ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ: ತಾಲೂಕಿನ ಶಿರಮಳ್ಳಿ ಜನ ನಾನು ಯಾವುದೇ ಪಕ್ಷದಲ್ಲಿ ಇದ್ದರೂ ನಾನು ಹೇಳಿದ ಪಕ್ಷಕ್ಕೆ ಮಾತ್ರ ವೋಟ್ ಮಾಡ್ತಾರೆ. ಹೀಗಾಗಿ ಶಿರಮಳ್ಳಿ ಜನರ ಮೇಲೆ ವಿಶೇಷ ಪ್ರೀತಿ, ಅಭಿಮಾನ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ಶಿರಮಳ್ಳಿಯಲ್ಲಿ ಶ್ರೀ ಲಕ್ಷ್ಮೀದೇವಿ ಅಮ್ಮನವರ ನೂತನ ದೇವಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಯಾವುದೇ ಧರ್ಮಕ್ಕೆ ಸೇರಿದ್ದರು ಮನುಷ್ಯ ಮನುಷ್ಯನನ್ನು ಪ್ರೀತಿಸಿ ಎಂದೇ ಎಲ್ಲ ಧರ್ಮಗಳು ಹೇಳುತ್ತವೆ. ಪರಸ್ಪರ ದ್ವೇಷಿಸಿ ಎಂದು ಯಾವುದೇ ಧರ್ಮ ಹೇಳುವುದಿಲ್ಲ. ಕೆಲವು ಪಟ್ಟಭದ್ರಹಿತಾಸಕ್ತಿಗಳು ಸಮಾಜದಲ್ಲಿದ್ದಾರೆ. ಬಡವರು ಬಡವರಾಗೆ ಇರಬೇಕು. ಮುನುಷ್ಯ ಮನುಷ್ಯನನ್ನು ದ್ವೇಷಿಸಬೇಕು ಎಂದು ಕೆಲವರಿದ್ದಾರೆ. ಧರ್ಮ, ಜಾತಿ ಹೆಸರಿನಲ್ಲಿ ಸಮಾಜ ಒಡೆಯುವ ಪಟ್ಟಭದ್ರಹಿತಾಸಕ್ತಿ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಸಿದ್ದರಾಮಯ್ಯ ಕಿವಿಮಾತು ಹೇಳಿದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ಹೆಚ್ ಡಿ ಕೋಟೆ ತಾಲೂಕು ಅಭಿವೃದ್ಧಿಗೆ ಅನುದಾನ ಮೀಸಲಿಟ್ಟಿದ್ದಾರೆ. ಮೈಸೂರಿನಿಂದ ಹೆಚ್ ಡಿ ಕೋಟೆವರೆಗೆ ಜೋಡಿರಸ್ತೆ ಆಗಬೇಕು ಎಂಬುದು ನಮ್ಮ ತಾಲೂಕಿನ ಜನರ ಕನಸಾಗಿತ್ತು. ಆ ಕನಸನ್ನು ಸಿಎಂ ಸಿದ್ದರಾಮಯ್ಯ ನನಸು ಮಾಡಲು ಮುಂದಾಗಿದ್ದಾರೆ. 141 ಕಿಲೋ ಮೀಟರ್ ವರೆಗೆ ಜೋಡಿ ರಸ್ತೆ ನಿರ್ಮಾಣಕ್ಕೆ 1600 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದ್ದಾರೆ. ನಮ್ಮ ತಾಲೂಕಿಗೆ ಕಾರ್ಮಿಕ ಇಲಾಖೆ ವತಿಯಿಂದ ಕಾರ್ಮಿಕ ಹಾಸ್ಟೆಲ್ ಗಳಿಗೆ 35 ಕೋಟಿ ಅನುದಾನ ಕೊಟ್ಟಿದ್ದಾರೆ. ನಮ್ಮ ತಾಲೂಕಿಗೆ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಯಾರಾದರೂ ಅನುದಾನ ಕೊಟ್ಟಿದ್ದಾರೆ ಎಂದರೆ ಅದು ನಮ್ಮ ಸಿದ್ದರಾಮಯ್ಯ ಮಾತ್ರ. ವಿರೋಧ ಪಕ್ಷದಲ್ಲಿ ಇದ್ದಾಗ ೧೨ ಬಾರಿ , ಮುಖ್ಯಮಂತ್ರಿಯಾದ ಬಳಿಕ ನಾಲ್ಕು ಬಾರಿ ಹೆಚ್ ಡಿ ಕೋಟೆ ತಾಲೂಕಿಗೆ ಬಂದಿದ್ದಾರೆ. ತಾಲೂಕಿನ ಮೇಲೆ ಅತಿ ಹೆಚ್ಚು ಪ್ರೀತಿ ಇರುವುದರಿಂದಲೇ ಸಿದ್ದರಾಮಯ್ಯ ಅವರು ಸಾವಿರಾರು ಕೋಟಿ ಅನುದಾನ ಕೊಟ್ಟಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹದೇವಪ್ಪ, ಸಂಸದ ಸುನಿಲ್ ಬೋಸ್, ಕೆಆರ್. ನಗರ ಶಾಸಕ ಡಿ. ರವಿ ಶಂಕರ್, ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್, ವಿಧಾನ ಪರಿಷತ್ ಸದಸ್ಯ ಡಾ. ತಿಮ್ಮಯ್ಯ, ಶಿವಕುಮಾರ್, ಮಾಜಿ ಶಾಸಕ ಎಂ. ಶಿವಣ್ಣ, ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ, ಪುರಸಭೆ ಮಾಜಿ ಸದಸ್ಯ ಹೆಚ್.ಸಿ ನರಸಿಂಹ ಮೂರ್ತಿ, ಪ್ರದೀಪ್ ಕುಮಾರ್, ಡಿಸಿಸಿ ಸದಸ್ಯ ಪರಶಿವಮೂರ್ತಿ, ತಾಲೂಕು ಮಹಿಳಾ ಘಟಕದ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ಮಂಜುನಾಥ್, ತಾಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ಅಜರುದ್ದೀನ್, ಗ್ರಾಮದ ಮುಖಂಡರಾದ
ನಾಗೇಗೌಡ, ಮಹದೇವಗೌಡ, ಶಿವಕುಮಾರ್, ಮಲ್ಲೇಗೌಡರು, ಸತೀಶ್, ಸಣ್ಣಸ್ವಾಮಿ, ಕಾಳೇಗೌಡರು, ಚಿಕ್ಕಣ್ಣ, ಮಲ್ಲೇಗೌಡರು, ಎಸ್ ಆರ್ ಮಹೇಶ್ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ನಿಮ್ಮ ಆಶೀರ್ವಾದದಿಂದ ದಾಖಲೆ ಬಜೆಟ್ ಮಂಡನೆ
ರಾಜ್ಯ ರಾಜಕಾರಣದಲ್ಲಿ ಕುರ್ಚಿ ಕಿತ್ತಾಟ ಜೋರಾಗಿರುವಾಗಲೇ, ಬಜೆಟ್ ನಂತರ ಈ ಚರ್ಚೆಗಳು ಜೋರಾಗುವ ಸಾಧ್ಯತೆ ಇರುವುದರಿಂದ ಶಿರಮಹಳ್ಳಿ ಗ್ರಾಮದಿಂದಲೇ ವಿರೋಧಿಗಳಿಗೆ ಸಿಎಂ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಕರ್ನಾಟಕದಲ್ಲಿ ದೀರ್ಘಾವಧಿಯ ಮುಖ್ಯಮಂತ್ರಿಯಾಗಿ, ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಹಾಗೂ ದಾಖಲೆಯ 17ನೇ ಬಜೆಟ್ ಜೊತೆಗೆ ಅತೀ ಹೆಚ್ಚು ಬಜೆಟ್ ಮಂಡಿಸಿದ ಮುಖ್ಯ ಮಂತ್ರಿ ಎಂಬ ಹೆಗ್ಗಳಿಕೆಯನ್ನು ಪಡೆಯಲು ರಾಜ್ಯದ ಜನತೆಯೇ ಕಾರಣ. ನಾನು ಯಾವುದೇ ಪಕ್ಷಕ್ಕೆ ಸೇರ್ಪಡೆಗೊಂಡರೂ ಶಿರಮಹಳ್ಳಿ ಗ್ರಾಮದ ಜನತೆ ಆ ಪಕ್ಷಕ್ಕೆ ಮತ ನೀಡಿದ್ದಾರೆ. ಜನರ ಆಶೀರ್ವಾದ ಇರುವವರೆಗೂ ಇನ್ನಷ್ಟು ಕೆಲಸ ಮಾಡುತ್ತೇನೆ ಎನ್ನುವ ಮೂಲಕ ಸುಲಭವಾಗಿ ಕುರ್ಚಿ ಬಿಡುವುದಿಲ್ಲ ಎನ್ನುವ ಅರ್ಥದಲ್ಲಿ ಸಿಎಂ ವಿರೋಧಿಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.

