ಇಂದು (ನವೆಂಬರ ೧೩) ಕೆ.ಎಲ್.ಇ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಈ ವಿಶೇಷ ಲೇಖನ
ಲೇಖನ
– ಶಿಲ್ಪಾ ಮೃತ್ಯುಂಜಯ. ಮಿಣಜಿಗಿ
ಕೆ ಇ ಬೋರ್ಡ್ ಸೆಂಟ್ರಲ್ ಸ್ಕೂಲ್
ಧಾರವಾಡ
ಉದಯರಶ್ಮಿ ದಿನಪತ್ರಿಕೆ
“ಜಗದಗಲ ಮುಗಿಲಗಲ
ಮಿಗೆಯಗಲ ನಿಮ್ಮಗಲ”
ಎನ್ನುವ ಬಸವಣ್ಣನವರ ವಚನದಂತೆ ನಮ್ಮ ಕೆ. ಎಲ್. ಇ. ಶಿಕ್ಷಣ ಸಂಸ್ಥೆಯ ಖ್ಯಾತಿ ಇದೆ. ಕೆ. ಜಿ. ಯಿಂದ ಪಿ. ಜಿ.
ವರೆಗೂ ಶಿಕ್ಷಣ ನೀಡುತ್ತಿರುವ ಬೃಹತ್ ಶಿಕ್ಷಣ ಸಂಸ್ಥೆ ಇದಾಗಿದೆ. ಇದು ಏಷಿಯಾ ಖಂಡದಲ್ಲೇ ಪ್ರಖ್ಯಾತಿ ಹೊಂದಿದ ಲಿಂಗಾಯತ ಶಿಕ್ಷಣ ಸಂಸ್ಥೆಯಾಗಿದೆ ಎಂದರೆ ತಪ್ಪಾಗದು.
ಏಳು ಜನ ಶಿಕ್ಷಕರ ಸಹಕಾರ ಮತ್ತು ತ್ಯಾಗದಿಂದ ಆಕಾಶದೆತ್ತರಕ್ಕೆ ಬೆಳೆದು ನಿಂತ ಈ ಶಿಕ್ಷಣ ಸಂಸ್ಥೆ ನಮ್ಮ ಸಪ್ತರ್ಶಿಗಳಾದ ಪಂಡಿತಪ್ಪ ಚಿಕ್ಕೋಡಿ, ಎಂ. ಆರ್. ಸಾಖರೆ, ಶಿ. ಶಿ. ಬಸವನಾಳ, ಎಫ್. ಎಚ್. ಕಟ್ಟಿಮನಿ, ಬಿ. ಬಿ. ಮಮದಾಪುರ, ಬಿ. ಎಸ್. ಹಂಚಿನಾಳ ಮತ್ತು ವೀರನಗೌಡ ಪಾಟೀಲ ಎಂಬ ಈ ಏಳು ಮಹಾನ್ ವ್ಯಕ್ತಿಗಳ ಅವಿರತ ದುಡಿಮೆ ಮತ್ತು ತ್ಯಾಗದ ಫಲವೇ ಕೆ. ಎಲ್. ಇ. ಸಂಸ್ಥೆ.

ಅಷ್ಟೇ ಅಲ್ಲದೆ, ದಾನವೀರ, ತ್ಯಾಗವೀರ ಶಿರಸಂಗಿ ಲಿಂಗರಾಜ ದೇಸಾಯಿ (ಜನವರಿ 10, 1861 – 1906) ಅವರು ಶಿರಸಂಗಿ – ನವಲಗುಂದ ಮತ್ತು ಸವದತ್ತಿ ಸಂಸ್ಥಾನಗಳ ಕೊನೆಯ ಸಂಸ್ಥಾನಾಧಿಪತಿಗಳಾಗಿ ಕರೆಯಲ್ಪಟ್ಟಿದ್ದರು. ರಾಮಪ್ಪ ಎಂಬ ಜನ್ಮಹೆಸರಿನಿಂದ ಹುಟ್ಟಿದ ಅವರು ದತ್ತಪಾಲಕರಾದ ಜಯಪ್ಪ ದೇಸಾಯಿ ಮತ್ತು ಗಂಗಾಬಾಯಿಯವರಿಂದ ದತ್ತು ಪಡೆದು ನಂತರ ಲಿಂಗರಾಜ ದೇಸಾಯಿ ಎಂದು ಹೆಸರು ಬದಲಾಯಿಸಿಕೊಂಡರು. ಶಿರಸಂಗಿ ಲಿಂಗರಾಜ ಅವರ ಸಮಾಜಸೇವೆಯಲ್ಲಿ ವಿಶೇಷವಾಗಿ ಅತ್ಯುತ್ತಮವಾದುದೆಂದರೆ ಅವರು ತಮ್ಮ ಸಂಪತ್ತನ್ನು ಲಿಂಗಾಯತ ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ದಾನ ಮಾಡಿದ್ದು. “ನವಲಗುಂದ-ಶಿರಸಂಗಿ ಟ್ರಸ್ಟ್” ಸ್ಥಾಪಿಸುವ ಮೂಲಕ ಬಡಮಕ್ಕಳ ವಿದ್ಯಾಭ್ಯಾಸದ ಹಿತೆಗೆ ಮುಂದಾಗಿದ್ದರು. ಅವರ ಮುಂದಾಳತ್ವದಲ್ಲಿ 1904-05 ರಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭಾದ ಮೊದಲ ಸಭೆಯಲ್ಲಿ ಅವರು ಅಧ್ಯಕ್ಷರಾಗಿ ಸಂಸ್ಥಾನ ಮತ್ತು ಲಿಂಗಾಯತ ಸಮುದಾಯದ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ನೇತೃತ್ವ ವಹಿಸಿದ್ದರು. ತಮ್ಮ 150 ಎಕರೆ ಭೂಮಿಯಲ್ಲಿ ಕೃಷಿ ತರಬೇತಿ ಶಾಲೆಯನ್ನು ಸ್ಥಾಪಿಸಿ, ಆಧುನಿಕ ಕೃಷಿ, ನೀರಾವರಿ ಯೋಜನೆಗಳನ್ನು ಕೈಗೊಂಡು ರೈತಾಭಿವೃದ್ಧಿಗೆ ಉಪಯುಕ್ತ ಸೇವೆ ಸಲ್ಲಿಸಿದರು. ಬಾಲ್ಯ ವಿವಾಹ ವಿರೋಧಿಸುವ ಸಾಮಾಜಿಕ ಕ್ರಾಂತಿಕಾರಿಯಾಗಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು.

ಶಿರಸಂಗಿ ಲಿಂಗರಾಜರು ಧರ್ಮ, ಸಂಸ್ಕೃತಿ, ಶಿಕ್ಷಣ, ಕೃಷಿ ಮತ್ತು ಸಾಮಾಜಿಕ ಬದಲಾವಣೆಗಳಲ್ಲಿ ತಮ್ಮ ದಾನ ಹಾಗೂ ಸೇವೆಗಳ ಮೂಲಕ ಹೆಸರಾಗಿದ್ದಾರೆ. ಅವರ ಜೀವನ ಶೈಕ್ಷಣಿಕ ಕ್ರಾಂತಿಯೊಂದಿಗೆ ಸಮಾಜದ ಸುಧಾರಣೆಯ ಪ್ರಭಾವವನ್ನೂ ಸೃಷ್ಟಿಸಿತು.
1906 ರಲ್ಲಿ ಅವರ ನಿಧನವಾದ ನಂತರವೂ, ಅವರು ಸ್ಥಾಪಿಸಿದ ಟ್ರಸ್ಟ್ ಶಿಕ್ಷಣಾಭಿವೃದ್ಧಿಗೆ ಮುಂದುವರೆದಿದೆ. ಅದರಂತೆ ಅರಟಾಳ್ ರುದ್ರಗೌಡರು, ಬಿ. ವಿ. ಭೂಮರೆಡ್ಡಿ, ಎಚ್.ಡಿ. ದೇಸಾಯಿ ಸೇರಿದಂತೆ ಹಲವು ಮಹಾತ್ಮರು ತಮ್ಮದೇ ಆದಂತಹ ಶ್ರೇಷ್ಠ ಕೊಡುಗೆಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.
ಇವರೆಲ್ಲರ ತ್ಯಾಗದ ಬೆಳೆಯನ್ನು ಡಾ.ಪ್ರಭಾಕರ ಕೋರೆ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದುವಂತೆ ಪಸರಿಸಿದ್ದಾರೆ. 310 ಕ್ಕೂ ಹೆಚ್ಚು ಅಂಗ ಸಂಸ್ಥೆಗಳನ್ನು ಮತ್ತು 18500 ಹೆಚ್ಚು ಭೋಧಕ ವರ್ಗವನ್ನು ಹೊಂದಿದೆ. ಬಿತ್ತುವದು ಎಷ್ಟು ಮುಖ್ಯವೊ ಬೆಳೆಯುವುದು ಕೂಡಾ ಅಷ್ಟೇ ಮುಖ್ಯ ಎನ್ನುವ ಮಾತು ಅಕ್ಷರಶಃ ಒಪ್ಪಲೇಬೇಕಾದಮಾತು.
ಸಹಕಾರ: ಡಾ.ವೀಣಾ ಹೂಗಾರ, ಉಪನ್ಯಾಸಕರು


