ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: “ಸಮಾಜದಲ್ಲಿದ್ದ ಅಸಮಾನತೆ, ಅನಿಷ್ಠ ಪದ್ಧತಿಗಳ ವಿರುದ್ಧ ತಮ್ಮ ಕೀರ್ತನೆಗಳ ಮೂಲಕ ಸಮರ ಸಾರಿದ ದಾಸಶ್ರೇಷ್ಠರು ಕನಕದಾಸರು. ಅವರ ಚಿಂತನೆಗಳು, ವಿಚಾರಗಳು ಮತ್ತು ಸಮಾಜ ಸುಧಾರಣೆಯ ದೃಷ್ಟಿಕೋನಗಳು ಇಂದಿಗೂ ಪ್ರಸ್ತುತ” ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ವಿಜಯಾ ಬಿ ಕೋರಿಶೆಟ್ಟಿ ಹೇಳಿದರು.
ಅವರು ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕನಕದಾಸ ಅಧ್ಯಯನ ಪೀಠದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಸಮಾರಂಭದಲ್ಲಿ ಮಾತನಾಡಿದ ಕುಲಸಚಿವ ಶಂಕರಗೌಡ ಸೋಮನಾಳ, “ಕನಕದಾಸರು ೧೫-೧೬ ನೇ ಶತಮಾನದಲ್ಲಿ ಸಮಾಜಿಕ ಸಮಾನತೆಗಾಗಿ ಹೋರಾಡಿದವರು. ಸಮಾಜದ ಢಾಂಬಿಕತೆ, ವರ್ಗ ಸಂಘರ್ಷದ ವಿರುದ್ಧ ಧ್ವನಿ ಎತ್ತಿದವರು. ಅವರು ಸಾಹಿತ್ಯ ಮೂಲಕ ಮಹಿಳಾ ಸಬಲೀಕರಣ ಹಾಗೂ ಸ್ತ್ರೀ ಸ್ವಾತಂತ್ರ್ಯದ ಅಗತ್ಯತೆಯ ಕುರಿತಾಗಿಯೂ ಮಾತನಾಡಿದ್ದಾರೆ. ಅಷ್ಟೇ ಅಲ್ಲದೇ ದಾಸ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವ ಮೂಲಕ ಸಮಾಜದಲ್ಲಿ ಧನಾತ್ಮಕ ಬದಲಾವಣೆಗಳನ್ನು ತಂದಿದ್ದಾರೆ” ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಐಕ್ಯೂಎಸಿ ನಿರ್ದೇಶಕ ಪ್ರೊ.ಪಿ.ಜಿ.ತಡಸದ, “ಪಾಳೇಗಾರನಾಗಿದ್ದ ಕನಕದಾಸರು, ವ್ಯಾಸರಾಯರಿಂದ ಪ್ರೇರಿತರಾಗಿ ಎಲ್ಲವನ್ನೂ ತೊರೆದು, ಭಕ್ತಿಗಾಗಿ, ಸಮಾಜ ಸುಧಾರಣೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು. ಸಂಗೀತ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾದದ್ದು” ಎಂದರು.
ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ವಿಶ್ವವಿದ್ಯಾನಿಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್.ಲಕ್ಕಣ್ಣನವರ, ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ಸಂದೀಪ್ ಸ್ವಾಗತಿಸಿದರು. ವಂದಿಸಿದರು.

