ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಭಾರತ ಸರ್ಕಾರದ ಮೇರಾ ಯುವ ಭಾರತ(ಮೈ ಭಾರತ),
ಎನ್ ಎಸ್ ಎಸ್ ಜಿಲ್ಲಾ ಘಟಕ, ಭಾರತ ಸೇವಾ ದಳ ವಿಜಯಪುರ ವತಿಯಿಂದ ಭಾರತದ ಮಾಜಿ ಉಪಪ್ರಧಾನಮಂತ್ರಿ ಮತ್ತು ಗೃಹ ಸಚಿವರಾದ ಉಕ್ಕಿನ ಮನುಷ್ಯ ಶ್ರೀ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ೧೫೦ನೇ ಜನ್ಮಜಯಂತಿ ಅಂಗವಾಗಿ ಜಿಲ್ಲೆಯಲ್ಲಿ ನವೆಂಬರ್ ೧೨ರಂದು ನಡೆಸಲು ಉದ್ದೇಶಿಸಿದ್ದ ರಾಷ್ಟ್ರೀಯ ಏಕತಾ ದಿನವನ್ನು ಕಾರಣಾಂತರಗಳಿಂದ ಮುಂದೂಡಿ ನವೆಂಬರ್ ೧೪ರಂದು ಆಚರಿಸಲು ನಿರ್ಧರಿಸಲಾಗಿದೆ ಎಂದು ಮೇರಾ ಯುವ ಭಾರತ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಎಂ.ಗೌತಮ ರೆಡ್ಡಿ ಅವರು ತಿಳಿಸಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಅಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಶಿವಾಜಿ ವೃತ್ತದಿಂದ ಆರಂಭವಾಗಲಿರುವ ಏಕತಾ ನಡಿಗೆ/ಯೂನಿಟಿ ಮಾರ್ಚ್ ಕಾರ್ಯಕ್ರಮಕ್ಕೆ ವಿಜಯಪುರ ಸಂಸದರಾದ ರಮೇಶ್ ಜಿಗಜಿಣಗಿ ಅವರು ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲಾಧಿಕಾರಿ ಡಾ.ಆನಂದ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ ನಿಂಬರಗಿ ಸೇರಿಂದಂತೆ ವಿವಿಧ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ನಗರದ ವಿವಿಧ ಕಾಲೇಜುಗಳಿಂದ ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಏಕತಾ ನಡಿಗೆಯಲ್ಲಿ ಹೆಜ್ಜೆ ಹಾಕಲಿದ್ದು, ಶಿವಾಜಿ ವೃತ್ತದಿಂದ ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಕನಕದಾಸ ವೃತ್ತದ ಮೂಲಕ ಸಾಗಿ ಕಂದಗಲ್ಲ ಶ್ರೀ ಹನುಮಂತರಾಯ ರಂಗ ಮಂದಿರದಲ್ಲಿ ಕೊನೆಗೊಳ್ಳಲಿದೆ.
ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮವನ್ನು ಸಂಸದ ರಮೇಶ ಜಿಗಜಿಣಗಿ ಉದ್ಘಾಟಿಸಲಿದ್ದಾರೆ. ರಾಷ್ಟ್ರೀಯ ಏಕತಾ ದಿನದ ಪ್ರತಿಜ್ಞಾ ವಿಧಿ ಸ್ವೀಕಾರ, ಸಂಪನ್ಮೂಲ ವ್ಯಕ್ತಿಗಳಿಂದ ಭಾಷಣ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಜರುಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
