ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಜಿತೋ ಮಹಿಳಾ ವಿಭಾಗದ ವತಿಯಿಂದ ಕ್ಯಾನ್ಸರ್ ರೋಗ ಜಾಗೃತಿಗಾಗಿ ಕಾರ್ ಜಾಥಾ ನಡೆಸಲಾಯಿತು. ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ದೃಷ್ಟಿಯಿಂದ ಈ ವಿಶೇಷ ಜಾಥಾ ನಡೆಸಿದರು.
ಕ್ಯಾನ್ಸರ್ ರೋಗ ತಡೆಗಟ್ಟುವ ವಿಧಾನ, ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಅಂಶಗಳ ಕುರಿತು ಭಿತ್ತಿ ಫಲಕಗಳನ್ನು ಸಹ ಪ್ರದರ್ಶಿಸಲಾಯಿತು.
ಈ ಕಾರ್ ರ‍್ಯಾಲಿಗೆ ಚಾಲನೆ ನೀಡಿದ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮನಗೌಡ ಹಟ್ಟಿ ಮಾತನಾಡಿ, ಮಹಿಳೆ ಇಂದು ಎಲ್ಲ ಕ್ಷೇತ್ರದಲ್ಲಿಯೂ ಸಾಧನೆಯ ನಗೆ ಬೀರಿದ್ದಾಳೆ, ವೈದ್ಯಕೀಯ, ವಿಜ್ಞಾನ, ಬಾಹ್ಯಾಕಾಶ ಹೀಗೆ ಎಲ್ಲ ರಂಗದಲ್ಲಿಯೂ ಸಾಧನೆ ತೋರಿದ್ದಾರೆ, ಒಬ್ಬ ತಾಯಿಯಾಗಿ, ಸಹೋದರಿಯಾಗಿ, ಪತ್ನಿಯಾಗಿ ಸಮಾಜದಲ್ಲಿ ತನ್ನದೇ ಆದ ಮಹೋನ್ನತ ಪಾತ್ರ ನಿಭಾಯಿಸುವ ಸ್ತ್ರೀ ಪೂಜ್ಯಳು ಎಂದರು.
ವೈದ್ಯೆ ಡಾ.ವಾಣಿ ಗಚ್ಚಿನಮಠ ಮಾತನಾಡಿ, ಕ್ಯಾನ್ಸರ್ ಬಗ್ಗೆ ಭಯ ಬೇಡ, ಕ್ಯಾನ್ಸರ್ ಬಗ್ಗೆ ಅರಿವು ಅಗತ್ಯ, ಪ್ರಾಥಮಿಕ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆ ಮಾಡಿದರೆ ಸಂಪೂರ್ಣವಾಗಿ ಅದನ್ನು ಗುಣಪಡಿಸಬಹುದು ಎಂದರು.
ಕಾನೂನು ತಜ್ಞೆ ಡಾ.ಉಜ್ವಲಾ ಸರನಾಡಗೌಡ, ಖ್ಯಾತ ವೈದ್ಯ ಡಾ.ಕಿರಣ ಓಸ್ವಾಲ್ ಮಾತನಾಡಿದರು.
ಖ್ಯಾತ ಉದ್ಯಮಿ ಹಾಗೂ ಸಮಾಜ ಸೇವಕ ಮಹಾವೀರ ಪಾರೇಖ್ ಆಶಯನುಡಿಗಳನ್ನಾಡಿದರು.
ಜಿತೋ ಚೇರಮನ್ ಧೀರಿಶ ಧರ್ಮದರ್ಶಿ, ಡಾ.ಅಶ್ವಿನಿ ಯಂಡಿಗೇರಿ, ಸುಹಾಸಿನಿ ವಾರದ, ಡಾ.ಜ್ಯೋತಿ ಕೊರಬು, ಡಾ.ಅಥುಲ್ ಥೊಬ್ಬಿ, ಕಿರಣ ಸಂಕಲೇಚಾ, ಸೋನಾಲಿ ಕೋಠಾರಿ, ಶರ್ಮಿಳಾ ಓಸ್ವಾಲ್ ಮೊದಲಾದವರು ಪಾಲ್ಗೊಂಡಿದ್ದರು.

