ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿಯನ್ನು ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿ ತಾಲೂಕಾ ರೈತ ಉತ್ಪಾದಕ ಸ್ವ-ಸಹಾಯ ಸಂಘಗಳ ಮಹಾಮಂಡಳದ ವತಿಯಿಂದ ಇಲ್ಲಿನ ತಹಸೀಲ್ದಾರ ಮೂಲಕ ಮುಖ್ಯ ಮಂತಿಗಳಿಗೆ ಮನವಿ ಸಲ್ಲಿಸಿದರು.
ಈ ವರ್ಷದಲ್ಲಿ ಸಕಾಲಿಕ ಮಳೆ ಮತ್ತು ಎಥೆನಾಲ್ ಉತ್ಪಾದನೆಗೆ ಬಳಸುವುದರಿಂದ ವೈಜ್ಞಾನಿಕ ಬೆಲೆ ಸಿಗಬಹುದೆಂಬ ಉದ್ದೇಶದಿಂದ ಬೆಳೆದಿದ್ದ ಮೆಕ್ಕೆಜೋಳದಿಂದ ಹೆಚ್ಚಿನ ಆದಾಯ ನಿರೀಕ್ಷೆಯಲ್ಲಿದ್ದ ರೈತರಿಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿರುವುದರಿಂದ ನಷ್ಟದ ಭೀತಿ ಎದುರಾಗಿದ್ದು ರಾಜ್ಯ ಸರ್ಕಾರ ಕೂಡಲೇ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ನಿಗದಿ ಪಡಿಸಿದ ಮೆಕ್ಕೆಜೋಳ ಖರೀದಿಗೆ ಖರೀದಿ ಕೇಂದ್ರ ತೆರೆದು ರೈತರ ನೆರವಿಗೆ ಬರುವಂತೆ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ೬೫ ಲಕ್ಷ ಮೆಟ್ರಿಕ್ ಟನ್‌ಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯ ಗುರಿ ಸಾಧ್ಯತೆ ಇದ್ದು ಕ್ವಿಂಟಲಿಗೆ ೧೭೦೦ ಕ್ಕೆ ಬೆಲೆ ಕುಸಿತವಾಗಿರುವುದು ರೈತರಿಗೆ ಆತಂಕವನ್ನುಂಟು ಮಾಡಿದ್ದು, ಈಗಷ್ಟೆ ಮಾರುಕಟ್ಟೆಗೆ ಆವಕವಾಗುತ್ತಿರುವ ಮೆಕ್ಕೆಜೋಳ ಬೆಲೆ ಆರಂಭದಲ್ಲಿಯೇ ಕುಸಿತ ಕಂಡಿದೆ. ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆವಕಾವಾಗುವ ಮೆಕ್ಕೆಜೋಳದ ಬೆಲೆ ಮತ್ತಷ್ಟು ಕುಸಿಯುವ ಸಂಭವಗಳಿವೆ. ಸಾಲ ಮಾಡಿ ಅಪಾರ ಹಣ ವ್ಯಯಿಸಿದ ಬೆಳೆದ ಲಾಭದಾಯಕ ಬೆಲೆ ಸಿಗದೇ ಹೋದಲ್ಲಿ ಮಾಡಿದ ಸಾಲ ತೀರಿಸಲಾಗದೇ ಸಂಕಷ್ಟದಲ್ಲಿರುವ ರೈತರು ಮತ್ತಷ್ಟು ಹೈರಾಣಾಗಲಿದ್ದಾರೆ. ಬೆಲೆ ಕುಸಿತದಿಂದ ರೈತರಿಗೆ ಉಂಟಾಗುತ್ತಿರುವ ನಷ್ಟ ತಪ್ಪಿಸುವುದಕ್ಕಾಗಿ ಖರೀದಿ ಕೇಂದ್ರ ತೆರೆದು ಮುಂಗಾರು ಹಂಗಾಮಿನ ಗುಣಮಟ್ಟದ ಮೆಕ್ಕೆಜೋಳವನ್ನು ಕೇಂದ್ರ ಸರ್ಕಾರದ ಬೆಂಬಲ ಬೆಲೆ ಕ್ವಿಂ. ಗೆ ೨೪೦೦ರೂ. ನಂತೆ ಖರೀದಿಸಲು ಅನುಮತಿ ನೀಡಬೇಕು, ಜೊತೆಗೆ, ಮೆಕ್ಕೆಜೋಳದಿಂದ ಎಥಿನಾಲ್ ಉತ್ಪಾದನೆ ಮಾಡುತ್ತಿದ್ದ ಉದ್ಯಮಿಗಳಿಗೆ ಶೇ.೪೦ರಷ್ಟು ಅಕ್ಕಿ ಖರೀದಿಸಿ ಎಥಿನಾಲ್ ಉತ್ಪಾದಿಸುವಂತೆ ಕೇಂದ್ರ ಸರ್ಕಾರ ನಿಯಮ ಮಾಡಿರುವುದರಿಂದ ಮೆಕ್ಕೆಜೋಳ ಖರೀದಿ ಪ್ರಮಾಣ ಕಡಿಮೆಯಾಗಿರುವುದು ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳಲ್ಲಿ ಹಿಂದಿನ ವರ್ಷದ ದಾಸ್ತಾನು ಉಳಿದಿರುವುದು ಹಾಗೂ ಪ್ರಸ್ತುತ ವರ್ಷದಲ್ಲಿ ದೇಶದಲ್ಲಿ ಶೇ.೮೦ರಷ್ಟು ಮೆಕ್ಕೆಜೋಳ ಬೆಳೆ ಇರುವುದು, ಇಳುವರಿ ಹೆಚ್ಚಾಗಿರುವುದು ಬೆಲೆ ಇಳಿಕೆಗೆ ಕಾರಣವೆಂದು ಹೇಳಲಾಗುತ್ತಿರುವುದರಿಂದ ಮೆಕ್ಕೆಜೋಳ ಬೆಳೆಗಾರರ ಹಿತದೃಷ್ಠಿಯಿಂದ ಎಥಿನಾಲ್ ಉದ್ಯಮಿಗಳಿಗೆ ಕೇಂದ್ರ ವಿಧಿಸಿರುವ ಷರತ್ತು ಕೈ ಬಿಡಲು ರಾಜ್ಯ ಸರ್ಕಾರದಿಂದ ಪತ್ರ ಬರೆಯುವಂತೆ ಮನವಿ ಪತ್ರದಲ್ಲಿ ಕೋರಲಾಗಿದೆ.
ಈ ವೇಳೆ ಆರ್.ಬಿ ಸಜ್ಜನ, ಕಲ್ಲಪ್ಪ ದೊಡಮನಿ, ತಿಮ್ಮಣ್ಣ ವಡ್ಡರ, ಸಂಗಣ್ಣ ಕಂಚ್ಯಾಣಿ, ಪರಸಪ್ಪ ಮೇಟಿ, ಶ್ರೀಶೈಲ ಮೇಟಿ, ಶಂಕರಗೌಡ ಬಿರಾದಾರ, ಬಸಪ್ಪ ನಾಯ್ಕಮಕ್ಕಳ, ಹುಚ್ಚೇಶ ಗೌಡರ, ಅಶೋಕ ಹೂಗಾರ, ಎನ್.ಎಸ್.ಪಾಟೀಲ, ಸೋಮನಗೌಡ ಬಿರಾದಾರ ಇದ್ದರು.

