ವಿಜಯಪುರದಲ್ಲಿ ಜಿಲ್ಲಾಧಿಕಾರಿ ಡಾ.ಆನಂದ. ಕೆ. ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಸತಿ ನಿಲಯಗಳು ಮಕ್ಕಳ ಭವಿಷ್ಯ ರೂಪಿಸುವ ಕಲಿಕಾ ಕೇಂದ್ರಗಳಾಗಿದ್ದು, ಈ ಕೇಂದ್ರಗಳಲ್ಲಿ ಮಕ್ಕಳ ಓದಿಗೆ ಪೂರಕವಾಗಿ ಅವರ ಉತ್ತಮ ವ್ಯಕ್ತಿತ್ವ ರೂಪಿಸಲು ಮನೆಯ ವಾತಾವರಣ ನಿರ್ಮಿಸುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಹೇಳಿದರು.
ಜಿಲ್ಲಾಡಳಿತ,ಜಿಲ್ಲಾ ಪಂಚಾಯತ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಹಯೋಗದೊಂದಿಗೆ ನಗರದ ಫರ್ಲ ಹೊಟೇಲ್ ಹಿಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ಆವರಣದಲ್ಲಿ ಶುಕ್ರವಾರ ಸಂಜೆ ನಡೆದ 2025-26ನೇ ಸಾಲಿನ ವಸತಿ ನಿಲಯ ವಾಸ್ತವ್ಯ ಹಾಗೂ ವಿವಿಧ ವಿನೂತನ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಹಾಗೂ ಕ್ರೀಡಾಕೂಟ- ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ
ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಈಗಾಗಲೇ ಜಿಲ್ಲಾಮಟ್ಟದ ಅಧಿಕಾರಿಗಳನ್ನು
ಹಾಸ್ಟೆಲ್ ಮೆಂಟರ್ ಗಳಾಗಿ ನೇಮಿಸಿ,ಬಿಡುವು ಮಾಡಿಕೊಂಡು ನಿಯೋಜಿಸಿದ ವಸತಿ ನಿಲಯಗಳಿಗೆ ಆಗಾಗ ತೆರಳಿ, ಮಕ್ಕಳೊಂದಿಗೆ ಬೆರೆತು ಅವರ ಕಲಿಕೆ ಮನೋಸ್ಥೈರ್ಯ ಬೆಳೆಸುವುದರ ಜೊತೆಗೆ ನಿಲಯ ಪಾಲಕರ ಜೊತೆಗೂಡಿ ಹಾಸ್ಟೇಲ್ ಸುಧಾರಣೆ ಮಾಡುತ್ತಿದ್ದಾರೆ. ಅಲ್ಲಿ ಬೇಕಾಗಿರುವ ಪಾಠೋಪಕರಣ ಪಿಠೋಪಕರಣ ಕಲಿಕಾ ಸಾಮಗ್ರಿ, ಮನೋಬಲ ಹೆಚ್ಚಿಸುವ ಮಾನಸಿಕ ದೃಢತೆ ಹೊಂದಲು ಒತ್ತಡ ನಿರ್ವಹಣಾ ಕುಶಲಗಳಾಗಿಯೂ, ಆಯಾ ವಸತಿ ನಿಲಯದ ಮಕ್ಕಳ ಆರೋಗ್ಯದ ಕಡೆಗೆ ಗಮನ ನೀಡುತ್ತಿದ್ದು, ವೈದ್ಯಕೀಯ ಚಿಕಿತ್ಸೆ ಹಾಗೂ ಅಗತ್ಯ ಔಷಧೋಪಚಾರ ಒದಗಿಸಿಕೊಟ್ಟು ಮಕ್ಕಳಲ್ಲಿ ನಮ್ಮೊಂದಿಗಿದ್ದಾರೆ ಎಂಬ ಮನೋಭಾವ ಹೊಂದುವ ಜೊತೆಗೆ ಮನೆಯಿಂದ ದೂರ ಇರುವ ಭಾವನೆ ತಾಳದೇ ಎಲ್ಲರೊಂದಿಗೂ ಬೆರೆಯುವ ಸದಾವಕಾಶ ಹಾಸ್ಟೆಲ್ ಮೆಂಟರ್ಸ್ ಅವರು ಸ್ವಯಂ ಪ್ರೇರಿತರಾಗಿ ನಿರ್ವಹಿಸುತ್ತಿದ್ದಾರೆ. ಇದರಿಂದ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುವ, ಜೀವನದಲ್ಲಿ ಹಿಂಜರಿಯುವ ಪ್ರಮೇಯವೇ ಉದ್ಭವಿಸುವುದಿಲ್ಲ. ಹಾಸ್ಟೆಲ್ ಮೆಂಟರ್ಸ್ ಅವರು ಸ್ವಯಂ ಪ್ರೇರಿತರಾಗಿ ಕಾರ್ಯ ನಿರ್ವಹಿಸಿ, ಮಕ್ಕಳ ಸುಂದರ ಕನಸಿಗೆ ಎಳೆವೆಯಲ್ಲಿ ಬಲ ತುಂಬುತ್ತಿದ್ದಾರೆ ಎಂದು ಪ್ರಶಂಸಿದರು.
ಈಗಾಗಲೇ ನೇಮಕ ಮಾಡಿದ ಹಾಸ್ಟೆಲ್ ಮೆಂಟರ್ ಗಳು ನಿಯೋಜಿತ ವಸತಿ ನಿಲಯಗಳಿಗೆ ಆಗಾಗ ಭೇಟಿ ನೀಡಿ, ಮಕ್ಕಳೊಂದಿಗೆ ಬೆರೆತು ಅವರ ಶೈಕ್ಷಣಿಕ ಹಾಗೂ ಉತ್ತಮ ವ್ಯಾಸಂಗಕ್ಕೆ ಮಕ್ಕಳನ್ನು ಪ್ರೇರೆಪಿಸಿ ಅವರ ಜೀವನ ಸುಂದರಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸಲಹೆ ಮಾಡಿದರು.
ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿಜೇತರಿಗೆ ಇದೇ ವೇಳೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ
ಮಹೇಶ ಪೋತದಾರ ಪ್ರಾಸ್ತಾವಿಕ ಮಾತನಾಡಿ, ಜಿಲ್ಲಾ ಮಟ್ಟ, ವಿಭಾಗ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಿಗೆ ಅಭಿನಂದಿಸಿದ ಅವರು, ಇಲಾಖೆಯ ಎಲ್ಲರೂ ತಮಗೆ ವಹಿಸಿದ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಿ, ವಿಶೇಷ ಸಾಧನೆ ಮಾಡಬೇಕು ಎಂದರು.
ಸಿಂದಗಿ ತಾಲೂಕಿನ ಸಹಾಯಕ ನಿರ್ದೇಶಕಿ ಭವಾನಿ ಪಾಟೀಲ, ಬಸವನ ಬಾಗೇವಾಡಿ ತಾಲೂಕಿನ ಸಹಾಯಕ ನಿರ್ದೇಶಕಿ ಮಂಜುಳಾ ಹಿರೇಮನಿ, ಸಹಾಯಕ ನಿರ್ದೇಶಕ ಉಮೇಶ ಲಮಾಣಿ, ನಿರಾಶ್ರೀತರ ಪರಿಹಾರ ಕೇಂದ್ರದ ಪದ್ಮಜಾ ಪಾಟೀಲ, ಟಿ.ಬಿ.ಮಂಟೂರ, ಅರವಿಂದ ಲಂಬು, ಕೆ.ಬಿ ಕೋರೆ, ಲೆಕ್ಕ ಅಧೀಕ್ಷಕ ಎಂ.ಟಿ ಬಿರಾದಾರ, ಸತೀಶ ಸಜ್ಜನ,ಸದಾನಂದ ಬಡಿಗೇರ ವಿವಿಧ ತಾಲೂಕಿನ ಅಧಿಕಾರಿಗಳು, ವಾರ್ಡನ್ ಇದ್ದರು.

