ಇಂದು (ನವ್ಹಂಬರ ೧೩) “ವಿಶ್ವ ದಯೆ ದಿನ” ದ ಪ್ರಯುಕ್ತ ಈ ವಿಶೇಷ ಲೇಖನ ಲೇಖನ
ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಬಸವಣ್ಣನವರ ವಚನ “ದಯವಿಲ್ಲದ ಧರ್ಮವಾವುದಯ್ಯಾ? ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ ದಯವೇ ಧರ್ಮದ ಮೂಲವಯ್ಯಾ ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ” ಎಂಬಂತೆ, ದಯೆ ಕೇವಲ ಮಾನವರಲ್ಲಿ ಮಾತ್ರವಲ್ಲ. ಎಲ್ಲಾ ಪ್ರಾಣಿಗಳಲ್ಲೂ ಇರಬೇಕು. ಎಲ್ಲಾ ಧರ್ಮಗಳು ದಯೆಯನ್ನು ಪ್ರತಿಪಾದಿಸುತ್ತವೆ ಮತ್ತು ದಯವೇ ಧರ್ಮದ ಮೂಲಾಂಶವಾಗಿದೆ ಎಂದು ಹೇಳಬಹುದು.
ಸಮಾಜದಲ್ಲಿ ಶಾಂತಿ, ಸಾಮರಸ್ಯ, ಭಾವೈಕ್ಯತೆ ಮತ್ತು ಧರ್ಮಸಹಿಂಷ್ಣುತೆ ಮತ್ತು ಮಾನವೀಯ ಸಂಬಂಧಗಳನ್ನು ಮತ್ತು ಸಮಷ್ಠಿಭಾವದ ಪರಿಸರವನ್ನು ಬೆಳೆಸಬೇಕಾದರೆ ದಯೆ, ಕರುಣೆ, ಕೃಪೆ ಮತ್ತು ಸಹಾನುಭೂತಿಯಂತಹ ಗುಣಗಳು ಅತಿ ಮುಖ್ಯ. ಜನರಲ್ಲಿ ಪರಸ್ಪರ ನಂಬಿಕೆ, ವಿಶ್ವಾಸ, ಗೌರವ ಮತ್ತು ಉತ್ತಮ ಸೌಹಾರ್ಧಯುತವಾದ ಸಂಬಂಧಗಳನ್ನು ದಯೆ ಎಂಬುದು ಉತ್ತೇಜಿಸುತ್ತದೆ. ಜೀವನದಲ್ಲಿ ದಯೆಯುಳ್ಳ ನಡತೆ ಮತ್ತು ವ್ಯಕ್ತಿತ್ವವನ್ನು ಹೊಂದಿರುವ ವ್ಯಕ್ತಿಯಲ್ಲಿರುವ ದಯಾ ಗುಣ ಸಂತೋಷ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.
ಆಚರಣೆಯ ಉದ್ಧೇಶ

ಮೊಟ್ಟಮೊದಲಿಗೆ ೧೯೯೮ ರಲ್ಲಿ ಟೋಕಿಯೋ ನಡೆದ ಸಮ್ಮೇಳನದಲ್ಲಿ ವಿಶ್ವ ದಯೆ ಆಂದೋಲನದಲ್ಲಿ ವಿಶ್ವದ ಸುಮಾರ ೨೭ ಕ್ಕಿಂತ ಹೆಚ್ಚು ದೇಶಗಳು ಈ ವಿಶ್ವ ದಯೆ ದಿನವನ್ನು ಪ್ರತಿವರ್ಷ ನವ್ಹಂಬರ ೧೩ ರಂದು ಆಚರಣೆಯನ್ನು ಪ್ರಾರಂಭಿಸಲು ತೀರ್ಮಾನಿಸಿದವು.
ಸಮಾಜದಲ್ಲಿ ಪ್ರೀತಿ-ಪ್ರೇಮ, ಸಂಬಂಧ, ಆತ್ಮೀಯತೆ, ಸಹಾನುಭೂತಿ, ದಯೆ, ಅನುಕಂಪ, ಕಕ್ಕುಲತೆ ಮತ್ತು ಕರುಣೆಯಂತಹ ಸಕಾರಾತ್ಮಕ ಜೀವನ ಮೌಲ್ಯಗಳನ್ನು ಮತ್ತು ಗುಣವಿಶೇಷತೆಗಳನ್ನು ಉತ್ತೇಜಿಸುವುದು ಈ ದಿನದ ಆಚರಣೆಯ ಪ್ರಮುಖ ಉದ್ಧೇಶವಾಗಿದೆ. ವಿಶ್ವದಾದ್ಯಂತ ಎಲ್ಲರಲ್ಲಿಯೂ ಮತ್ತು ಎಲ್ಲೆಡೆಯೂ ದಯೆ ಎಂಬ ಗುಣವನ್ನು ಪ್ರೇರೇಪಿಸುತ್ತಾ, ಇಡೀ ಸಮಾಜದಲ್ಲಿ ಶಾಂತಿ, ಸಾಮರಸ್ಯತೆ, ಸೌಹಾರ್ಧತೆ ಮತ್ತು ಮಾನವೀಯತೆಯನ್ನು ಎತ್ತಿಹಿಡಿಯಬೇಕು ಎನ್ನುವ ಮಹೋನ್ನತವಾದ ಧ್ಯೇಯೋದ್ಧೇಶದಿಂದ ಈ ದಿನವನ್ನು ಆಚರಿಸಲಾಗುತ್ತಿದೆ.
ಮಾಡುವ ಕಾರ್ಯ ಸಣ್ಣದು ಅಥವಾ ದೊಡ್ಡದಾಗಿರಬಹುದು. ಆ ಕಾರ್ಯದಲ್ಲಿ ತೋರುವ ದಯೆಯ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವಂತೆ ಈ ದಿನವು ಪ್ರೋತ್ಸಾಹಿಸುತ್ತದೆ.
ಆಚರಣೆಯ ಮಹತ್ವ
ಅಗತ್ಯವಿರುವವರಿಗೆ ಸಹಾಯ ಮಾಡುವುದು, ಕಷ್ಟದಲ್ಲಿರುವವರಿಗೆ ಮತ್ತು ಸಹಾಯ ಕೋರಿ ಬಂದವರಿಗೆ ಆರ್ಥಿಕವಾಗಿ ನೆರವಾಗುವುದು, ದೀನ-ದುರ್ಬಲರಿಗೆ ಸಹಾಯ-ಸಹಕಾರ ನೀಡುವುದು, ಹಬ್ಬ-ಹರಿದಿನಗಳಂದು ಉಡುಗೊರೆಗಳನ್ನು ನೀಡುವುದು ಮತ್ತು ಪರಿಸರಾತ್ಮಕ ಪ್ರಜ್ಞೆಯಿಂದ ಪ್ರಕೃತಿ, ಪ್ರಾಣಿ-ಪಶು, ಪಕ್ಷಿಗಳ ಮೇಲೆ ದಯೆ ತೋರುವುದು ಇವೆಲ್ಲವೂ ಈ ದಿನದ ಆಚರಣೆಗೆ ಮಹತ್ವ ಪಡೆದುಕೊಂಡಿದೆ.
ಪ್ರತಿ ವರ್ಷ ನವ್ಹಂಬರ ೧೩ ರಂದು ಭಾರತ ಸೇರಿದಂತೆ ಕೆನಡಾ, ಆಸ್ಟ್ರೇಲಿಯಾ, ಇಟಲಿ ಮತ್ತು ಯು.ಎ.ಇ. ಹೀಗೆ ಅನೇಕ ದೇಶಗಳಲ್ಲಿ ಈ ವಿಶ್ವ ದಯೆ ದಿನವನ್ನು ಆಚರಿಸುತ್ತವೆ.
ಇಂದು ಜಗತ್ತು ವಿಜ್ಞಾನ-ತಂತ್ರಜ್ಞಾನದಲ್ಲಿ ಅದೇಷ್ಟೋ ಅಭಿವೃದ್ಧಿ ಹೊಂದಿದರೂ ಮನುಷ್ಯರಲ್ಲಿ ದಯಾಗುಣವು ಇಲ್ಲದಿದ್ದರೆ ಎಲ್ಲವೂ ವ್ಯರ್ಥ. ಎಷ್ಟೇ ಜ್ಞಾನ, ವಿದ್ಯೆ, ಪದವಿ, ಸಂಪತ್ತುಗಳಿರಲಿ ಆತನಲ್ಲಿ ದಯೆ ಇಲ್ಲದಿದ್ದರೆ ಆತ ಪ್ರಾಣಿಗಳಿಗಿಂತಲೂ ಕೀಳು ಎಂಬ ನಮ್ಮ ಹಿರಿಯರು ಮಾತಿದೆ. ದಯೇ ತೋರುವುದು ಎಂದರೆ ಕೇವಲ ಅನಾಥ ಅಥವಾ ದಿಕ್ಕುದೆಸೆಯಿಲ್ಲದವರ ಮೇಲೆ ತೋರುವ ಅನುಕಂಪ ಮಾತ್ರವೇ ಅಲ್ಲ. ಕಷ್ಟ ಅಂತ ಬಂದವರಿಗೆ ಕನಿಷ್ಠ ಸಹಾಯ ಮಾಡುವುದು, ಇತರರು ಜೀವನ್ಮರಣ ಹೋರಾಟದಲ್ಲಿದ್ದಾಗ ಎಲ್ಲಾ ರೀತಿಯ ಮಾನವೀಯತೆಯನ್ನು ತೋರುವುದು. ಯಾರಿಗೂ ಕೆಡುಕು ಉಂಟು ಮಾಡದೇ ಇರುವುದು ಇತ್ಯಾದಿ ಮಾನವೀಯ ಗುಣಗಳೇ ದಯಾಗುಣಗಳೆಂದು ಹೇಳಬಹುದು.
ಅನಾಥ ಮತ್ತು ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪುಸ್ತಕ, ಬರವಣಿಗೆ ಪರಿಕರಗಳು, ಬಟ್ಟೆ ಮತ್ತು ಆಹಾರ ಧಾನ್ಯಗಳನ್ನು ದಾನ ಮಾಡುವುದರ ಮೂಲಕ ದಯೆ ತೋರುತ್ತಾ, ಸಮಾಜ ನನಗೆ ಎನೆಲ್ಲಾ ಕೊಟ್ಟಿದೆ, ನಾನು ಕೂಡ ಸಮಾಜಕ್ಕೆ ಅಳಿಲು ಸೇವೆ ಮಾಡಬೇಕೆಂಬ ಮೌಲ್ವಿಕ ಗುಣಗಳನ್ನು ಶಾಲೆ-ಕಾಲೇಜುಗಳಲ್ಲಿ ಈ ದಿನವನ್ನು ಆಚರಿಸುವುದರ ಮೂಲಕ ಮಕ್ಕಳಲ್ಲಿ ದಯೆ, ಅನುಕಂಪ ಮತ್ತು ಇತರರ ಬಗ್ಗೆ ಸಹಾನುಭೂತಿ ಮತ್ತು ಮಾನವೀಯತೆ ಗುಣಗಳನ್ನು ಬೆಳೆಸುವಂತಾಗಬೇಕು.
೨೦೨೫ ನೇಯ ವರ್ಷದ ಆಚರಣೆಯ ಸಂದೇಶ
ಪ್ರತಿಯೊಬ್ಬರಲ್ಲಿಯೂ ದಯೆಯ ಭಾವನೆಯನ್ನು ಜಾಗೃತಗೊಳಿಸಲು ಮತ್ತು ಶಾಂತಿ ಮತ್ತು ಸಾಮರಸ್ಯತೆಯನ್ನು ಪ್ರೇರೇಪಿಸಲು ಈ ದಿನದ ಆಚರಣೆಯ ಅರ್ಥಪೂರ್ಣವಾಗಿದೆ. ಈ ನಿಟ್ಟನಲ್ಲಿ ೨೦೨೫ ನೇಯ ವರ್ಷದ ಈ ದಿನದ ಆಚರಣೆಯ ಘೋಷವಾಕ್ಯ “ಸಾಧ್ಯವಾದಾಗಲೆಲ್ಲಾ ದಯೆಯಿಂದ ಇರಿ” ಎಂಬ ಸಂದೇಶದೊಂದಿಗೆ ಪ್ರಪಂಚವು ಜಾಗತಿಕ ಸಮುದಾಯವಾಗಿ ಶಾಂತಿ-ಸಾಮರಸ್ಯತೆಯಿಂದ ಕೂಡಿ ಪರಸ್ಪರ ದಯೆ ತೋರುವ ಅಗತ್ಯತೆಯನ್ನು ಒತ್ತಿ ಹೇಳುವ ಜಾಗತಿಕ ಅವಲೋಕನವಾಗಿದೆ.
ಕೊನೆಯ ನುಡಿ
ಮಹಾ ದಯಾಮಯಿ ಮದರ ಥೇರೇಸಾ ಅವರು, “A life not lived for others is not a life” ಎಂದು ಹೇಳಿರುವುದು ನಿಜಕ್ಕೂ ಸತ್ಯವಾದ ಮಾತು. ಸುಂದರ, ಆರೋಗ್ಯಪೂರ್ಣ ಮತ್ತು ಸುಸ್ಥಿರ ಸಮಾಜ ನಿರ್ಮಾಣಕ್ಕಾಗಿ ಎಲ್ಲರಲ್ಲಿಯೂ ದಯೆ ಎಂಬುದು ಇರಲೇಬೇಕಾದ ಗುಣ. ಸಮಾಜದಲ್ಲಿ ಉತ್ತಮ ಮೌಲ್ಯಯುತ ಮತ್ತು ಮಾನವೀಯ ಸಂಬಂಧಗಳನ್ನು ಉಳಿಸಿ-ಬೆಳೆಸಲು ದಯಾಗುಣ ಅವಶ್ಯಕ. ದಯೆಯು ಮನುಷ್ಯ-ಮನುಷ್ಯರಲ್ಲಿ ಪರಸ್ಪರ ಮಾನವೀಯ ಸಂಬಂಧಗಳನ್ನು ಬೆಸೆಯುವಂತೆ ಮಾಡುತ್ತದೆ. ಹಿರಿಯರು, ವೃದ್ಧರು, ಮಕ್ಕಳು ಮತ್ತು ಅಬಲೆಯರು ಯಾವುದೇ ಸಂಕಷ್ಟದಲ್ಲಿದ್ದಾಗ ಕೂಡಲೇ ನಾವು ಅವರ ಸಹಾಯಕ್ಕೆ ಬರಬೇಕು. ಈ ದಿನದ ಆಚರಣೆಯ ಮೂಲಕ ಎಲ್ಲರೂ ವಿಶಿಷ್ಟ ಮಾನವ ತತ್ವಗಳಲ್ಲೊಂದಾದ ಈ ದಯಾಗುಣವನ್ನು ಹೊಂದುತ್ತಾ, ಇತರರಿಗೆ ಮಾದರಿಯಾಗುತ್ತಾ, ನಮ್ಮ ವೈಯಕ್ತಿಕ ಜೀವನ ಸುಂದರ ಮತ್ತು ಸುಖಮಯ ಮತ್ತು ಸಮಾಜವು ಸಂಸ್ಕೃತಿ-ಸಂಸ್ಕಾರ, ಜೀವನ ಮೌಲ್ಯ, ಉತ್ತಮ ಭಾವನಾತ್ಮಕ ಸಂಬಂಧ ಮತ್ತು ಆರೋಗ್ಯಯುತವನ್ನಾಗಿಸಲು ನಾವೆಲ್ಲರೂ ಕಂಕಣಬದ್ಧರಾಗಬೇಕು ಎನ್ನುವುದೇ ನನ್ನದೊಂದು ಆಶಯ.


