ಲೇಖನ
– ವೀಣಾ ಹೇಮಂತಗೌಡ ಪಾಟೀಲ್
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ವಿಚಾರವಂತರೊಂದಿಗಿನ ಸಹವಾಸ ನಮ್ಮೊಳಗಿನ ವಿಚಾರಗಳನ್ನು ತರ್ಕದ ತಳಹದಿಯಲ್ಲಿ ಪರೀಕ್ಷಿಸಿ ಮತ್ತೆ ನಮಗೆ ಕೂಡ ವಿಚಾರ ಮಾಡಲು ಅವಕಾಶ ಮಾಡಿಕೊಡುತ್ತದೆ.
ಓರ್ವ ವ್ಯಕ್ತಿಯ ವ್ಯಕ್ತಿತ್ವವು ನಿರ್ಧಾರವಾಗುವುದು ಆತ ರೂಢಿಸಿಕೊಂಡಿರುವ ಹವ್ಯಾಸಗಳ ಮೇಲೆ. ಅಂತೆಯೇ ಪಾಲಕರಾದವರು ತಮ್ಮ ಮಕ್ಕಳ ಹವ್ಯಾಸಗಳ ಕುರಿತು ಯೋಚಿಸಲೇಬೇಕು. ಹವ್ಯಾಸವು ವ್ಯಕ್ತಿಯ ( ಗುರುತಿನ ಚೀಟಿ ) ಐಡೆಂಟಿಟಿ ಕಾರ್ಡ್ ಗಳು ಇದ್ದಂತೆ ಆತನನ್ನು ಗುರುತಿಸುವಾಗ ಆತನ ಉತ್ತಮ ಹವ್ಯಾಸಗಳ ಮೂಲಕ ಗುರುತಿಸಿದರೆ ಅದಕ್ಕಿಂತ ಮತ್ತಿನ್ನೇನು ಬೇಕು.

ಪಾಲಕರು ಮಕ್ಕಳ ಬದುಕಿನಲ್ಲಿ ಹವ್ಯಾಸಗಳನ್ನು ರೂಢಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಾರೆ. ಅಂತೆಯೇ ಮಕ್ಕಳು ಎರಡು ವರ್ಷದವರಿದ್ದಾಗಲೇ ಆ ಮಕ್ಕಳಿಗೆ ತನ್ನ ಮನೆ, ತನ್ನ ಕುಟುಂಬ ಎಂಬ ಕುರಿತು ಅರಿವನ್ನು ಮೂಡಿಸಬೇಕು.. ನನ್ನ ಮನೆಯ ಚಿಕ್ಕಪುಟ್ಟ ಕೆಲಸಗಳನ್ನು ತಾನು ನಿರ್ವಹಿಸಬೇಕು ಎಂಬ ಜವಾಬ್ದಾರಿ ಪ್ರಜ್ಞೆಯನ್ನು ಮಗುವಿನಲ್ಲಿ ತುಂಬಬೇಕು. ವಸ್ತುಗಳನ್ನು ಆಯಾ ಸ್ಥಳಗಳಲ್ಲಿಯೇ ಇಡುವ ಹವ್ಯಾಸವನ್ನು ಮಕ್ಕಳಲ್ಲಿ ರೂಢಿಸಬೇಕು. ಮನೆಯಲ್ಲಿ ತಯಾರಿಸುವ ಆಹಾರವನ್ನು ಸೇವಿಸುವ ಸ್ವೀಕರಿಸುವ ಹವ್ಯಾಸಗಳನ್ನು ಚಿಕ್ಕಂದಿನಲ್ಲೇ ರೂಡಿಸಿದರೆ ಮುಂದೆ ಮಕ್ಕಳು ಆಹಾರದ ಕುರಿತು ಕಿರಿಕಿರಿ ಮಾಡುವುದಿಲ್ಲ.
ಮನೆಯ ರೀತಿ ನೀತಿಗಳನ್ನು ಮಕ್ಕಳಲ್ಲಿ ರೂಢಿಸಬೇಕು.
ಇನ್ನು ಮುಖ್ಯವಾಗಿ ಇತ್ತೀಚೆಗೆ ಮರೆಯಾಗುತ್ತಿರುವ ಆದರೆ ಸಾರ್ವಕಾಲಿಕ ಮಹತ್ವವನ್ನು ಪಡೆದಿರುವ ಮಕ್ಕಳಿಗೆ ಕಥೆಯನ್ನು ಹೇಳುವ ಮೂಲಕ ಅವರಲ್ಲಿ ಕಥೆಗಳನ್ನು ಕುತೂಹಲದಿಂದ ಕೇಳುವ, ಆಲಿಸುವ ಹವ್ಯಾಸವನ್ನು ರೂಢಿಸಲೇಬೇಕು. ಆಲಿಸುವ ಈ ಪ್ರಕ್ರಿಯೆಯ ಮೂಲಕ ಮುಂದೆ ಮಕ್ಕಳು ಬದುಕಿನಲ್ಲಿ ಎಲ್ಲ ವಿಷಯಗಳಲ್ಲಿಯೂ ಆಸಕ್ತಿಯನ್ನು ಹೊಂದಿ ಪಠ್ಯ ವಿಷಯಗಳನ್ನು ಕೂಡ ಕೇಳಿಸಿಕೊಳ್ಳುವ ಮೂಲಕ ಹೆಚ್ಚು ಜಾಣ್ಮೆಯನ್ನು ಹೊಂದುತ್ತಾರೆ.
ಈ ಹಿಂದೆ ಪ್ರತಿ ದಿನ ರಾತ್ರಿ ಮನೆಯಲ್ಲಿ ಮಕ್ಕಳು ಊಟ ಮಾಡುವಾಗ ಅವರಿಗೆ ಕೈ ತುತ್ತು ಹಾಕುವ ಅಜ್ಜಿ ಕಥೆಯ ಮೂಲಕ ಉನ್ನತ ಮೌಲ್ಯಗಳನ್ನು ಅವರ ಮನಸ್ಸಿನಲ್ಲಿ ತುಂಬುತ್ತಿದ್ದಳು. ಬಾಯಿಯ ಮೂಲಕ ಹೊಟ್ಟೆಗೆ ಪೋಷಕಾಂಶಯುಕ್ತ ಆಹಾರವನ್ನು ಸೇವಿಸುವ ಮಕ್ಕಳು ಕಿವಿಯ ಮೂಲಕ ಅಜ್ಜಿಯ ಕಥೆಯ ಮೌಲ್ಯದ ಸಾರವನ್ನು ಗ್ರಹಿಸಿ ರಸನೇಂದ್ರಿಯದ ಜೊತೆಗೆ ಶ್ರವಣೇಂದ್ರಿಯಕ್ಕೂ ಒಳ್ಳೆಯ ಆಹಾರವನ್ನು ಪಡೆಯುತ್ತಿದ್ದರು.
ಪ್ರತಿದಿನ ಮುಂಜಾನೆ ನಿಗದಿತವಾಗಿ ನಿತ್ಯ ಕರ್ಮಗಳನ್ನು ಮಕ್ಕಳಲ್ಲಿ ರೂಢಿಸಬೇಕು. ಮುಂಜಾನೆ ಮಕ್ಕಳು ಎದ್ದ ಕೂಡಲೇ ಹಲ್ಲುಜ್ಜಿ ಮುಖ ತೊಳೆಯುವ, ತಿಂಡಿ ತಿನ್ನುವ ಮುನ್ನ ಸ್ನಾನ ಮಾಡುವ ಪದ್ಧತಿಗಳನ್ನು ಮಕ್ಕಳಿಗೆ ಚಿಕ್ಕಂದಿನಿಂದಲೆ ರೂಢಿಸಬೇಕು. ಸ್ವಚ್ಛವಾದ ದೇಹ ಆರೋಗ್ಯಕ್ಕೆ ಮೂಲ ಆಕರವಾಗಿರುತ್ತದೆ. ಸ್ವಚ್ಛ ಶುದ್ಧವಾದ ದೇಹ ಮತ್ತು ಮನಸ್ಸು ಒಳ್ಳೆಯ ವಿಚಾರಗಳ ಚಿಂತನೆಗೆಡೆ ಮಾಡಿಕೊಡುತ್ತದೆ.
ಮುಂಜಾನೆ ಎದ್ದೊಡನೆ ನಿತ್ಯ ಕರ್ಮಗಳನ್ನು ಪೂರೈಸಿ ಸ್ನಾನ ಮಾಡುವ ವ್ಯಕ್ತಿ ಕ್ರಿಯಾಶೀಲನಾಗಿ ಇರುತ್ತಾನೆ. ಆತನ ವ್ಯಕ್ತಿತ್ವವೇ ಪಾದರಸದಂತೆ ತೋರುತ್ತದೆ.
ವ್ಯಕ್ತಿಯ ಶಾರೀರಿಕ, ಮಾನಸಿಕ ಮತ್ತು ಮನರಂಜನೆಯ ಮೂಲವಾಗಿ ಒಳ್ಳೆಯ ಹವ್ಯಾಸಗಳು ನಮ್ಮ ಬದುಕಿನಲ್ಲಿ ಒಳ್ಳೆಯ ಪ್ರಭಾವವನ್ನು ಬೀರುತ್ತವೆ.
ಹವ್ಯಾಸಗಳೇ ಬೇರೆ.. ಚಟವೇ ಬೇರೆ. ಒಳ್ಳೆಯ ಕೆಲಸ ಕಾರ್ಯಗಳನ್ನು ನಮ್ಮ ದೈನಂದಿನ ಬದುಕಿನಲ್ಲಿ ನಾವು ಅಳವಡಿಸಿಕೊಳ್ಳುವುದು ಹವ್ಯಾಸ. ಪ್ರತಿದಿನ ಯೋಗ, ವ್ಯಾಯಾಮ ಮಾಡುವುದು, ಸಾತ್ವಿಕ ಆಹಾರ ಸೇವನೆ, ಹಾಡನ್ನು ಹಾಡುವ, ಆಲಿಸುವ, ನೃತ್ಯ ಮಾಡುವ ವಿವಿಧ ವಿಷಯ ಗಳ ಕುರಿತು ಮಾಹಿತಿಯನ್ನು ಸಂಗ್ರಹಿಸುವ ಸ್ಟ್ಯಾಂಪ್ ಗಳನ್ನು ಸಂಗ್ರಹಿಸುವ ಹೀಗೆ ಹತ್ತು ಹಲವು ಒಳ್ಳೆಯ ಕೆಲಸಗಳನ್ನು ನಾವು ಹವ್ಯಾಸ ಎನ್ನುತ್ತೇವೆ. ವ್ಯಸನಗಳನ್ನು ದೈನಂದಿನ ಬದುಕಿನಲ್ಲಿ ರೂಢಿಸಿಕೊಂಡಾಗ ಅವು ಚಟಗಳ ರೂಪದಲ್ಲಿ ಪರಿಣಮಿಸುತ್ತವೆ. ಚಟಗಳು ದುಷ್ಟ ಪರಿಣಾಮವನ್ನು ಬೀರುತ್ತವೆ.
ಬುದ್ಧಂ ಶರಣಂ ಗಚ್ಛಾಮಿ
ಧಮ್ಮಮ್ ಶರಣಂ ಗಚ್ಛಾಮಿ
ಸಂಘಂ ಶರಣಂ ಗಚ್ಛಾಮಿ
ಎಂಬ ಬೌದ್ಧವಾಣಿಯಂತೆ ನಾವು ಒಳ್ಳೆಯ ಬದುಕನ್ನು ನಡೆಸಲು ಧರ್ಮದ ಮಾರ್ಗದಲ್ಲಿ ನಡೆಯಲು ನಾವು ಬುದ್ಧನಿಗೆ ಶರಣಾಗಬೇಕು ಅಂದರೆ ಗುರುವಿನ ಮಾರ್ಗದರ್ಶನದಲ್ಲಿ ನಡೆಯಬೇಕು. ಧರ್ಮದ ಮಾರ್ಗದಲ್ಲಿ ಒಳ್ಳೆಯವರ ಸಂಗದಲ್ಲಿ ನಡೆಯಬೇಕು.
” ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ” ಎಂಬ ಮಾತಿನಂತೆ ಒಳ್ಳೆಯ ಸಹವಾಸ ನಮ್ಮ ಮಕ್ಕಳಲ್ಲಿ ರೂಹಿಸಬೇಕು. ಮನೆಯ ವಾತಾವರಣಕ್ಕೆ ತಕ್ಕಂತೆ ಪ್ರೋತ್ಸಾಹಿಸುವ ಸ್ನೇಹಿತರ ಬಳಗವನ್ನು ಮಕ್ಕಳು ಹೊಂದಿದ್ದರೆ ಉತ್ತಮ ಬದುಕಿಗೆ ಪೂರಕ.


