ಸಿಂದಗಿಯಲ್ಲಿ ಕಬ್ಬಿನ ದರ ನಿಗದಿಗಾಗಿ ರೈತ ಸಂಘಟನೆಗಳ ನೇತೃತ್ವದಲ್ಲಿ ಬೆಳೆಗಾರರ ಹೋರಾಟ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕಬ್ಬಿನ ದರ ನಿಗದಿಗಾಗಿ ಆಗ್ರಹಿಸಿ ಗುರ್ಲಾಪುರ ಕ್ರಾಸ್‌ದಿಂದ ಪ್ರಾರಂಭವಾದ ರೈತರ ಪ್ರತಿಭಟನೆಯ ಕಿಡಿ ಇದೀಗ ರಾಜ್ಯದಾದ್ಯಂತ್ಯ ವ್ಯಾಪಿಸಿದೆ. ನ್ಯಾಯಯುತ ಬೆಲೆ ಪಡೆದೇ ತೀರುವ ದಿಸೆಯಲ್ಲಿ ಕಬ್ಬು ಬೆಳೆಗಾರರು ರೈತ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ನಡೆಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಗೌರವಾಧ್ಯಕ್ಷ ದಾನಪ್ಪಗೌಡ ಚನಗೊಂಡ ಹೇಳಿದರು.
ಸಿಂದಗಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಹಾಗೂ ಕಬ್ಬು ಬೆಳೆಗಾರರ ವತಿಯಿಂದ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ತಾಲೂಕು ದಂಡಾಧಿಕಾರಿ ಕರೆಪ್ಪ ಬೆಳ್ಳಿ ಅವರ ಮೂಲಕ ಸಿಎಂ ಮತ್ತು ಸಚಿವರಿಗೆ ಮನವಿ ಸಲ್ಲಿಸುವ ಪೂರ್ವದಲ್ಲಿ ಮಾತನಾಡಿದ ಅವರು, ಕಬ್ಬಿನ ದರ ನಿಗದಿಗಾಗಿ ರೈತರು ಮಾಡುತ್ತಿರುವ ಹೋರಾಟಕ್ಕೆ ಸರಕಾರ ಕೂಡಲೇ ಸ್ಪಂದಿಸಬೇಕು. ಇಲ್ಲವಾದರೆ ನ್ಯಾಯ ದೊರೆಯುವವರೆಗೂ ರೈತರ ಹೋರಾಟ ಮುಂದುವರೆಯಲಿದೆ. ರಾಜ್ಯದಲ್ಲಿ ಇಷ್ಟೆಲ್ಲ ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದರು ಸಕರಾರ ಕ್ಯಾರೆ ಎನ್ನುತ್ತಿಲ್ಲ ಎಂದರೆ ಇದು ಲಜ್ಜೆಗೆಟ್ಟ ಸರಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಯಂಕಂಚಿ ಶ್ರೀಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಬೆಂಬಲ ಸೂಚಿಸಿ ಮಾತನಾಡಿದ ಅವರು, ರೈತರು ಈ ದೇಶದ ಬೆನ್ನೆಲುಬು ಎಂದು ಹೇಳುವ ಸರಕಾರ ರೈತರ ಹೋರಾಟಕ್ಕೆ, ಬೆಳೆದ ಬೆಳಗೆ ನಿಗದಿತ ದರ ನೀಡಲು ಮಿನಾಮೇಷ ಎಣಿಸುತ್ತಿರುವುದು ವಿಷಾದನೀಯ. ಅಧಿಕಾರದ ಚಿಕ್ಕಾಣಿ ಹಿಡಿಯುವಾಗ ರೈತರು ಬೇಕು, ಅವರ ಸಮಸ್ಯೆಗಳಿಗೆ ಪರಿಹಾರ ನೀಡಲು ನಿರಾಸಕ್ತಿ ಎಂದರೆ ಹೇಗೆ ಎಂದು ಪ್ರಶ್ನಿಸಿದರು. ಮತ್ತು ನಿಮ್ಮ ಸಮಸ್ಯೆಗಳಿಗೆ ಮಠಾಧೀಶರು ಯಾವಗಲೂ ಸನ್ನದ್ಧರಾಗಿರುತ್ತೇವೆ ಎಂದರು.
ಈ ವೇಳೆ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಕಬ್ಬಿನ ಬೆಲೆ ನಿಗದಿಗಾಗಿ ಕಳೆದ ೮ದಿನಗಳಿಂದ ನಡೆಯುತ್ತಿರುವ ಹೋರಾಟ ಶೋಚನೀಯ. ಏಕೆಂದರೆ ಕರ್ನಾಟಕ ಹೊರತುಪಡಿಸಿ ಬೇರೆಲ್ಲ ರಾಜ್ಯಗಳಲ್ಲಿ ರೂ.೩೫೦೦ಬೆಲೆ ನೀಡುತ್ತಿದ್ದಾರೆ. ಕೇಂದ್ರ ಸರಕಾರವು ಘೋಷಣೆ ಮಾಡಿದ್ದಾಗಿದೆ. ಆದರೆ ರಾಜ್ಯ ಸರಕಾರ ಆ ನಿಟ್ಟಿನಲ್ಲಿ ಮನಸ್ಸು ಮಾಡುತ್ತಿಲ್ಲ. ಈ ಬಾರಿ ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಹೆಚ್ಚಾಗಿ ಬೆಳೆ ನಾಶವಾಗಿವೆ. ಅಲ್ಪ ಸ್ವಲ್ಪ ಉಳಿದದ್ದು ಕಬ್ಬು ಮಾತ್ರ. ಅದಕ್ಕೆ ರಾಜ್ಯ ಸರಕಾರ ರೈತರ ಬೇಡಿಕೆಯನ್ನು ಸಾಧ್ಯವಾದಷ್ಟು ಬೇಗ ಈಡೇರಿಸಲಿ. ಕರ್ನಾಟಕ ಕಾರ್ಖಾನೆಗಳ ಮಾಲೀಕರು ನಷ್ಟದಲ್ಲಿವೆ ಎಂದು ಹೇಳುತ್ತಾರೆ ಆದರೆ ಒಮ್ಮೆ ನೆರೆಯ ಮಹಾರಾಷ್ಟ್ರದ ಕಾರ್ಖಾನೆಗಳಿಗೆ ಬೇಟಿ ನೀಡಿ ಬರಲು ತಯ್ಯಾರಿಲ್ಲ. ಕೇವಲ ತಮ್ಮ ಲಾಭಕ್ಕಾಗಿ ಮಾತ್ರ ಬಡಿದಾಡುತ್ತಾರೆ ಹೊರತು ರೈತರ ಸಮಸ್ಯೆಗಳನ್ನು ಕೇಳುವ ಮನಸ್ಥಿತಿ ಅವರಲ್ಲಿ ಇರದೇ ಇರುವುದು ಶೋಚನೀಯ ಸಂಗತಿ ಎಂದು ಭೆಸರ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಅಶೋಕ ಅಲ್ಲಾಪೂರ, ಚಂದ್ರಗೌಡ ಪಾಟೀಲ, ಬಸವರಾಜ ಐರೋಡಗಿ, ಮಲ್ಲಣ್ಣ ಮನಗೂಳಿ, ಎಂ.ಎ.ಉಸ್ತಾದ ಮಾತನಾಡಿದರು.
ಮನವಿ ಸ್ವೀಕರಿಸಿದ ಬಳಿಕ ತಹಶೀಲ್ದಾರ್ ಕರೆಪ್ಪ ಬೆಳ್ಳಿ ಮಾತನಾಡಿ, ಈಗಾಗಲೇ ಜಿಲ್ಲಾಧಿಕಾರಿಗಳು ಕಾರ್ಖಾನೆ ಅಧಿಕಾರಿಗಳ ಸಭೆಯನ್ನು ಕೈಗೊಂಡು ಕಬ್ಬಿನ ಬೆಲೆಯನ್ನು ನಿಗದಿ ಮಾಡಿ ಅದರ ಪ್ರತಿಯನ್ನು ಜಿಲ್ಲಾಧಿಕಾರಿ ಮತ್ತು ತಾಲೂಕು ದಂಡಾಧಿಕಾರಿಗಳಿಗೆ ಪ್ರತಿ ನೀಡಬೇಕು ಎಂದು ತಿಳಸಿದ್ದಾರೆ. ದರ ನಿಗದಿ ಮಾಡಿರುವ ಪ್ರತಿ ನೀಡುವವರೆಗೂ ಕರ್ಖಾನೆ ಪ್ರಾರಂಭ ಮಾಡ ಕೂಡದು ಎಂದು ಸೂಚಿಸಿದ್ದಾರ ಎಂದರು.
ಪ್ರತಿಭಟಿನೆಯು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಪ್ರಾರಂಭಗೊಂಡು ದಿ.ರೇ.ಚ.ರೇವಡಿಗಾರ ರಸ್ತೆಯ ಮಾರ್ಗವಾಗಿ ಅಂಬಿಗೇರ ಚೌಡಯ್ಯ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತದಿಂದ ಸಾಗಿ ಬಸವೇಶ್ವರ ವೃತ್ತದವರೆಗೆ ಸಾಗಿ ಬಂದಿತು. ಈ ವೇಳೆ ಶಂಕರಗೌಡ ಬಿರಾದಾರ, ಹಣಮಂತ ಬಿಜಾಪೂರ, ಬಾಪುಗೌಡ ಬಗಲಿ, ಬಸವರಾಜ ಪಿರಶೆಟ್ಟಿ, ಕಾಸಪ್ಪ ಪಡದಳ್ಳಿ, ಶಿವಲಿಂಗಪ್ಪ ಡಂಬಳ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

