ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕಳೆದ ನೂರು ವರ್ಷಗಳಿಂದ ರಾಷ್ಟ್ರ ಪುನರ್ ನಿರ್ಮಾಣದ ಈ ಮಹಾನ್ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇಡೀ ಸಮಾಜವನ್ನು ಸಂಘಟಿಸುವ ಕಾರ್ಯ ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾಡುತ್ತಿದೆ ಎಂದು ಅಶೋಕ ಅಲ್ಲಾಪುರ ಹೇಳಿದರು.
ಸಿಂದಗಿ ಪಟ್ಟಣದ ಜ್ಯೋತಿ ನಗರದ ಲಕ್ಷ್ಮಿ ದೇವಸ್ಥಾನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಘಟನೆ ಮತ್ತು ಸೇವೆಗಳ ೧೦೦ ವರ್ಷಗಳ ಯಾತ್ರೆಯ ಗೃಹ ಸಂಪರ್ಕ ಅಭಿಯಾನದ ಕರಪತ್ರಗಳನ್ನು ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡಿದ ಅವರು, ೧೯೨೫ರ ವಿಜಯದಶಮಿಯಂದು ಪ್ರಾರಂಭವಾದ ಆರ್‌ಎಸ್‌ಎಸ್ ಸಂಘಕ್ಕೆ ಇದೀಗ ನೂರರ ಸಂಭ್ರಮ. ಸಂಘ ಇಂದು ಪ್ರಪಂಚಕ್ಕೆ ಅತಿದೊಡ್ಡ ಸಾಮಾಜಿಕ ಸಂಘಟನೆಯಾಗಿ ಬೆಳೆದಿದೆ. ಲಕ್ಷಾಂತರ ಜನರನ್ನು ಸೇವಾಕಾರ್ಯ ಮತ್ತು ಸಮಾಜದ ಚಟುವಟಿಗಳಲ್ಲಿ ತೊಡಗಿಸಿದೆ. ಹಾಗಾಗಿ ಸಂಘದ ಕುರಿತಾಗಿ ಇನ್ನಷ್ಟು ಜನರಲ್ಲಿ ತಿಳುವಳಿಕೆ ಮತ್ತು ಸಂಘ ನಡೆದುಕೊಂಡು ಬಂದ ದಾರಿಯ ಬಗ್ಗೆ ಗೃಹ ಸಂಪರ್ಕ ಅಭಿಯಾನದ ಮೂಲಕ ಜಾಗೃತಿ ಮೂಡಿಸುವ ದಿಸೆಯಲ್ಲಿ ಈ ಆಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲರೂ ನಗರದ ಮನೆ-ಮನೆಗಳಿಗೆ ತೆರಳಿ ಸಂಘದ ಸೇವೆಗಳ ಕರಪತ್ರಗಳನ್ನು ನೀಡಿ ಈ ರಾಷ್ಟ್ರ ಕಾರ್ಯದಲ್ಲಿ ಎಲ್ಲ ಸಹೋದರ, ಸಹೋದರಿಯರು, ತಾಯಂದಿರು ತಮ್ಮ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಸಕ್ರಿಯ ಪಾತ್ರ ವಹಿಸಬೇಕೆಂಬ ವಿನಂತಿ ನಮ್ಮದು. ಭಾರತ ಮಾತೆಯ ರಥವನ್ನು ಎಳೆಯಲು ಎಲ್ಲರ ಕೈಗಳು ಮತ್ತು ಶಕ್ತಿ ಸೇರಲಿ. ಭಾರತಾಂಭೆಯನ್ನು ಪರಮ ವೈಭವದೊಂದಿಗೆ ಕೊಂಡೊಯ್ಯೋಣ ಎಂದರು.
ಈ ವೇಳೆ ಮಾಜಿ ಶಾಸಕ ರಮೇಶ ಭೂಸನೂರ, ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಶೇಖರ ಪಾಟೀಲ, ಬಸನಗೌಡ ಪಾಟೀಲ, ಮಲ್ಲು ಮಣಿಕಂಠ, ಪ್ರಶಾಂತಗೌಡ ಪಾಟೀಲ ಸೇರಿದಂತೆ ರಾಷ್ಟ್ರೀಯ ಸ್ವಯಂಸೇವಕರು ಇದ್ದರು.

