ವಿಜಯಪುರದಲ್ಲಿ ಪಾಲಿಕೆ ಮಾಜಿ ಸದಸ್ಯ ರವೀಂದ್ರ ಲೋಣಿ ಆರೋಪ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿವಿಧ ಗ್ರಾಮೀಣ ಭಾಗಗಳನ್ನು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಸಚಿವ ಸಂಪುಟ ನಿರ್ಧಾರ ಮಾಡಿದೆ ಎಂದು ತಿಳಿದು ಬಂದಿದೆ, ಗ್ರಾಮಸಭೆ ನಡೆಸದೇ, ಆಕ್ಷೇಪಣೆಗೆ ಆಹ್ವಾನಿಸದೇ ಕೇವಲ ರಿಯಲ್ ಎಸ್ಟೇಟ್ ಧಂಧೆಗೆ ಅನುಕೂಲ ಕಲ್ಪಿಸಲು ಪಾಲಿಕೆ ವ್ಯಾಪ್ತಿ ವಿಸ್ತರಣೆ ಮಾಡಲಾಗುತ್ತಿದೆಯೇ ಎಂಬ ಆತಂಕ ಕಾಡುತ್ತಿದೆ, ಸಚಿವರು ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಪಾಲಿಕೆ ಮಾಜಿ ಸದಸ್ಯ ರವೀಂದ್ರ ಲೋಣಿ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ಮಹಾನಗರ ಪಾಲಿಕೆ ನೇತೃತ್ವದಲ್ಲಿ ಸಂಪೂರ್ಣವಾಗಿ ಅಭಿವೃದ್ಧಿ ಕಾರ್ಯ ನಡೆದಿಲ್ಲ, ಅನುದಾನದ ಕೊರತೆ ಸೇರಿದಂತೆ ಅನೇಕ ಸಮಸ್ಯೆ ತಾಂಡವವಾಡುತ್ತಿವೆ, ಇಂತಹ ಸಂದರ್ಭದಲ್ಲಿ ಪಾಲಿಕೆ ವ್ಯಾಪ್ತಿಯನ್ನು ವಿಸ್ತರಣೆ ಮಾಡುವುದು ಅವೈಜ್ಞಾನಿಕವೇ ಸರಿ ಎನ್ನುವುದು ನನ್ನ ಭಾವನೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲರು ಮಹಾನಗರ ಪಾಲಿಕೆ ವ್ಯಾಪ್ತಿ ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದುಕೊಂಡಿರುವ ಜಾಹೀರಾತು ಮಾದರಿಯ ಫೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ, ಈ ಬಗ್ಗೆ ಸ್ಪಷ್ಟೀಕರಣ ದೊರಕಬೇಕಿದೆ ಎಂದರು.
ಆಯಾ ಗ್ರಾಮಗಳು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾದರೆ ಆಯಾ ಗ್ರಾಮ ಸಭೆ ನಡೆಸಿ ಅಹವಾಲು ಆಲಿಸಬೇಕಾಗುತ್ತದೆ, ಆದರೆ ಈ ಪ್ರಕ್ರಿಯೆ ನಡೆದಿಲ್ಲ ಎಂದೇ ನನಗೆ ಸಂಶಯ ಕಾಡುತ್ತಿದೆ, ಈ ಎಲ್ಲ ಗ್ರಾಮಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಿದರೆ ಹಲವಾರು ರೀತಿಯ ತೆರಿಗೆ ಹೊರೆ ಗ್ರಾಮಸ್ಥರ ಮೇಲೆ ಬೀಳುತ್ತದೆ, ಲ್ಯಾಂಡ್ ವ್ಯಾಲ್ಯೂ ಹೆಚ್ಚುತ್ತದೆ ಎಂದ ಮಾತ್ರಕ್ಕೆ ಜಮೀನು ಮಾರಲು ಸಾಧ್ಯವೇ? ತೆರಿಗೆ ಹೊರೆ ಪ್ರತಿಯೊಬ್ಬರ ಮೇಲೂ ಬೀಳುತ್ತದೆ ಎಂದರು.
ಈ ರೀತಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಈ ನಿರ್ಧಾರ ಅನುಕೂಲಕರ, ಅವರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಈ ತಂತ್ರ ಮಾಡಲಾಗುತ್ತಿದೆಯೇ ಎಂಬ ಸಂಶಯವೂ ನನಗೆ ಕಾಡುತ್ತಿದೆ ಎಂದರು.
ಈಗಿರುವ ಪಾಲಿಕೆ ವ್ಯಾಪ್ತಿಯ ಸ್ಪಷ್ಟತೆ ಇಲ್ಲ. ಅನಧಿಕೃತ ಬಡಾವಣೆಗಳಿವೆ, ಸಾಕಷ್ಟು ಪಾಲಿಕೆ ಸದಸ್ಯರಿಗೆ ತಮ್ಮ ವಾರ್ಡ್ ವ್ಯಾಪ್ತಿಯ ಮಾಹಿತಿ ಇಲ್ಲ, ಯುಜಿಡಿ ಕಾಮಗಾರಿ ಅಪೂರ್ಣ, ಉದ್ಯಾನಗಳ ಅಭಿವೃದ್ಧಿ ಪೂರ್ಣ ಪ್ರಮಾಣದಲ್ಲಿ ಆಗದಿರುವಿಕೆ, ಹೀಗೆ ಮಹಾನಗರ ಪಾಲಿಕೆ ಮೊದಲೇ ಸಮಸ್ಯೆಗಳ ಸರಮಾಲೆಯನ್ನೇ ಎದುರಿಸುತ್ತಿದೆ, ಇಂತಹ ಸಂದರ್ಭದಲ್ಲಿ ಮತ್ತಷ್ಟು ಪಾಲಿಕೆ ವ್ಯಾಪ್ತಿ ವಿಸ್ತರಿಸಿರುವುದು ಎಷ್ಟು ಸರಿ ಎಂದು ಲೋಣಿ ಪ್ರಶ್ನಿಸಿದರು.
ಇಂದಿಗೂ ಕೋಟೆಗೋಡೆ ಆಚೆಯ ೧೦ ವಾರ್ಡ್ ಗಳು ಅಭಿವೃದ್ಧಿ ಆಗಿಲ್ಲ. ರಸ್ತೆಗಳು ಡಾಂಬರ್ ಕಂಡಿಲ್ಲ, ಚರಂಡಿ ಮೂಲ ಸೌಕರ್ಯ ಒದಗಿಸಲಾರದ ಸ್ಥಿತಿ ಪಾಲಿಕೆಯಲ್ಲಿದೆ. ಮಳೆ ಬಂದರೆ ಪ್ರವಾಹ, ಪದೇಪದೇ ಪರಿಹಾರ ಒದಗಿಸಿಲ್ಲ. ಕೋಟೆಗೋಡೆ ಕಂದಕಗಳ ಸ್ವಚ್ಛತೆ ಆಗಿಲ್ಲ, ಈ ಎಲ್ಲ ಸಮಸ್ಯೆಗಳು ವ್ಯಾಪಕವಾಗಿರುವ ಹೊತ್ತಿನಲ್ಲಿ ೧೮ ಗ್ರಾಮಗಳನ್ನು ಪಾಲಿಕೆಗೆ ಸೇರಿಸುವ ಪ್ರಯತ್ನ ನಡೆದಿರುವುದು ಸರಿಯಲ್ಲ ಎಂದರು.

