ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ನಾಗರಿಕ ಸಮಾಜದಲ್ಲಿ ಸಮಾಜಮುಖಿಯಾಗಿ ರಾಜಕೀಯ ಕ್ಷೇತ್ರದಲ್ಲಿ ಇನ್ನಿತರ ಚಟುವಟಿಕೆಯಲ್ಲಿ ನಾವುಗಳು ತೊಡಗಿಕೊಂಡು ಕಾರ್ಯನಿರ್ವಹಿಸುವಾಗ ನಮ್ಮಗಳ ಜಾತಿಯನ್ನು ನಂಬಿ ಬದುಕಬಾರದು, ನಮ್ಮವರೆ ನಮ್ಮ ಬೆಳವಣಿಗೆಯನ್ನು ಸಹಿಸುವದಿಲ್ಲ ಎಂದು ಜಾನಪದ ಸಾಹಿತಿ ಸಿದ್ದಪ್ಪ ಬಿದರಿ ಹೇಳಿದರು.
ಪಟ್ಟಣದ ಪಂಚಾಚಾರ್ಯ ವಿಧ್ಯಾವರ್ಧಕ ಸಂಘದವರು ಸಂತೆ ಮೈದಾನ ಹತ್ತಿರ ನಿರ್ಮಿಸಿರುವ ರೇಣುಕಾಚಾರ್ಯ ದೇವಸ್ಥಾನದಲ್ಲಿ ರೇಣುಕಾಚಾರ್ಯರ ಮೂರ್ತಿಯ ಪ್ರತಿಷ್ಠಾಪಣೆ ಕಾರ್ಯಕ್ರಮ ಹಾಗೂ ಧರ್ಮಸಭೆ ಸಮಾರಂಭದಲ್ಲಿ ಮಾತನಾಡಿದರು.
ತಮ್ಮ ಸ್ವಾರ್ಥಕ್ಕಾಗಿ ಸಮಾಜವನ್ನು ಒಡೆಯುವ ಜನರ ಮದ್ಯದಲ್ಲಿ ನಾವು ನೀವು ಇರುವದರಿಂದ ಅಂತಹ ಕುತಂತ್ರಿಗಳ ಬಗ್ಗೆ ಎಚ್ಚರದಿಂದ ಇದ್ದು ಸಮಾಜ ಸಂಘಟನೆಯಲ್ಲಿ ತೊಡಗಿಕೊಂಡಾಗ ಮಾತ್ರ ಏನಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ ಸಮಾಜದಲ್ಲಿ ಗುರುವಿನ ಸ್ಥಾನ ಅತ್ಯಂತ ಮಹತ್ವವನ್ನು ಪಡೆದುಕೊಂಡಿದ್ದು ಅಂತಹ ಸೌಬಾಗ್ಯವನ್ನು ಪಡೆದ ಜಂಗಮ ಸಮಾಜದವರು ಜಾಗ್ರತೆಯಿಂದ ಸಂಸ್ಕಾರವಂತರಾಗಿ ಗುರುಪರಂಪರೆಯನ್ನು ಉಳಿಸಿಕೊಂಡು ಹೋಗಲು ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ಕರೆಕೊಟ್ಟರು.
ಹಿರೇಮಠದ ಪ್ರಭುಕುಮಾರ ಶಿವಾಚಾರ್ಯರು, ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು, ಶೀಲವಂತಮಠದ ಕೈಲಾಷನಾಥ ಶ್ರೀಗಳು ಸಾನೀಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಚಂದ್ರಶೇಖರಯ್ಯ ಗಣಕುಮಾರ ವಹಿಸಿದ್ದರು. ಅತಿಥಿಗಳಾಗಿ ಈರಣಗೌಡ ಬ ಕೊಮಾರ, ವೀರಭದ್ರಪ್ಪ ಬಾಗಿ, ಮಲ್ಲಿಕಾರ್ಜುನ ಗಿಡ್ಡಪ್ಪಗೋಳ ಆಗಮಿಸಿದ್ದರು.
ಸಂಘದ ಉಪಾಧ್ಯಕ್ಷ ಶ್ರೀಶೈಲ ಕಂಬಿ, ಆರ್.ಬಿ. ಮಠ, ಈರಯ್ಯ ಮಠಪತಿ, ಬಸಯ್ಯ ಗಣಾಚಾರಿ, ಗುರಸಿದ್ದಯ್ಯ ಪರಡಿಮಠ, ದುಂಡಯ್ಯ ಗಜಂಡಿ ಅನೇಕರು ಉಪಸ್ಥಿತರಿದ್ದರು.
ವಿಶೇಷವಾಗಿ ವೈಧಿಕ ಶಾಸ್ತ್ರೀಗಳಾದ ಮನಗೂಳಿಯ ಲಟಕಿಮಠ ಸಹೋದರರಾದ ಶಾಂತಯ್ಯ ಹಾಗೂ ಶಿವಯ್ಯ ಅವರನ್ನು ಸನ್ಮಾನಿಸಲಾಯಿತು. ಪರಶುರಾಮ ಬ ಗಣಿ ಸ್ವಾಗತಿಸಿ ನಿರೂಪಿಸಿದರು.

