ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಾಳೆ ಬುಧವಾರದಿಂದ ವಿಜಯಪುರ ನಗರದಿಂದ- ತೆಲಸಂಗ ವರೆಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಸದಾಗಿ ಗ್ರಾಮೀಣ ಸಾರಿಗೆ ಬಸ್ ಸಂಚಾರ ಪ್ರಾರಂಭಿಸಲಿದೆ.
ವಿದ್ಯಾರ್ಥಿಗಳು, ಸಾರ್ವಜನಿಕರು, ರೈತರು ಹಾಗೂ ಕಾರ್ಮಿಕರ ಸಂಚಾರಕ್ಕೆ ಅನುಕೂಲವಾಗಲು
ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಹೊಸ ಬಸ್ ಸೇವೆ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ ಕ್ರಮ ಕೈಗೊಂಡಿದ್ದು, ಈ ಹೊಸ ಬಸ್ ಸೇವೆ ಪ್ರಾರಂಭಿಸುತ್ತಿದ್ದಾರೆ.
ಒಂದು ಬಸ್ಸು ಪ್ರತಿದಿನ ವಿಜಯಪುರದ ಸೆಟಲೈಟ್ ಬಸ್ ನಿಲ್ದಾಣದಿಂದ ತಿಕೋಟಾ, ರಾಮಪುರ, ಹೊನವಾಡ ಮಾರ್ಗವಾಗಿ ತೆಲಸಂಗ(ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗ್ರಾಮ)ಕ್ಕೆ ಎಂಟು ಟ್ರಿಪ್ (ಎಂಟು ಸಲ) ಸಂಚರಿಸಲಿದೆ.
ಮತ್ತೊಂದು ಬಸ್ಸು ತೆಲಸಂಗದಿಂದ ಹೊನವಾಡ, ರಾಮಪುರ, ತಿಕೋಟಾ ಮಾರ್ಗವಾಗಿ ವಿಜಯಪುರ ನಗರ ಸೆಟಲೈಟ್ ಬಸ್ ಬಸ್ ನಿಲ್ದಾಣಕ್ಕೆ ಪ್ರತಿ ದಿನ ಎಂಟು ಟ್ರಿಪ್(ಎಂಟು ಸಲ) ಸಂಚರಿಸಲಿದೆ.
ಬುಧವಾರ ಬೆಳಿಗ್ಗೆ 10 ಗಂಟೆಗೆ ಹೊನವಾಡ ಗ್ರಾಮದಲ್ಲಿ ಒಂದು ಬಸ್ಸಿಗೆ ಚಾಲನೆ ನೀಡಲಾಗುತ್ತದೆ ಎಂದು ಸಚಿವರ ಕಚೇರಿಯ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
