ಕೊಲ್ಹಾರದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ | ಜಿಲ್ಲಾಧಿಕಾರಿ & ಮುಖ್ಯಮಂತ್ರಿಗೆ ರೈತ ಸಂಘ ಮುಖಂಡರಿಂದ ಮನವಿ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪಟ್ಟಣದ ಯುಕೆಪಿಯ ಕೊರೆಮ್ಮ ದೇವಿ ದೇವಸ್ಥಾನದ ಹತ್ತಿರ ವಿಜಯಪುರ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 52 (218) ರಲ್ಲಿ ಒಂದು ಟನ್ ಕಬ್ಬಿಗೆ 3400 ದರ ನಿಗದಿಪಡಿಸಬೇಕು ಎಂದು ಸುಮಾರು ಒಂದು ಗಂಟೆಯವರೆಗೆ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಲಾಯಿತು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ ಸಂತೋಷ ಮ್ಯಾಗೇರಿ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಹಾಗೂ ಮುಖ್ಯಮಂತ್ರಿಗಳಿಗೆ ರೈತ ಸಂಘದ ಮುಖಂಡರು ಮನವಿ ಸಲ್ಲಿಸಿದರು.
ಈ ವೇಳೆ ತಾಲೂಕಾಧ್ಯಕ್ಷ ಸೋಮು ಬಿರಾದಾರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆಯುವಂತಹ ಶುಕ್ರವಾರದ ಸಭೆಯಲ್ಲಿ ಬೆಳಗಾವಿ ಹಾಗೂ ಬಾಗಲಕೋಟ ಜಿಲ್ಲೆಗಳಿಗೆ ಪ್ರತಿ ಟನ್ ಕಬ್ಬಿಗೆ ಯಾವ ಬೆಂಬಲ ಬೆಲೆ ನಿಗದಿ ಘೋಷಣೆ ಮಾಡುತ್ತಿರೋ, ವಿಜಯಪುರ ಜಿಲ್ಲೆಯ ರೈತರಿಗೂ ಕೂಡಾ ಅದೇ ದರವನ್ನು ನೀಡಬೇಕು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಹಾಗೂ ಸಕ್ಕರೆ ಸಚಿವರು ಒಡೆದು ಆಳದೆ 3 ಜಿಲ್ಲೆಗಳಿಗೆ ಒಂದೇ ದರವನ್ನು ನೀಡಬೇಕು. ಒಂದು ವೇಳೆ ವ್ಯತ್ಯಾಸವಾದರೆ ಇದೇ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆಯನ್ನು ಮುಂದುವರೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿ ತಹಶೀಲ್ದಾರ ಸಂತೋಷ ಮ್ಯಾಗೇರಿ ಮಾತನಾಡಿ, ತಾವು ಶಾಂತ ರೀತಿಯಿಂದ ಪ್ರತಿಭಟನೆ ಮಾಡಿದ್ದಕ್ಕಾಗಿ ತಾಲೂಕಾಡಳಿತದಿಂದ ಅಭಿನಂದನೆ ಸಲ್ಲಿಸುತ್ತೇನೆ. ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ತಮ್ಮ ಬೇಡಿಕೆಯನ್ನು ತಿಳಿಸಿದ್ದೇನೆ. ಕೂಡಲೇ ಈ ಮನವಿಯನ್ನು ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ಕಳುಹಿಸುವಂತೆ ಮನವಿ ಮಾಡುತ್ತೇನೆ ಎಂದರು.
ಬಸವನ ಬಾಗೇವಾಡಿ, ಕೊಲ್ಹಾರ, ನಿಡಗುಂದಿ ಹಾಗೂ ಬಬಲೇಶ್ವರ ತಾಲೂಕಿನಿಂದ ರೈತರು ಹಾಗೂ ರೈತ ಮಹಿಳೆಯರು ಆಗಮಿಸಿ ಕಾರ್ಖಾನೆ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರಾಷ್ಟ್ರೀಯ ಹೆದ್ದಾರಿ ಮೇಲೆ ಕುಳಿತ ರೈತರು ರಸ್ತೆ ಮದ್ಯ ಕಬ್ಬನ್ನು ನಿಲ್ಲಿಸಿ ಸುಮಾರು ಒಂದು ಘಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ರೈತರ ಪ್ರತಿಭಟನೆಗೆ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ), ಹಿಂದೂ ಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಬೆಂಬಲ ಸೂಚಿಸಿದರು.
ಡಿವೈಎಸ್ ಪಿ ಬಲ್ಲಪ್ಪ ನಂದಗಾವಿ , ಸಿಪಿಐ ಶರಣಗೌಡ ಗೌಡರ, ಪಿಎಸ್ ಐ ಅಶೋಕ ನಾಯಕ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.
ಈ ವೇಳೆ ಕಲ್ಲಪ್ಪ ಗಿಡ್ಡಪ್ಪಗೊಳ, ಶಶಿಕಾಂತ ಬಿರಾದಾರ, ವಿರೂಪಾಕ್ಷಿ ಕೋಲಕಾರ, ವಿಜಯಮಾಂತೇಶ ಗಿಡ್ಡಪ್ಪಗೊಳ, ಮುದಕಣ್ಣ ಚಲವಾದಿ, ರವಿ ಪಾಟೀಲ, ಅನಿಲ ಹಿರೇಮಠ, ಶ್ರೀಶೈಲ ಬೆನ್ನೂರ, ಯಲ್ಲಪ್ಪ ಗೂಳಗೊಂಡ, ಸತ್ಯಪ್ಪ ಕುಳ್ಳೊಳ್ಳಿ, ಗೋಪಾಲ್ ಕಾಖಂಡಕಿ, ಬಸವರಾಜ್ ಯಾಳವಾರ, ಶಶಿಕಾಂತ್ ಬಿರಾದಾರ, ಸಂಗಪ್ಪ ಅಥಣಿ, ಯಲ್ಲಪ್ಪ ಸೊನ್ನದ, ಜಗದೀಶ ಸುನಗದ್, ಮಹೇಶ್ ತುಂಬರಮಟ್ಟಿ, ಶ್ರೀಶೈಲ್ ಸೊನ್ನ, ಯಮುನಪ್ಪ ಅಥನಿ, ಹನುಮಂತ ಮುಳವಾಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

