ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದ ಸಹಸ್ರಾರು ಭಕ್ತ ಸಮೂಹ | ವಿವಿಧೆಡೆ ಅನ್ನ ಸಂತರ್ಪಣೆ
ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಉತ್ತರಕರ್ನಾಟಕದ ದೊಡ್ಡ ಜಾತ್ರೆಗಳಲ್ಲಿ ಒಂದಾದ ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ ಆರಾಧ್ಯ ಧೈವವಾದ ಶ್ರೀಗುರು ವೀರಘಂಟೈ ಮಡಿವಾಳೇಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ರವಿವಾರ ನಸುಕಿನ ಜಾವ ೫ ಗಂಟೆಗೆ ಅಗ್ಗಿ ಉತ್ಸವ ಹಾಗೂ ಸಂಜೆ ೫ ಘಂಟೆಗೆ ಮೃಘಶಿರ ನಕ್ಷತ್ರದಲ್ಲಿ ಭಾರಿ ಜನಸ್ತೋಮದ ಜಯಘೋಷಗಳೊಂದಿಗೆ ವಿಜೃಂಭಣೆಯಿಂದ ಅದ್ದೂರಿಯಾಗಿ ಶ್ರೀಗುರು ವೀರಘಂಟೈ ಮಡಿವಾಳೇಶ್ವರರ ಜೋಡು ರಥೋತ್ಸವವು ನಡೆಯಿತು.
ರವಿವಾರ ನಸುಕಿನ ಜಾವ ವೇ.ಮೂ.ಮಲ್ಲಯ್ಯಮುತ್ಯಾ ಗದ್ದಿಗೆಮಠ ಅವರ ನೇತೃತ್ವದಲ್ಲಿ ದೇವಸ್ಥಾನದ ಸಂಪ್ರದಾಯದಂತೆ ಅಗ್ನಿಕುಂಡಕ್ಕೆ ವಿವಿಧ ವಾಧ್ಯಮೇಳ ಕಳಸಾರತಿಯೊಂದಿಗೆ ಐದು ಸುತ್ತು ಪೂಜಾ ಕೈಂಕರ್ಯವನ್ನು ನಡೆಸಿ ನಂತರ ಅಗ್ಗಿಯನ್ನು ಹಾಯಲಾಯಿತು. ನಂತರ ಉಚ್ಚಾಯಿ ಉತ್ಸವ, ವೀರಂಘಂಟೈ ಮಡಿವಾಳೇಶ್ವರರ ಕರ್ತೃ ಗದ್ದಿಗೆಗೆ ಮಹಾರುದ್ರಾಭಿಷೇಕ, ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು, ಬೆಳ್ಳಿಗ್ಗೆ ೯ ಗಂಟೆಯಿಂದ ಗ್ರಾಮದ ಸಾವಿರಾರು ಯುವಪಡೆಯ ಭಕ್ತ ಸಮೂಹ ಹಿರಿಯರ ಮಾರ್ಗದರ್ಶನದಲ್ಲಿ ಪದ್ದತಿಯಂತೆ ರಥಕ್ಕೆ ಎಣ್ಣೆಯನ್ನು ಹಚ್ಚಿ ನಂತರ ರಥವನ್ನು ಶೃಂಗರಿಸುವ ಮೂಲಕ ಧನ್ಯತಾಭಾವವನ್ನು ಮೆರೆದರು.
ಉತ್ತರ ಕರ್ನಾಟಕದ ವಿವಿದ ಜಿಲ್ಲೆ ಹಾಗೂ ನೆರೆಯ ಆಂಧ್ರ, ಮಹರಾಷ್ಟç, ಗೋವಾದಿಂದ ಆಗಮಿಸಿದ ಭಕ್ತಾದಿಗಳು ನಸುಕಿನ ಜಾವದಿಂದಲೇ ದೇವರಿಗೆ ಧೀಡನಮಸ್ಕಾರ, ಉರುಳು ಸೇವೆ ಮಾಡಿ ಹರಕೆ ತೀರಿಸಿ ನಂತರ ಸರತಿ ಸಾಲಿನಲ್ಲಿ ನಿಂತು ಗರುವೀರಘಂಟೈ ಮಡಿವಾಳೇಶ್ವರರ ಜಾಗ್ರತ ಸ್ಥಳದ ಗದ್ದುಗೆಗೆ ಮತ್ತು ಪಂಚರಂಗ ಸಂಸ್ಥಾನ ಗದ್ದಿಗೆಮಠದ ಪೀಠಾಧ್ಯಕ್ಷರಾದ ಗುರುಮಡಿವಾಳೇಶ್ವರ ಶಿವಾಚಾರ್ಯರರ ದರ್ಶನ ಪಡೆದುಕೊಂಡು ಪುನೀತರಾದರು. ಸಂಪ್ರದಾಯದಂತೆ ಭಕ್ತಬಳಗ ಜೋಡು ಎಡೆ ಸಲ್ಲಿಸಿ ಜೋಡುಕೊಡೆ, ಜೋಡುಗದ್ದಿಗೆ, ಜೋಡು ಕಳಸ, ಜೋಡು ರಥಗಳು, ಜೋಡು ಪಾದಗಟ್ಟಿಗೆಗೆ ಪೂಜೆಸಲ್ಲಿಸಿದರು. ಸುಮಾರು ೨ ಸಾವಿರಕ್ಕು ಹೆಚ್ಚು ಜನ ಈ ಸಂದರ್ಭದಲ್ಲಿ ಧೀಡ್ ನಮಸ್ಕಾರ ಹಾಕಿ ತಾವು ಬೇಡಿಕೊಂಡ ಹರಕೆಯನ್ನು ತೀರಿಸಿದರು.
ಸಂಜೆ ೪:೩೦ ಘಂಟೆಗೆ ಸಕಲ ವಾದ್ಯಮೇಳಗಳೊಂದಿಗೆ ಶ್ರೀಗಳು ವಿಧಿ ವಿಧಾನದಂತೆ ಎರಡೂ ರಥಗಳಿಗೆ ಪೂಜೆ ಸಲ್ಲಿಸಿದ ನಂತರ ಪಂಚರಂಗ ಸಂಸ್ಥಾನ ಗದ್ದಿಗೆಮಠದ ಗುರುಮಡಿವಾಳೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು, ಗುರುವೀರಘಂಟೈ ಮಡಿವಾಳೇಶ್ವರ ದೇವಸ್ಥಾನದಿಂದ ಜೋಡುಗುಡಿಯ ಪಾದಗಟ್ಟೆಯವರೆಗೆ ಜೋಡು ರಥಗಳನ್ನು ಎಳೆಯಲಾಯಿತು, ಜೋಡು ರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡು ಎರಡೂ ರಥಗಳನ್ನು ಎಳೆಯುವುದರೊಂದಿಗೆ ಜಯಘೋಷಗಳನ್ನು ಮೊಳಗಿಸಿ ರಥಗಳಿಗೆ ಉತ್ತತ್ತಿ, ಬಾಳೆಹಣ್ಣು ಹಾರಿಸಿ ದೇವರ ಕೃಪೆಗೆ ಪಾತ್ರರಾದರು. ಈ ವೇಳೆ ಪಿಎಸ್‌ಐ ಸುರೇಶ ಮಂಟೂರ ಅವರ ನೇತೃತ್ವದಲ್ಲಿ ಪೋಲಿಸ್ ಇಲಾಖೆಯ ಸಿಬ್ಬಂದಿ ಸೂಕ್ತವಾವ ಬಿಗಿ ಬಂದೋಬಸ್ತ್ ಒದಗಿಸಿದ್ದರು.

ಜಾತ್ರೆ ವಿಶೇಷ ಉಳ್ಳಾಗಡ್ಡಿ ಬಜ್ಜಿ, ಬೆಲ್ಲದ ಜಿಲೇಬಿ
ಉತ್ತರ ಕರ್ನಾಟಕದಲ್ಲಿ ನಡೆಯುವ ಅತ್ಯಂತ ದೊಡ್ಡ ಜಾತ್ರೆಗಳಲ್ಲಿ ಕಲಕೇರಿಯ ಗುರು ವೀರಘಂಟೈ ಮಡಿವಾಳೇಶ್ವರ ಜಾತ್ರೆಯೂ ಕೂಡಾ ಒಂದಾಗಿದ್ದು ಸುಮಾರು ೧೫ ದಿನಗಳ ಕಾಲ ಈ ಜಾತ್ರೆ ನಡೆಯುತ್ತದೆ. ಜಾತ್ರೆ ವಿಶೇಷ ತಿನಿಸು ಅಂದರೆ ಉಳ್ಳಾಗಡ್ಡಿ ಬಜ್ಜಿ ಮತ್ತು ಬೆಲ್ಲದ ಜಿಲೇಬಿ. ಜಾತ್ರೆಯಲ್ಲಿ ಕನಿಷ್ಟ ೧೦೦-೧೫೦ ದೊಡ್ಡ ಪ್ರಮಾಣದ ಜಿಲೇಬಿ ಅಂಗಡಿಗಳಲ್ಲಿ ಜಾತ್ರೆಗೆ ಬಂದ ಯಾತ್ರಿಕರು ಜಿಲೇಬಿಯನ್ನು ಖರೀದಿಸಿ ಅದರ ಸವಿಯನ್ನು ಕುಟುಂಬ ಸಮೇತರಾಗಿ ಸವಿದು ಸಂತುಷ್ಟರಾದರು. ಕಲಕೇರಿ ಸುತ್ತಮುತ್ತಲಿನ ಸುಮಾರು ೪೦-೫೦ ಹಳ್ಳಿಗಳ ಜನರು ಅಲಂಕೃತ ಎತ್ತಿನಗಾಡಿಯಲ್ಲಿ ಜಾತ್ರೆಗೆ ಆಗಮಿಸುತ್ತಿರುವದು ಎಲ್ಲರ ಗಮನಸೆಳೆಯಿತು.
ಅನ್ನಸಂತರ್ಪಣೆ
ಜಾತ್ರಾ ನಿಮಿತ್ಯವಾಗಿ ಯುವಕರು, ಗೆಳೆಯರ ಬಳಗ ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ಶ್ರೀ ಯಲ್ಲಾಲಿಂಗ ಮಹಾರಾಜರ ಮಠದಲ್ಲಿ, ಪೋಲಿಸ್ ಠಾಣೆಯ ಮುಂಭಾಗ, ಆದರ್ಶ ನಗರ, ತಂಗಮ್ಮ ದೇಸಾಯಿ ಕಲ್ಯಾಣ ಮಂಟಪ ಮತ್ತು ಮಡಿವಾಳೇಶ್ವರ ದೇವಸ್ಥಾನದ ದಾಸೋಹದ ಮಹಾಮನೆಯಲ್ಲಿ ಸೇರಿದಂತೆ ವಿವಿದೆಡೆ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು ಜೊತೆಗೆ ಸ್ಥಳಿಯ ಗ್ರಾಪಂ ವತಿಯಿಂದ ಅಲ್ಲಲ್ಲಿ ಜನರಿಗೆ ತೊಂದರೆಯಾಗದಂತೆ ಕುಡಿಯುವ ನೀರಿನ ವ್ಯವಸ್ತೆಯನ್ನು ಕೈಗೊಳ್ಳಲಾಗಿತ್ತು.

