ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಧಾರವಾಡ: ಕರ್ನಾಟಕ ಬಾಲ ವಿಕಾಸ ಅಕಾಡೆಮಿಯು ನಾಡಿನ ಅವಕಾಶ ವಂಚಿತ ಹಾಗೂ ನಾಡಿನ ಮಕ್ಕಳ ಪಾಲಿನ ಕಾಮಧೇನುವಾಗಿ ಮಕ್ಕಳಿಗಾಗಿ ಹಮ್ಮಿಕೊಂಡಿರುವ ವಿಶೇಷ ಕಾರ್ಯಕ್ರಮಗಳು ನಿಜಕ್ಕೂ ಅರ್ಥಪೂರ್ಣವಾಗಿದ್ದು ಮಕ್ಕಳ ಬದುಕಿಗೆ ಹೊಸ ತಿರುವು ನೀಡಲು ಅಕಾಡೆಮಿ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಅವರು ಹಮ್ಮಿಕೊಂಡಿರುವ ಕಾರ್ಯಕ್ರಮಗಳು ತುಂಬಾ ಅರ್ಥಪೂರ್ಣವಾಗಿವೆ. ಜೊತೆಗೆ ಈ ದಿನದಿಂದ 15 ದಿನಗಳವರೆಗೆ ರಾಜ್ಯದ 31 ಜಿಲ್ಲೆಗಳ ಬಾಲ ಮಂದಿರ ಮಕ್ಕಳಿಗಾಗಿ ಏರ್ಪಡಿಸಿರುವ ಮಕ್ಕಳ ವ್ಯಕ್ತಿತ್ವ ವಿಕಸನ ಕಾರ್ಯಾಗಾರವು ನಿಜಕ್ಕೂ ಮಾದರಿಯಾದ ಕಾರ್ಯಕ್ರಮ. ನೀವು ಇಲ್ಲಿ ವಿಶೇಷವಾದ ಸ್ಪೂರ್ತಿಯನ್ನು ಪಡೆದು ನಿಮ್ಮ ಬದುಕನ್ನ ಬದಲಾಯಿಸಿಕೊಳ್ಳಿ ಮತ್ತು ರೂಪಿಸಿಕೊಳ್ಳಿ ಇಂಥ ಪರಿಸರ ಸ್ನೇಹಿ ರೆಸಾರ್ಟ್ ನಲ್ಲಿ ಮಕ್ಕಳಿಗಾಗಿ ನಿಸರ್ಗದ ಮಡಿಲಲ್ಲಿ ಏರ್ಪಡಿಸಿರುವ ಈ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣವಾದದ್ದು ಎಂದು ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಡಾ ಈಶ್ವರ ಉಳ್ಳಾಗಡ್ಡಿ ಹೇಳಿದರು.
ಅವರು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡದ ಹತ್ತಿರವಿರುವ ನೇಚರ್ ಫಸ್ಟ್ ಇಕೋ ವಿಲೇಜ್ ನಲ್ಲಿ ಬಾಲಮಂದಿರ ಮಕ್ಕಳಿಗಾಗಿ ಏರ್ಪಡಿಸಿರುವ 15 ದಿನಗಳ ವಸತಿಯುತ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ್ ಬಬಲೇಶ್ವರ ಮಾತನಾಡಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಆಶಯ, ಈ ನಾಡಿನ ಅವಕಾಶ ವಂಚಿತ ಮಕ್ಕಳ ಬದುಕಿಗೆ ಹೊಸ ಕಾಯಕಲ್ಪ ನೀಡುವುದಾಗಿದೆ. ಅವಕಾಶ ವಂಚಿತ ಮಕ್ಕಳು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎನ್ನುವುದು ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ನಮ್ಮೆಲ್ಲರ ಸದಾಶಯವಾಗಿದೆ ಎಂದು ಹೇಳಿದರು.
ನಾಡಿನ ಮೂಲೆ ಮೂಲೆಯಿಂದ ಪಾಲ್ಗೊಂಡಿರುವ ಮಕ್ಕಳು ಈ ವ್ಯಕ್ತಿತ್ವ ವಿಕಸನ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕು 10 ಜಿಲ್ಲೆಗಳಂತೆ ಮೂರು ತಂಡಗಳನ್ನು ಮಾಡಿ ಐದು ದಿನಗಳ ಒಟ್ಟು 15 ದಿನ ನಡೆಯುವ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ನೀವು ಹಲವಾರು ಜನ ಸಾಧಕರನ್ನು ಭೇಟಿ ಮಾಡಲಿದ್ದೀರಿ ಅವರ ಅನುಭವಗಳು ನಿಮ್ಮ ಬಾಳಿಕೆ ಬೆಳಕಾಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ಪರಿಸರವಾದಿ ಶ್ರೀ ಬಿ ವಿ ಹಿರೇಮಠ್ ರವರು ಮಾತನಾಡಿ, ಪರಿಸರವನ್ನು ಉಳಿಸುವ ಪರಿಸರ ಜಾಗೃತಿ ಮೂಡಿಸುವ ಕೆಲಸ ಇಂದಿನ ತುರ್ತು ಅಗತ್ಯವಾಗಿದ್ದು ಮಕ್ಕಳು ಪರಿಸರ ಪ್ರೇಮವನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ್ ಬೊಮ್ಮಕ್ಕನವರ್ ಶಿಕ್ಷಕರಾದ ಫಕಿರೇಶ್ ಮುಡಿಯನ್ನವರ್, ಅಕ್ಷರ ದಾಸೋಹದ ಅಧಿಕಾರಿ ಬಸವರಾಜ್, ಶಿಕ್ಷಕ ಸಾಹಿತಿ ಬೆಂತೂರ್ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಶ್ರೀಮತಿ ಅನ್ನಪೂರ್ಣ ಸಂಬಳದ. ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧಿಕಾರಿಗಳಾದ ಶ್ರೀಮತಿ ಪುಷ್ಪ ಹಂಜಗಿ, ಶ್ರೀಮತಿ ಸ್ವರ್ಣ ಲತಾ ಶ್ರೀಮತಿ ಮೇಟಿ. ಸಂಪನ್ಮೂಲ ವ್ಯಕ್ತಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು. ಮೊದಲ ಹಂತದ 9 ಜಿಲ್ಲೆಗಳ ಬಾಲ ಮಂದಿರದ ಮುದ್ದು ಮಕ್ಕಳು ಹಾಗೂ ಕ್ಷೇಮ ಪಾಲಕರು ಉಪಸ್ಥಿತರಿದ್ದರು.

