ವಿಧಾನಮಂಡಲದ ಅಧಿವೇಶನದಲ್ಲಿ ಮತ್ತೊಮ್ಮೆ ಧ್ವನಿ ಏತ್ತಿದ ಎಂಎಲ್ಸಿ ಸುನೀಲಗೌಡ ಪಾಟೀಲ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸ್ಥಳೀಯ ಸಂಸ್ಥೆಗಳಾದ ನಗರಸಭೆ ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಗೌರವಧನ ಹೆಚ್ಚಿಸುವಂತೆ ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಮತ್ತೊಮ್ಮೆ ವಿಧಾನಮಂಡಲದ ಅಧಿವೇಶನದಲ್ಲಿ ಧ್ವನಿ ಏತ್ತಿದ್ದಾರೆ.
ಮಂಗಳವಾರ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಪರಿಷತ ಕಲಾಪದಲ್ಲಿ ಶಾಸಕರು ಈ ಕುರಿತು ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ, ಗೌರವಧನ ಹೆಚ್ಚಳ ಕುರಿತು ಇತರ ರಾಜ್ಯಗಳ ಚುನಾಯಿತ ಪ್ರತಿನಿಧಿಗಳ ಗೌರವಧನ ದಾಖಲೆಗಳನ್ನು ನಿಯಮಾನುಸಾರ ಪರಿಶೀಲಿಸಲಾಗುತ್ತಿದೆ. ಅಲ್ಲದೇ, ಗೌರವಧನ ಹೆಚ್ಚಳ ಮಾಡುವ ಕುರಿತು ಇಲಾಖೆಯ ನಿರ್ದೇಶಕರು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ವಿಚಾರ ಪರಿಶೀಲನೆಯಲ್ಲಿದ್ದು, ಆರ್ಥಿಕ ಇಲಾಖೆಯ ಸಹಮತಿ ದೊರೆತ ನಂತರ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಲಿಖಿತ ಉತ್ತರ ನೀಡಿದ್ದರು.
ಈ ಕುರಿತು ಮತ್ತೆ ಪ್ರಸ್ತಾಪಿಸಿದ ಸುನೀಲಗೌಡ ಪಾಟೀಲ ಅವರು, ಕಳೆದ ಎರಡು ಅಧಿವೇಶನಗಳಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದೆ. ಆಗ ಸಚಿವರು ಆರ್ಥಿಕ ಇಲಾಖೆ ಇದಕ್ಕೆ ಒಪ್ಪಿಲ್ಲ ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳವುದಾಗಿ ಭರವಸೆ ನೀಡಿದ್ದರು. ಆದರೂ ಇವರೆಗೆ ಅದು ಜಾರಿಗೆ ಬಂದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ಕೆಳಹಂತದಲ್ಲಿ ಕಾರ್ಯನಿರ್ವಹಿಸುವ ನಗರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಗೆ ತಮಿಳುನಾಡು, ತೆಲಗಾಂಣ, ಹರಿಯಾಣ, ಮದ್ಯಪ್ರದೇಶ, ಮಹಾರಾಷ್ಟç ಹಾಗೂ ಕೇರಳ ರಾಜ್ಯಗಳಿಗೆ ಹೊಲಿಸಿದರೆ ಕರ್ನಾಟಕ ಪ್ರತಿನಿಧಿಗಳಿಗೆ ಅತೀ ಕಡಿಮೆ ಗೌರವಧನ ನೀಡಲಾಗುತ್ತದೆ. ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಸಚಿವರು, ಶಾಸಕರು ಹಾಗೂ ಸರಕಾರಿ ನೌಕರರ ವೇತನವನ್ನು ಹೆಚ್ಚಿಸಲಾಗಿದೆ. ಆದ್ದರಿಂದ ನಗರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಗೌರವಧನ ಹೆಚ್ಚಿಸಬೇಕು ಅಲ್ಲದೇ ಎಲ್ಲ ಸದಸ್ಯರಿಗೆ ಪಿಂಚಣಿ, ಉಚಿತ ಬಸ್ ಪಾಸ್ ಹಾಗೂ ಟೋಲ್ ಪ್ರೀ ಪಾಸ್ ನೀಡಬೇಕು ಎಂದು ಅವರು ಸದನದಲ್ಲಿ ಮತ್ತೊಮ್ಮೆ ಬಲವಾಗಿ ಪ್ರತಿಪಾದಿಸಿದರು.

