ವಿಜಯಪುರ: ಆ್ಯಂಟಿ ಬಯೋಟಿಕ್ಸ್ ಗಳನ್ನು ಹಿತವಾಗಿ ಮತ್ತು ಮಿತವಾಗಿ ಬಳಸದಿದ್ದರೆ ಭವಿಷ್ಯದಲ್ಲಿ ಸೋಂಕುಗಳಿಗೆ ಆ್ಯಂಟಿ ಬಯೋಟಿಕ್ಸ್ ಗಳು ಲಭ್ಯವಾಗುವುದಿಲ್ಲ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಹೇಳಿದ್ದಾರೆ.
ಶುಕ್ರವಾರ ವಿವಿಯಲ್ಲಿ ನಡೆದ ಉತ್ತಮ ನಾಳೆಗಾಗಿ ಆ್ಯಂಟಿ ಬಯೋಟಿಕ್ಸ್ ಉಳಿಸಿ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸೋಂಕುಗಳಿಗೆ ಆ್ಯಂಟಿ ಬಯೋಟಿಕ್ಸ್ ಅಗತ್ಯ. ಆದರೆ, ಅವುಗಳ ಸದ್ಬಳಕೆಯಾಗದಿದ್ದರೆ ಮುಂದೆ ಯಾವುದೇ ಸೋಂಕುಗಳಿಗೆ ಅವು ಲಭ್ಯ ಇರುವುದಿಲ್ಲ. ಈ ಬಗ್ಗೆ ಎಲ್ಲರೂ ಜಾಗೃತೆ ವಹಿಸಬೇಕು ಎಂದು ಡಾ. ವೈ. ಎಂ. ಜಯರಾಜ ಹೇಳಿದರು.
ವಿವಿ ಕುಲಪತಿ ಡಾ. ಆರ್. ಎಸ್. ಮುಧೋಳ ಮಾತನಾಡಿ, ರೋಗಿಯ ಜೀವನ ಉಳಿಸಲು ಆ್ಯಂಟಿ ಬಯೋಟಿಕ್ಸ್ ಸದುಪಯೋಗಕ್ಕೆ ವೈದ್ಯರು ಮತ್ತು ಸೂಕ್ಷ್ಮ ಜೀವಾಣು ತಜ್ಞರು ಕೈ ಜೋಡಿಸಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಆ್ಯಂಟಿ ಬಯೋಟಿಕ್ಸ್ ದುರ್ಬಳಕೆ, ಮಿತಿ ಮೀರಿದ ಬಳಕೆಯಿಂದಾಗುವ ದುಷ್ಪರಿಣಾಮಗಳು ಹಾಗೂ ಸೂಪರ್ ಬಗ್ಸ್ ಎಂದು ಕರೆಯಲಾಗುವ ಮಲ್ಟಿ ಡ್ರಗ್- ನಿರೋಧಕ ಬ್ಯಾಕ್ಟೇರಿಯಾ ಸೃಷ್ಠಿಯ ಬಗ್ಗೆ ಕಾರ್ಯಾಗಾರದಲ್ಲಿ ವಿಚಾರ ವಿನಿಮಯ ನಡೆಯಿತು.
ಈ ಕಾರ್ಯಾಗಾರದಲ್ಲಿ ಡಾ. ಜ್ಯೋತಿ ಪಿ ಮತ್ತು ಡಾ. ಅಸಿಮಾ ಬಾನು ಅವರು ಆ್ಯಂಟಿಮೈಕ್ರೊಬಯಲ್ ಸ್ಟೆವಾರ್ಡಶಿಪ್ ಕುರಿತು ಮಾಹಿತಿ ನೀಡಿದರು. ಡಾ. ಶಂತನು ಅವರು ಅಡ್ವಾನ್ಸ್ ಇನ್ ಅಟೋಮೇಟೆಡ್ ಮೈಕ್ರೋಬಯೋಲಾಜಿ, ಡಾ. ಸುಕನ್ಯ ಆರ್. ಅವರು ಶಸ್ತ್ರಚಿಕಿತ್ಸೆ ನಂತರದ ಸೋಂಕು ತಡೆಗಟ್ಟುವ ಕ್ರಮಗಳು, ಡಾ. ಚಿನ್ನದೊರೈ ಅವರು ತೀವ್ರ ನಿಗಾ ಘಟಕದಲ್ಲಿ ಸೋಂಕುಗಳ ತಡೆಗಟ್ಟುವ ಕುರಿತು, ಡಾ. ಸಂಗೀತಾ ಸಂಪತ್ ಅವರು ಆ್ಯಂಟಿಬಯೋಟಿಕ್ಸ್ ರೋಗ ನಿರೋಧಕದ ಕುರಿತು ಹಾಗೂ ಡಾ. ರಕ್ಷಾ ಭಟ್ ಅವರು ರೋಗ ನಿರ್ಣಯ ವಿಧಾನಗಳ ಬಗ್ಗೆ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ವಿವಿ ರಜಿಸ್ಟ್ರಾರ್ ಡಾ. ರಾಘವೇಂದ್ರ ಕುಲಕರ್ಣಿ, ಪ್ರಾಚಾರ್ಯ ಡಾ. ಆರವಿಂದ ಪಾಟೀಲ, ಉಪಪ್ರಾಚಾರ್ಯ ಡಾ. ಎಂ. ಬಿ. ಪಾಟೀಲ, ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ,ಬೆಂಗಳೂರಿನ ಡಾ. ಸುಕನ್ಯ ಆರ್. ಮೆಡನೋಮ, ಡಾ. ಚಿನ್ನದೊರೈ, ಡಾ. ರಕ್ಷಾ ಭಟ್ ಮುಂತಾದವರು ಉಪಸ್ಥಿತರಿದ್ದರು.
ಡಾ. ಅನ್ನಪೂರ್ಣ ಸಜ್ಜನ್ ಸ್ವಾಗತಿಸಿದರು. ಡಾ. ಲಕ್ಷ್ಮಿ ಕಾಖಂಡಕಿ ವಂದಿಸಿದರು.
ಈ ಕಾರ್ಯಾಗಾರದಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ ಸೇರಿದಂತೆ ಮಹಾರಾಷ್ಟ್ರ ಹಾಗೂ ತೆಲಂಗಾಣಗಳಿಂದ ಸುಮಾರು 240 ವೈದ್ಯ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಆ್ಯಂಟಿ ಬಯೋಟಿಕ್ಸ್ ಮಿತವಾಗಿ ಬಳಸದಿದ್ದರೆ ಭವಿಷ್ಯದಲ್ಲಿ ಅಲಭ್ಯ
Related Posts
Add A Comment