ಕುದರಿಸಾಲವಾಡಗಿ ಗ್ರಾಮದಲ್ಲಿ 29 ದಿನ ಪೂರೈಸಿದ ಅನಿರ್ದಿಷ್ಟಾವಧಿ ಧರಣಿ
ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಕುದರಿಸಾಲವಾಡಗಿ ಗ್ರಾಮದಲ್ಲಿ ಯಾಳವಾರ ಗ್ರಾಮಕ್ಕೆ ಹೋಗುವ ಮುಖ್ಯರಸ್ತೆಯ ಅಭಿವೃದ್ಧಿ ಹಾಗೂ ಅಗಲೀಕರಣ ನೆಪದಲ್ಲಿ ತೆರವುಗೊಳಿಸಿದ 143 ಕ್ಕೂ ಹೆಚ್ಚು ಕುಟುಂಬಗಳಿಗೆ ಸೂಕ್ತ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಖಂಡ ಅಶೋಕಗೌಡ ಪಾಟೀಲ ಅವರ ನೇತೃತ್ವದಲ್ಲಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಸೋಮವಾರ 28 ದಿನಕ್ಕೆ ಕಾಲಿಟ್ಟರೆ, ಅಹೋರಾತ್ರಿ ಧರಣಿ ಆರನೇ ದಿನಕ್ಕೆ ಕಾಲಿಟ್ಟಿತ್ತು.
ಸೋಮವಾರ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಮುಖಂಡರಾದ ಡಾ.ಪ್ರಭುಗೌಡ ಲಿಂಗದಳ್ಳಿ, ಅಶೋಕಗೌಡ ಪಾಟೀಲ ಮಾತನಾಡಿ, ತಾಲೂಕಿನ ಕುದರಿಸಾಲವಾಡಗಿ ಗ್ರಾಮದ ರಸ್ತೆ ಅಗಲೀಕರಣದಲ್ಲಿ ನಿರಾಶ್ರಿತರ ಹೋರಾಟಕ್ಕೆ ನ್ಯಾಯ ಕೊಡಿಸುವ ಉದ್ದೇಶದಿಂದ ನಿರಂತರವಾಗಿ ಅವರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದೇವೆ. ಇದರಲ್ಲಿ ಯಾರ ಮೇಲಿನ ದ್ವೇಷವಾಗಲಿ, ರಾಜಕೀಯವಾಗಲಿ ಎಳ್ಳಷ್ಟು ಇಲ್ಲ. ಬಡವರಿಗೆ ಆದ ಅನ್ಯಾಯವನ್ನು ಸರಿಪಡಿಸುವ ಉದ್ದೇಶ ನಮ್ಮದು.ಈ ಬಡವರು ತಮ್ಮ ಮನೆಗಳನ್ನು ಕಳೆದುಕೊಂಡು ಎರಡು ತಿಂಗಳು ಗತಿಸಿ ಹೋಗಿವೆ. ಕಳೆದ 28 ದಿನಗಳಿಂದ ನಿರಾಶ್ರಿತರು ನಿರಂತರವಾಗಿ ಧರಣಿ ನಡೆಸುತ್ತಿದ್ದರೂ ಅಧಿಕಾರಿಗಳು ನ್ಯಾಯ ಕೊಡಿಸದೇ ಇರುವದು ನೋವಿನ ಸಂಗತಿ. ಬಡವರ ಮನೆಗಳನ್ನು ಅನ್ಯಾಯವಾಗಿ ತೆರವುಗೊಳಿಸಿದ ತಪಿತಸ್ಥ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಜರುಗಿಸಿ ನಿರಾಶ್ರಿತರಿಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದರು.
ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, ಕುದರಿಸಾಲವಾಡಗಿ ಗ್ರಾಮದಲ್ಲಿ ರಸ್ತೆ ಅಗಲೀಕರಣ ನೆಪದಲ್ಲಿ ಕಾನೂನುಬಾಹಿರವಾಗಿ ನೂರಾರು ಬಡವರ ಮನೆಗಳನ್ನು ತೆರವು ಗೊಳಿಸಲಾಗಿದೆ. ನಿರಾಶ್ರಿತರು ತಮಗೆ ನ್ಯಾಯ ಸಿಗಬೇಕೆಂದು ಕಳೆದ ಹಲವಾರು ದಿನಗಳಿಂದ ಅನಿರ್ದಿಷ್ಟ ಧರಣಿ ಸತ್ಯಾಗ್ರಹ, ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಇದುವರೆಗೂ ಸರ್ಕಾರ ಸ್ಪಂದಿಸಿಲ್ಲ. ಬುಧವಾರದಿಂದ ಮೂರು ದಿನಗಳ ಕಾಲ ಸರದಿ ಉಪವಾಸ ಸತ್ಯಾಗ್ರಹ ಮಾಡಲು ಇಬ್ಬರು ನಿರಾಶ್ರಿತರು ಮುಂದಾಗುತ್ತಿದ್ದಾರೆ. ಸರ್ಕಾರ ಇದಕ್ಕೂ ಸ್ಪಂದಿಸದೇ ಹೋದರೆ ಮುಂದಿನ ದಿನಗಳಲ್ಲಿ ಆಮರಣ ಉಪವಾಸ ಸತ್ಯಾಗ್ರಹವನ್ನು ನಿರಾಶ್ರಿತರು ಆರಂಭಿಸಲಿದ್ದಾರೆ. ಈ ವೇಳೆಯಲ್ಲಿ ನಿರಾಶ್ರಿತರಿಗೆ ಯಾವುದೇ ಪ್ರಾಣ ಹಾನಿಯಾದರೆ ಸಂಬಂಧಿಸಿದ ಕ್ಷೇತ್ರದ ಶಾಸಕರು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸಂಬಂಧಿಸಿದ ಅಧಿಕಾರಿಗಳು ಹೊಣೆಗಾರರಾಗುತ್ತಾರೆ ಎಂದರು.
ಧರಣಿಯಲ್ಲಿ ಅರವಿಂದ ಸಜ್ಜನ, ಶಾಂತಗೌಡ ಪಾಟೀಲ, ಬಿ.ಎಂ.ದೇಸಾಯಿ, ಡಾ.ಹಸನಸಾಬ ಢವಳಗಿ, ನಜೀರ ಪಟೇಲ ಗುಡ್ನಾಳ, ಬಾಬು ನದಾಫ, ಅಲ್ತಾಪ ಅತ್ತಾರ, ಮಲ್ಲಪ್ಪ ಜೇವರಗಿ,ದಾವಲಸಾಬ ಅತ್ತಾರ, ಡಿಎಸ್ಎಸ್ ಮುಖಂಡರಾದ ಗುರು ಗುಡಿಮನಿ, ಕಾಮೇಶ ಭಜಂತ್ರಿ, ಯಮನೂರಿ ಚಲವಾದಿ, ಬಸವರಾಜ ದೊಡಮನಿ, ಹಜರತಬಿ ಅತ್ತಾರ, ಶಕೀನಾ ಯಲಗಾರ, ಪಾವಡೆವ್ವ ಇಂಗಳಗಿ, ಚಂದ್ರಕಲಾ ಕಳ್ಳಿಮನಿ, ಬಸಮ್ಮ ತಮದಡ್ಡಿ, ಶೀಲಾ ಕಳ್ಳಿಮನಿ, ಮಲ್ಲಮ್ಮ ಬೆಳ್ಳಗೋಳ, ಮನೆರಾಬೇಗಂ ಅತ್ತಾರ, ಬಿಬಹಜರತ ನಾಯ್ಕೋಡಿ ಇತರರು ಭಾಗವಹಿಸಿದ್ದರು.

