೆ ಕತ್ತರಿ ತೋರಿಸುವವರನ್ನು ಮೌನದಿಂದ ಬಿಡುವುದಿಲ್ಲ.”
ಈ ಸಮತೋಲನ
ಶಾಂತಿಯ ಆತ್ಮ ಮತ್ತು ಯುದ್ಧಕಾಲದ ದೃಢ ಸ್ಫೂರ್ತಿ
ವಾಜಪೇಯಿಯವರ ನಾಯಕತ್ವದ ವಿಶಿಷ್ಟ ಗುಣ.
ಅಭಿವೃದ್ಧಿ: ಹೆದ್ದಾರಿ, ಗ್ರಾಮ, ಭವಿಷ್ಯ
ವಾಜಪೇಯಿಯವರ ಆಡಳಿತಕಾಲದಲ್ಲಿ
ಗೋಲ್ಡನ್ ಕ್ವಾಡ್ರಿಲಾಟರಲ್
ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆ
ಭಾರತವನ್ನು ಕೇವಲ ಸಂಪರ್ಕಿಸಲಿಲ್ಲ;
ಅವು ಭಾರತದ ಆರ್ಥಿಕ ಭವಿಷ್ಯವನ್ನು ಸುವರ್ಣ ಅಕ್ಷರದಲ್ಲಿ ಬರೆದವು.
ಇಂದು ದೇಶ ಕಾಣುತ್ತಿರುವ ಸಂಚಾರ–ಅಭಿವೃದ್ಧಿ ಮೂಲಸೌಕರ್ಯಗಳು
ಅಟಲ್ ಜೀ ಅವರ ನಿಜವಾದ ಮೌನಸಾಧನೆ.
ರಾಜಕಾರಣಿಗೆ ಮೀರಿದ ವ್ಯಕ್ತಿ: ಮೇರು ವ್ಯಕ್ತಿತ್ವದ ಅಟಲ್
ವಾಜಪೇಯಿ ವಿರೋಧ ಪಕ್ಷದ ನಾಯಕರಿಗೆ ಸದಾ ಗೌರವ ತೋರಿಸಿದರು.
ಕೇವಲ ನೆಹರುರವರ ಚಿತ್ರ ಮರುಸ್ಥಾಪನೆಗಷ್ಟೇ ಅಲ್ಲ,
ಅವರು ತಮ್ಮ ಜೀವನಪರ್ಯಂತ ಎಲ್ಲ ಪ್ರತಿಸ್ಪರ್ಧಿಗಳನ್ನು ಗೌರವಿಸಿದರು. ರಾಜಕೀಯಕ್ಕೆ ಸಂಸ್ಕೃತಿ ಅಂದ್ರೇನು?
ಅದಕ್ಕೆ ಅಟಲ್ ಜೀ ಜೀವಂತ ಉದಾಹರಣೆ.
ಅಜಾತಶತ್ರು – ಕಾಲಕ್ಕೂ ಮೀರಿದ ಮೌಲ್ಯ
ಅಟಲ್ ಬಿಹಾರಿ ವಾಜಪೇಯಿಯವರ ಪರಂಪರೆ ಒಂದು ಪಕ್ಷದ ಆಸ್ತಿಯಲ್ಲ.
ಅದು ಭಾರತದ ಸಂವಿಧಾನದ ಮೌಲ್ಯಗಳ ಶಿಲ್ಪ.
ಅದು ನಾಯಕತ್ವದ ಮಂಟಪದ ಸ್ಪರ್ಶ. ಅದು ರಾಜ್ಯಕಾರ್ಯದ ಗೌರವ.
ನೆಹರುರವರು ಅವರನ್ನು ಪ್ರಧಾನಮಂತ್ರಿಯಾಗುವವರು ಎಂದು ಭವಿಷ್ಯವಾಣಿ ಮಾಡಿದರು;
ಅಟಲ್ ಜೀ ಅವರು ಆ ಭವಿಷ್ಯವಾಣಿಯನ್ನೇ ಮೀರಿಸಿ
ದೇಶದ ಹೃದಯದಲ್ಲಿ ಪ್ರಧಾನ ಮಂತ್ರಿಯಾಗಿ ಉಳಿದುಕೊಂಡರು.
ಅಟಲ್ ಜೀ ಕೇವಲ ನಾಯಕನಲ್ಲ
ಅವರು ಒಂದು ಮಾನವೀಯತೆಯ ಗ್ರಂಥಾಲಯ, ರಾಜಕಾರಣದ ಸೌಜನ್ಯದ ಸಂಸ್ಕೃತಿಯ,
ರಾಷ್ಟ್ರಭಕ್ತಿಯ ಮೌನಗಾನ.
“ಸಮಯದ ಪುಸ್ತಕದಲ್ಲಿ ಪುಟಗಳು ಬದಲಾಗುತ್ತವೆ,
ಆದರೂ ಮೌಲ್ಯದ ಮಸಿಯಲ್ಲಿ ಬರೆದ ಹೆಸರುಗಳು
ಎಂದಿಗೂ ಮಾಸುವುದಿಲ್ಲ;
ಅಂತಹ ಅನಶ್ವರ ಅಕ್ಷರವೇ
ಪ್ರತಿ ಭಾರತೀಯರೊಳಗಿನ ಶಾಶ್ವತ ಅಟಲ್ ಜೀ.


