ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು
ನವದೆಹಲಿ: ಕುಮಾರಸ್ವಾಮಿ ಅವರೂ ಭಯೋತ್ಪಾದಕರ ಭಾಗವಾಗಿದ್ದಾರೆಯೇ? ಅವರೂ ಸಹ ವಿಧಾನಸೌಧದಲ್ಲಿ ಕುಳಿತಿರಲಿಲ್ಲವೇ? ಅವರಿಗೂ ಹಾಗೂ ಅವರ ಪಕ್ಷದವರಿಗೂ, ಅವರ ಆಡಳಿತಕ್ಕೂ ಇದು ಅನ್ವಯಿಸುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ದೆಹಲಿಯಲ್ಲಿ ಎಐಸಿಸಿ ನೂತನ ಕಟ್ಟಡ ಇಂದಿರಾ ಭವನದ ಆವರಣದಲ್ಲಿ ಮಾತನಾಡಿದ ಅವರು ವಿಧಾನಸೌಧದಲ್ಲಿ ಭಯೋತ್ಪಾದಕರಿದ್ದಾರೆ ಎನ್ನುವ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಚುನಾವಣಾ ಆಯೋಗವು ಬಿಹಾರದ ಮತದಾರರಿಗೆ ಸರಿಯಾದ ನ್ಯಾಯ ಒದಗಿಸಿಲ್ಲ. ಬಿಜೆಪಿ ಸಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡಿದೆ. ಯಾವುದು ಕಾಡದಿದ್ದರೂ ಆತ್ಮಸಾಕ್ಷಿ ಎನ್ನುವುದು ಇದ್ದೇ ಇರುತ್ತದೆ. ಅದು ಅಂತಿಮವಾಗಿ ಕೆಲಸ ಮಾಡಲಿದೆ ಎಂದು ಹೇಳಿದರು.
ನಾನು ರಾಜಕೀಯ ವಿಚಾರಗಳನ್ನು ಮಾತನಾಡುವುದಿಲ್ಲ. ನಾನು ಪ್ರಜಾಪ್ರಭುತ್ವ, ಮತದಾನದ ಹಕ್ಕು, ಸಂವಿಧಾನವನ್ನು ಉಳಿಸುವ ವಿಚಾರವಾಗಿ ಮಾತನಾಡುತ್ತೇನೆ” ಎಂದು ಉತ್ತರಿಸಿದರು. ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿಗೆ ಆಗಮಿಸಿ ಫ್ರೀಡಂ ಪಾರ್ಕ್ ನಿಂದ ಈ ಹೋರಾಟ ಆರಂಭಿಸಲಾಯಿತು. ನಂತರ ಮಹಾರಾಷ್ಟ್ರ, ಹರಿಯಾಣ ಚುನಾವಣಾ ಅಕ್ರಮ ಬಯಲಾಗಿ ಈ ಹೋರಾಟ ಬಿಹಾರದವರೆಗೂ ಹಬ್ಬಿತು. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ ಅವರ ನಿರ್ದೇಶನದ ಮೇರೆಗೆ ಈ ಅಭಿಯಾನ ಪೂರ್ಣಗೊಳಿಸಿದ್ದೇವೆ” ಎಂದರು.
ಮತಕಳ್ಳತನ ಖಂಡಿತವಾಗಿ ಆಗಿದೆ. ಬಿಹಾರದಲ್ಲಿ ಎಸ್ಐಆರ್ ನಡೆದಾಗ ನ್ಯಾಯಾಲಯ ಮಧ್ಯಪ್ರವೇಶ ಮಾಡಿ ಏಕೆ ಸೂಚನೆ ನೀಡಿತು? ರಾಹುಲ್ ಗಾಂಧಿ ಅವರು ಇದರ ಬಗ್ಗೆ ಮೊದಲ ಪತ್ರಿಕಾಗೋಷ್ಠಿ ನಡೆಸಿದ ನಂತರ ಮಾಧ್ಯಮಗಳು ಬೆಂಗಳೂರಿಗೆ ಬಂದು ಉಲ್ಲೇಖಿತ ಮನೆಗಳ ಸಂಖ್ಯೆ ಸೇರಿದಂತೆ ಯಾವ, ಯಾವ ಕಡೆ ಅಕ್ರಮ ನಡೆದಿದೆ ಎಂದು ಫ್ಯಾಕ್ಟ್ ಚೆಕ್ ಮಾಡಿದವು. ಯಾವ ಸರ್ಕಾರವೂ ಅದರ ವೈಫಲ್ಯ ಒಪ್ಪಿಕೊಳ್ಳುವುದಿಲ್ಲ. ವಿರೋಧ ಪಕ್ಷದ ಕೆಲಸವೇ ವೈಫಲ್ಯಗಳನ್ನು ಕಂಡುಹಿಡಿದು ತಿಳಿಸುವುದು” ಎಂದರು.

ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಸ್ಥಾನದಿಂದ ಜಿ.ಟಿ.ದೇವೇಗೌಡ ವಜಾ
ಕರ್ನಾಟಕದ ಪ್ರಾದೇಶಿಕ ಪಕ್ಷವಾದ ಜನತಾ ದಳ ಸೆಕ್ಯುಲರ್ (ಜೆಡಿಎಸ್) ಪಕ್ಷ ಅಸ್ತಿತ್ವಕ್ಕೆ ಬಂದು 25 ವರ್ಷಗಳಾಗಿದ್ದು, ಪಕ್ಷದ ನಾಯಕರು, ಕಾರ್ಯಕರ್ತರು ಸಂಭ್ರಮದಲ್ಲಿದ್ದಾರೆ. ಆದರೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ತೆಗೆದುಕೊಂಡಿರುವ ನಿರ್ಧಾರ ಹಿರಿಯ ನಾಯಕ ಜಿಟಿ ದೇವೇಗೌಡ ಅವರಿಗೆ ಬರಸಿಡಿಲಿನಂತೆ ಅಪ್ಪಳಿಸಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವರೂ ಆಗಿರುವ ಹೆಚ್.ಡಿ. ಕುಮಾರಸ್ವಾಮಿ ಪಕ್ಷದ ಕೋರ್ ಕಮಿಟಿಯನ್ನು ಪುನಾರಚನೆ ಮಾಡಿದ್ದು, ಕೋರ್ ಕಮಿಟಿ ಅಧ್ಯಕ್ಷ ಸ್ಥಾನದಿಂದ ಜಿ.ಟಿ.ದೇವೇಗೌಡ ಅವರನ್ನು ವಜಾಗೊಳಿಸಲಾಗಿದೆ. ಚಿಂತಾಮಣಿಯ ಮಾಜಿ ಶಾಸಕ ಹಾಗೂ ಮಾಜಿ ಡೆಪ್ಯುಟಿ ಸ್ಪೀಕರ್ ಎಂ. ಕೃಷ್ಣಾರೆಡ್ಡಿ ಅವರನ್ನು ಸಮಿತಿಯ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಅರಕಲಗೂಡು ಶಾಸಕ ಎ. ಮಂಜು ಅವರನ್ನು ಕೋರ್ ಕಮಿಟಿಯ ಸಂಚಾಲಕರಾಗಿ ಆಯ್ಕೆಗೊಂಡಿದ್ದಾರೆ.
ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರ ಉಳಿದು ಪದೇ ಪದೇ ಕಾಂಗ್ರೆಸ್ ಜೊತೆ ಕಾಣಿಸಿಕೊಂಡು ಸಿದ್ದರಾಮಯ್ಯ ಸೇರಿದಂತೆ ಇತರೆ ನಾಯಕರನ್ನು ಜಿಟಿ ದೇವೇಗೌಡ ಹಾಡಿಹೊಗಳುವ ಮೂಲಕ ಜಿಟಿ ದೇವೇಗೌಡ ಇತ್ತೀಚೆಗೆ ಸುದ್ದಿಯಲ್ಲಿದ್ದರು. ತಮ್ಮ ಹೇಳಿಕೆಗಳ ಮೂಲಕ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದ್ದರು. ಈ ಬೆಳವಣಿಗೆ ಕುಮಾರಸ್ವಾಮಿ ಮತ್ತು ಜಿಟಿಡಿ ನಡುವೆ ಮುಸುಕಿನ ಗುದ್ದಾಟಕ್ಕೂ ಕಾರಣವಾಗಿತ್ತು.

