ವಿಜಯಪುರ ಜಿಲ್ಲಾಡಳಿತದಿಂದ ವೀರವನಿತೆ ಒನಕೆ ಓಬವ್ವ ಜಯಂತಿ ಆಚರಣೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಚಿತ್ರದುರ್ಗದ ಕೋಟೆಗೆ ಸಂಕಷ್ಟ ಎದುರಾಗಿದ್ದಾಗ ಯಾವುದೇ ಯುದ್ಧ ಕೌಶಲ್ಯಗಳಿಲ್ಲದಿದ್ದರೂ ಛಲದಿಂದ ಶತ್ರು ಪಡೆಯ ವಿರುದ್ಧ ಒನಕೆಯನ್ನು ಅಸ್ತçವನ್ನಾಗಿಸಿಕೊಂಡು ಹೋರಾಡಿ, ನಾಡ ರಕ್ಷಣೆ ಮಾಡಿದ ಮಹಿಳೆ ಒನಕೆ ಓಬವ್ವ ಧೀರತನ ನಮಗೆಲ್ಲ ಸ್ಫೂರ್ತಿಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು ಹೇಳಿದರು.
ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ,ಮಾತನಾಡಿದ ಅವರು, ಓರ್ವ ಮಹಿಳೆಯಾಗಿದ್ದರೂ ಧೈರ್ಯ, ಸಾಹಸದಿಂದ ಶತ್ರುಗಳ ದಾಳಿಗೆ ಎದೆಗುಂದದೆ ಒನಕೆ ಹಿಡಿದು ಹೋರಾಡಿದ ಓಬವ್ವ ಅವರ ಧೀರತನದ ಜೀವನ ಇಂದಿನ ಪೀಳಿಗೆ ಮಾದರಿಯಾಗಿದೆ. ಸಂಕಷ್ಟದಲ್ಲಿ ಸ್ವಯಂಪ್ರೇರಿತವಾಗಿ ಸೂಕ್ತ ನಿರ್ಧಾರ ಕೈಗೊಳ್ಳುವ ಓಬವ್ವರಂತಹ ವೀರರ ಕಥೆಗಳನ್ನು ಮಕ್ಕಳಿಗೆ ತಿಳಿಸುವುದರ ಮೂಲಕ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಲು ಸಹಕಾರಿಯಾಗುವುದರೊಂದಿಗೆ ಭವಿಷ್ಯದಲ್ಲಿ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡಬಹುದಾಗಿದೆ ಎಂದು ಅವರು ತಿಳಿಸಿದರು.
ಐತಿಹಾಸಿಕ ಕೋಟೆ ಚಿತ್ರದುರ್ಗ ಎಂದರೆ ನೆನಪಾಗುವುದೇ ಒನಕೆ ಓಬವ್ವಳ ಸಾಹಸದ ಕಥೆಗಳು. ಇವರ ಜೀವನ ಚರಿತ್ರೆ ಇತಿಹಾಸ ಪುಟಗಳಲ್ಲಿ ಅಜರಾಮರವಾಗಿವೆ. ವೀರತನದ ಪ್ರತೀಕ ಒನಕೆ ಓಬವ್ವ. ಇವರ ಹೆಸರು ಇಂದಿಗೂ ಇತಿಹಾಸದ ಪುಟಗಳಲ್ಲಿ ರಾರಾಜಿಸುತ್ತಿವೆ. ಒನಕೆ ಓಬವ್ವರಂತಹ ಅನೇಕ ವೀರ-ಶೂರರ ಕಥೆಗಳು ಸದಾ ನಮಗೆಲ್ಲ ಆದರ್ಶಮಯವಾಗಿವೆಎಂದು ಅವರು ಹೇಳಿದರು.
ಶ್ರೀಮತಿ ಉಜ್ವಲಾ ಅ.ಸರನಾಡಗೌಡ ವಿಶೇಷ ಉಪನ್ಯಾಸ ನೀಡಿ, ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯದ ಪ್ರತೀಕವಾಗಿರುವ ವೀರ ಮಹಿಳೆಯರ ಧೈರ್ಯ ಸಾಹಸದ ಜೀವನ ಮೈಗೂಡಿಸಿಕೊಳ್ಳಬೇಕು. ಕಷ್ಟದ ಪರಿಸ್ಥಿತಿಯಲ್ಲಿ ತನ್ನ ಕೋಟೆ ರಕ್ಷಣೆಯ ಹೊಣೆಯನ್ನು ಸ್ವಯಂ ಪ್ರೇರಿತವಾಗಿ ಹೊತ್ತು ಧೈರ್ಯ ಹಾಗೂ ಛಲದಿಂದ ಹೋರಾಡಿದ ವೀರವನಿತೆ ಓಬವ್ವ ನಮ್ಮಗೆಲ್ಲ ಆದರ್ಶ ಪ್ರಾಯವಾಗಿದ್ದಾರೆ ಓಬವ್ವ ಕೇವಲ ದೇಶ ಭಕ್ತಿಯ ಪ್ರತೀಕವಲ್ಲ ಅವರು ಮಹಿಳಾ ಸಬಲೀಕರಣದ ಪ್ರತೀಕ ಎಂದು ಹೇಳಿದರು.
ಕುಮಾರಿ ವೈಷ್ಣವಿ ನಾಯ್ಕೋಡಿ ಮತ್ತು ತಂಡ ವೀರವನಿತೆ ಒನಕೆ ಓಬವ್ವ ಕುರಿತು ನೃತ್ಯ ರೂಪಕ ಪ್ರದರ್ಶಿಸಿದರು.
ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಪ್ರಕಾಶ ವಡ್ಡರ, ಡಿವೈಎಸ್ ಪಿ ಸುನೀಲ ಕಾಂಬಳೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂತೋಷ ಭೋವಿ, ವಿವಿಧ ಇಲಾಖೆಯ ಅಧಿಕಾರಿ-ಸಿಬ್ಬಂದಿಗಳು, ಸಮಾಜ ಮುಖಂಡರಾದ ಅಡಿವೆಪ್ಪ ಸಾಲಗಲ್ ಸೇರಿದಂತೆ ವಿವಿಧ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಮೆರವಣಿಗೆಗೆ ಚಾಲನೆ
ಬೆಳಿಗ್ಗೆ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಆರಂಭಗೊಂಡ ವೀರ ವನಿತೆ ಒನಕೆ ಓಬವ್ವ ಅವರ ಭಾವಚಿತ್ರದ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರು ಅವರು ಚಾಲನೆ ನೀಡಿದರು. ಮೆರವಣಿಗೆಯೂ ವಿವಿಧ ಕಲಾ ತಂಡಗಳೊಂದಿಗೆ ಬಸವೇಶ್ವರ ವೃತ್ತ ಮಾರ್ಗವಾಗಿ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಸಮಾವೇಶಗೊಂಡಿತ್ತು.

