ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣದ ಆರಾಧ್ಯದೈವ ಶ್ರೀ ವೀರಭದ್ರೇಶ್ವರ ಜಾತ್ರೆಯು ಛಟ್ಟಿ ಅಮವಾಸ್ಯೆ ಬುಧವಾರ ದಿ. 19 ರಿಂದ 23 ರವರೆಗೆ 5 ದಿನಗಳ ಕಾಲ ಸಡಗರದಿಂದ ಜರುಗುವದು.
ದಿ. 19 ಬುಧವಾರದಂದು ನಸುಕಿನ 4 ಗಂಟೆಗೆ ಶ್ರೀ ಸಿದ್ದಯ್ಯಾ ಸ್ವಾಮಿ ಇವರಿಂದ ದೇವರಿಗೆ ಎಣ್ಣೆ ಮಜ್ಜಲು, ಮಹಾರುದ್ರಾಭಿಷೇಕ, ಕಾಶಿ ಬಟ್ಟೆ ತೊಡಿಸುವದು, ಹೂ ಏರಿಸುವುದು, ಮಹಾಮಂಗಳಾರುತಿ ಜರುಗುವದು. ಶ್ರೀ ವೀರಭದ್ರ ದೇವರಿಗೆ ಎಲೆ ಪೂಜೆ, ಹೋಮ-ಹವನ, ಇತ್ಯಾದಿ ಪೂಜೆಗಳು ಜರುಗುವದು.
ಮಧ್ಯಾಹ್ನ 3 ಗಂಟೆಗೆ ವೇದಮೂರ್ತಿ ಶ್ರೀ ಬಸಯ್ಯಶಾಸ್ತ್ರಿಗಳಿಂದ ಮಂತ್ರೋಪದೇಶಗಳೊಂದಿಗೆ ಅಗ್ನೀ ದೇವತೆಯ ಆವಾಹನೆ,ಪೂಜೆ,ಅಗ್ಗಿಪುಟುವು ಕಾರ್ಯಕ್ರಮವು ನಡೆಯುವುದು. ಸಾಯಂಕಾಲ 4 ಗಂಟೆಗೆ ಬಳ್ಳಾರಿಯ ಪ್ರಸಿದ್ದ ಕಲಾವಿದರಿಂದ ವೀರಗಾಸೆ ಕುಣಿತ. 5 ಗಂಟೆಯಿಂದ ಭಕ್ತಾದಿಗಳಿಂದ ದೀಪೋತ್ಸವ ಕಾರ್ಯಕ್ರಮ ಜರುಗುವುದು. ರಾತ್ರಿ 10:30 ಗಂಟೆಗೆ ವಿವಿಧ ಗ್ರಾಮಗಳಿಂದ ಬಂದ ಪ್ರಸಿದ್ದ ಪುರವಂತರು ಒಡುಪುಗಳನ್ನು ವೀರಭದ್ರದೇವರ ಲೀಲೆಗಳನ್ನು ಪುರವಂತರು ತಮ್ಮ ರುದ್ರಾವೇಷದೊಂದಿಗೆ ಹಾಡಿ ಕುಣಿಯುವ ಕಾರ್ಯಕ್ರಮ ಮತ್ತು ಸಾಂಭಾಳ ವಾದನ, ಪಲ್ಲಕ್ಕಿ ಸಮೇತ ಅಗ್ಗಿ ಪ್ರವೇಶ ಕಾರ್ಯಕ್ರಮ ಜರುಗುವದು. ನಂತರ ಪಲ್ಲಕ್ಕಿ ಉತ್ಸವ ಮತ್ತು ಶ್ರೀ ವೀರಭದ್ರೇಶ್ವರ ಹಾಗೂ ಶ್ರೀ ಕಾಳಮ್ಮದೇವಿಯ (ಲಗ್ನದ)ಅಕ್ಷತಾ ಕಾರ್ಯಕ್ರಮ ಜರುಗುವುದು.
ದಿ. 23 ರವಿವಾರದಂದು ಸಾಯಂಕಾಲ 5 ಗಂಟೆಗೆ ಭಕ್ತವೃಂದದಿಂದ ದೀಪೋತ್ಸವ ನಂತರ ರಾತ್ರಿ 9 ಗಂಟೆಗೆ ವಿವಿಧ ವಾದ್ಯ ಹಾಗೂ ಸಾಂಭಾಳ ವಾದನದೊಂದಿಗೆ ಪಲ್ಲಕ್ಕಿ ಮೇರವಣಿಗೆ ವೈಭವದಿಂದ ಜರುಗುವುದರೊಂದಿಗೆ 5 ದಿನಗಳ ಜಾತ್ರೆಗೆ ತೆರೆ ಬೀಳಲಿದೆ ಎಂದು ಶ್ರೀ ವೀರಭದ್ರೇಶ್ವರ ಸೇವಾ ಸಮೀತಿ ಅಧ್ಯಕ್ಷ ಸುರೇಶ ನಿಗಡಿ ಹಾಗೂ ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

