ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪ್ರತಿಯೊಂದು ಮಗುವು ತನ್ನದೇ ಆದ ಪ್ರತಿಭೆಯನ್ನು ಹೊಂದಿರುತ್ತದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರ ಹಾಕುವ ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ಶಾಲೆಗಳಲ್ಲಿ ಜರುಗಬೇಕು ಎಂದು ಬೆನ್ನಕೊಟಗಿ ಕಿರಿಯ ಪ್ರಾಥಮಿಕ ಶಾಲೆ ಸಹಾಯಕ ಮುಖ್ಯೋಪಾಧ್ಯಾಯ ಎಸ್.ವಿ.ಉಪ್ಪಿನ ಹೇಳಿದರು.
ಸಿಂದಗಿ ಪಟ್ಟಣದ ಹೊರವಲಯದ ಭೀಮಾ ಯುನಿವರ್ಸಲ್ ಸೆಂಟ್ರಲ್ ಶಾಲೆಯಲ್ಲಿ ಹಮ್ಮಿಕೊಂಡ ಯುವಜನೋತ್ಸವ ಕಾರ್ಯಕ್ರಮದ ನಿರ್ಣಾಯಕರಾಗಿ ಆಗಮಿಸಿ ಮಾತನಾಡಿದ ಅವರು, ಅವರ ಆಸಕ್ತಿಗೆ ಅನುಗುಣವಾಗಿ ಮಕ್ಕಳಿಗೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳುವುದರಿಂದ ಮಕ್ಕಳ ಮಾನಸಿಕ, ಬೌದ್ಧಿಕ ಮತ್ತು ದೈಹಿಕ ಸಧೃಡತೆಗೆ ಸಹಕಾರಿಯಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಶಾಲೆಯ ನಿರ್ದೇಶಕ ಡಾ.ಎಂ.ಎಂ.ಪಡಶೆಟ್ಟಿ, ಶಿಕ್ಷಣ ಮಗುವಿನ ಸರ್ವತೋಮುಖ ಬೆಳೆವಣಿಗೆಗೆ ಕಾರಣವಾಗಿದೆ. ಮಕ್ಕಳ ಆಂತರ್ಯದಲ್ಲಿ ಹುದುಗಿರುವ ಪ್ರತಿಭೆ ಮತ್ತು ಸಂಸ್ಕಾರ ಹೊರಹಾಕುವುದು ಶಿಕ್ಷಣದಿಂದ ಮಾತ್ರ ಸಾಧ್ಯ. ಪ್ರತಿ ವರ್ಷದಂತೆ ಶಾಲೆಯಲ್ಲಿ ಎರಡು ದಿನಗಳ ಕಾಲ ಯುವಜನೋತ್ಸವ ಕಾರ್ಯಕ್ರಮ ಆಯೋಜಿಸಲಾಗುವುದು. ಇದರಿಂದ ಮಗುವಿನ ದೈಹಿಕ, ಮಾನಸಿಕ, ಭೌದ್ಧಿಕ ಬೆಳೆವಣಿಗೆ ಜೊತೆಗೆ ಮಾನಸಿಕವಾಗಿ ಸದೃಢಗೊಳಿಸುವ ಮೂಲಕ ಕಲಿಕೆಗೆ ಅನುವು ಮಾಡಿಕೊಡುವುದು ಎಂದರು.
ಈ ವೇಳೆ ಶಾಲೆಯ ಪ್ರಾಂಶುಪಾಲೆ ಶಾಹಿನ್ ಶೇಖ್ ಮಾತನಾಡಿ, ಮಕ್ಕಳ ಆಸೆ ಮತ್ತು ಆಸಕ್ತಿಯನ್ನು ಪಾಲಕರು ಮತ್ತು ಶಿಕ್ಷಕರು ಗುರುತಿಸಿ ಅವರಿಗೆ ಯಾವುದರಲ್ಲಿ ಆಸಕ್ತಿ ಇದೆಯೋ ಆ ಕಾರ್ಯಚಟುಕೆಯ ಬೆಳೆವಣಿಗೆ ಸಹಕರಸಿ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ಯುವಜನೋತ್ಸವ ನಿಮಿತ್ಯ ಮಕ್ಕಳಿಗಾಗಿ ಹಮ್ಮಿಕೊಂಡ ನೃತ್ಯ, ಮಿಮಿಕ್ರಿ, ಫುಡ್ ಕಾರ್ನಿವಾಲ್, ಮಡಿಕೆ ಮೇಲೆ ಕರಕುಶಲ ಚಿತ್ರ ಬಿಡಿಸುವುದು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ನಿರ್ದೇಶಕ ಜಿ.ಕೆ.ಪಡಗಾನೂರ, ಶರಣು ಮಾವೂರ, ಶಾಂತು ಕುಂಬಾರ, ಭೀಮಾಶಂಕರ ತಾರಾಪೂರ ಸೇರಿದಂತೆ ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳಿದ್ದರು.

