ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸಮಾಜದ ಪ್ರಗತಿಯಲ್ಲಿ ಮಹಿಳೆಯರು ಗಮನಾರ್ಹ ಪಾತ್ರ ವಹಿಸುತ್ತಿದ್ದಾರೆ ಎಂದು ರಾಷ್ಟ್ರೀಯ ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರೇಣುಕಾ ಪಾಟೀಲ ಹೇಳಿದರು.
ಪಟ್ಟಣದ ಜೆಎಮ್‌ಜೆ ಸಮಾಜಸೇವಾ ಸಂಸ್ಥೆಯ ಆವರಣದಲ್ಲಿ ಶನಿವಾರ ಜರುಗಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ನೀಡುತ್ತಿರುವ ಕೊಡುಗೆಗಳನ್ನು ಪುರುಷ ಪ್ರಧಾನ ಸಮುದಾಯಗಳು ಗುರುತಿಸಿ, ಸ್ಮರಿಸಬೇಕಾಗಿದೆ ಎಂದರು.
ಮಹಿಳಾ ಹೋರಾಟಗಾರ್ತಿ ಶೈಲಜಾ ಸ್ಥಾವರಮಠ ಮಾತನಾಡಿ, ಮಹಿಳೆಯರ ಹಕ್ಕು, ಸಮಾನತೆ ಹಾಗೂ ಸಬಲೀಕರಣದ ಬಗ್ಗೆ ಜಾಗೃತಿ ಮೂಡಿಸುವುದು ಇಂದು ಅತ್ಯಂತ ಅಗತ್ಯವಾಗಿದೆ. ಮಹಿಳಾ ದಿನಾಚರಣೆ ಕೇವಲ ಆಚರಣೆ ಮಾತ್ರವೇ ಅಲ್ಲ, ಇದು ಮಹಿಳೆಯರ ಹಕ್ಕುಗಳು, ಗೌರವ ಮತ್ತು ಸಮಾನತೆಯನ್ನು ಪ್ರೇರೇಪಿಸುವ ಮಹತ್ವದ ದಿನವಾಗಿದೆ ಎಂದರು.
ಹಿರಿಯ ಆರೋಗ್ಯ ಸುರಕ್ಷಾ ಅಧಿಕಾರಿ ಸುಕನ್ಯಾ ಚಳ್ಳಗಿ ಮಾತನಾಡಿ, ಕುಟುಂಬದ ಜವಾಬ್ದಾರಿಗಳ ಜೊತೆಗೆ ವೃತ್ತಿ ಜೀವನವನ್ನು ಸಮತೋಲನದಿಂದ ನಿಭಾಯಿಸುತ್ತಿರುವ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗುತ್ತಿದ್ದಾರೆ. ಮಹಿಳೆಯರ ಸಾಮರ್ಥ್ಯವನ್ನು ಗುರುತಿಸಿ ಅವರಿಗೆ ಬೆಂಬಲ ನೀಡುವುದು ಅಗತ್ಯ ಎಂದರು.
ಸಿಆರ್‌ಪಿ ವಿಜಯಲಕ್ಷ್ಮಿ ನವಲಿ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಮಹಿಳೆಯರಿಗೆ ಸಮಾನ ಅವಕಾಶ, ಸುರಕ್ಷತೆ, ಹಾಗೂ ಗೌರವ ನೀಡುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿ ಎಂದರು.
ಸಿಂದಗಿ ಲೊಯಲೋ ಶಾಲೆಯ ವಿಶಾಲ್ ಎಸ್.ಜೆ, ಪಿಎಸ್‌ಐ ಪ್ರೇಮಾ ಚೌರ, ತವರುಮನೆ ಟ್ರಸ್ಟ್ನ ಮಂಜುಳಾ ನಾಯಕ್ ಸೇರಿದಂತೆ ಮಹಿಳೆಯರು ಇದ್ದರು.

