ಶಾಸಕ ಬಸನಗೌಡ ಪಾಟೀಲ ಯತ್ನಾಳರಿಗೆ ಎಚ್ಚರಿಕೆ ನೀಡಿದ ಸಚಿವ ಎಂ.ಬಿ.ಪಾಟೀಲ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: “ಯಾರಿಗರೇ ಧಮ್ಕಿ ಹಾಕಿದಂತೆ ನನಗೆ ಧಮ್ಕಿ ಹಾಕಿದರೆ ನಡೆಯಲ್ಲ, ಪ್ರತಿದಿನ ನಿಮ್ಮ ಮಾತಿಗೆ ಪ್ರತಿಹೇಳಿಕೆ ನೀಡಲು ನಾನೇನು ನಿಮ್ಮಂತೆ ನಿರುದ್ಯೋಗಿಯಲ್ಲ, ಪಂಚಪೀಠಾಧೀಶರಿಗೆ, ಹಾನಗಲ್ ಕುಮಾರ ಶಿವಯೋಗಿಗಳ ಬಗ್ಗೆ ಯಾರು ಯಾರು ಹಗುರವಾಗಿ ಮಾತನಾಡಿದ್ದಾರೆ ಎಂಬುದು ನನಗೆ ಗೊತ್ತಿದೆ, ಸಮಯ ಬಂದಾಗ ಬಹಿರಂಗ ಪಡಿಸುವೆ, ನಿಮ್ಮ ಲೂಸ್ ಟಾಕ್ ಮುಂದುವರೆಸಿದರೆ ಇದಕ್ಕೆ ಅಂತ್ಯ ಹಾಡಬೇಕಾಗುತ್ತದೆ ಎಂದು ವಿಜಯಪುರ ನಗರ ಶಾಸಕ ಯತ್ನಾಳರು ತಮ್ಮ ವಿರುದ್ಧ ನಿನ್ನೆ ನಡೆಸಿದ ವಾಗ್ದಾಳಿಗೆ ಪ್ರತಿಯಾಗಿ ಸಚಿವ ಡಾ.ಎಂ.ಬಿ. ಪಾಟೀಲ ಎಚ್ಚರಿಕೆ ನೀಡಿದರು.
ಯತ್ನಾಳರು ಈ ಹಿಂದೆ ವೋಟಿನ ಆಸೆಗಾಗಿ ನಮಾಜ್ ಟೋಪಿ ಸಲ್ಲಿಸಿ ಇಫ್ತಿಯಾರ್ ಕೂಟದಲ್ಲಿ ಪಾಲ್ಗೊಂಡ ಛಾಯಾಚಿತ್ರಗಳನ್ನು ಮೊಬೈಲ್‌ಗಳಲ್ಲಿ ಪ್ರದರ್ಶಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಯತ್ನಾಳ ಒಬ್ಬ ಸೋಕಾಲ್ಡ್ ಹಿಂದೂ ಹುಲಿ, ಈ ಹಿಂದೆ ವೋಟಿನ ಆಸೆಗಾಗಿ ಮುಸ್ಲಿಂರ ಬಳಿ ಹೋದಾಗ ಹಿಂದೂತ್ವ ಇರಲಿಲ್ಲವೇ? ಎಂದು ಪ್ರಶ್ನಿಸಿದರು.
ಲಿಂಗಾಯತ ಪ್ರತ್ಯೇಕ ಧರ್ಮ ಎಲ್ಲ ಎಂದು ಹೇಳುತ್ತಿರುವ ಯತ್ನಾಳ ಈ ಹಿಂದೆ ಮಾತೆ ಮಹಾದೇವಿ ಅವರ ಕಾರ್ಯಕ್ರಮಕ್ಕೆ ಹೋಗಿದ್ದರು, ಮಾತೆ ಮಹಾದೇವಿಯವರು ಬಸವ ಧರ್ಮವನ್ನು ಜಾಗತಿಕ ಮಟ್ಟಕ್ಕೆ ಪ್ರಸಾರ ಮಾಡಿದ್ದಾರೆ ಎಂದು ಹೇಳಿ ಬಂದಿದ್ದರು, ಇವರಿಗೆ ಎಷ್ಟು ರೂಪಗಳಿವೆ ಎಂದು ಪ್ರಶ್ನಿಸಿದರು.
ನಾನು ಯಾರ ಮಾತನ್ನೂ ಕೇಳುವುದಿಲ್ಲ, ನಾನೇನು ಪಿ.ಎ.ಗಳ ಮಾತು ಕೇಳುತ್ತೇನಾ? ನನ್ನ ಮನೆಯಲ್ಲಿ ಧಾರ್ಮಿಕ ಆಚರಣೆಯ ಭಿನ್ನಾಭಿಪ್ರಾಯ ಇರಬಹುದು, ಅದು ನಮಗೆ ಬಿಟ್ಟ ವಿಷಯ, ನಾನು ಎಲ್ಲ ದೇವಾಲಯಕ್ಕೂ ಹೋಗುತ್ತೇನೆ, ಮಸೀದಿಗೂ ಹೋಗುತ್ತೇನೆ, ಚರ್ಚ್ಗೂ ಹೋಗುತ್ತೇನೆ, ನನ್ನ ಮನೆಯಲ್ಲಿ ಬುದ್ಧ, ಬಸವ, ಕೃಷ್ಣ ಎಲ್ಲರೂ ಇದ್ದಾರೆ ಎಂದರು.
ನಾನು ಪಂಚಪೀಠಾಧೀಶರ ಬಗ್ಗೆ ಗೌರವ ಹೊಂದಿದ್ದೇನೆ, ಅವರಿಗೆ ಅಗೌರವ ತೋರಿದ ಮಾತೇ ಆಡಿಲ್ಲ, ಕೆಲವೊಬ್ಬರು ಪಂಚಪೀಠಾಧಶರ ಬಗ್ಗೆಯೇ, ಮಠಾಧೀಶರ ಬಗ್ಗೆಯೇ ಕುಮಾರ ಶಿವಯೋಗಿಗಳ ಬಗ್ಗೆಯೇ ಅವಹೇಳನಕಾರಿಯಾಗಿ ಮಾತನಾಡಿದ್ದರು, ಅದನ್ನು ಸಮಯ ಬಂದಾಗ ಬಹಿರಂಗ ಪಡಿಸುವೆ ಎಂದರು.
ಬಸವ ಆರ್ಮಿ, ಅಹಿಂದ ಆರ್ಮಿ, ಭೀಮ್ ಆರ್ಮಿ ಎಲ್ಲವೂ ಬರುತ್ತೆ. ನೀವು ಸಮಾವೇಶ ಮಾಡುವುದಾದರೆ ಸಂಘಟಿಸಿ ಅದೂ ಆಗಿಯೇ ಬಿಡಲಿ, ನಮ್ಮ ಹಿಂದೆ ಬಸವ ಸೈನ್ಯವಿದೆ, ಭೀಮದಳವಿದೆ, ಅಹಿಂದ ಸೇನೆ ಇದೆ, ಒಮ್ಮೆ ಟೆಸ್ಟ್ ಆಗಿಯೇ ಬಿಡಲಿ ನೋಡೋಣ, ಪ್ರಿಯಾಂಕ್ ಖರ್ಗೆ ಅವರ ಭೀಮ್ ಆರ್ಮಿಯಿಂದ ಅನೇಕರಿಗೆ ಹೆದರಿಕೆ ಉಂಟಾಗಿದೆ, ಸಿದ್ಧರಾಮಯ್ಯ ಅವರ ಎದೆಯಲ್ಲಿ ಅಲ್ಲಾಹು ಇದ್ದಾನೆ ಎಂದು ಹೇಳಿರುವ ಯತ್ನಾಳರು ಮೊದಲು ತಮ್ಮ ಎದೆಯಲ್ಲಿ ಏನಿದೆ ನೋಡಬೇಕು, ಅವರ ಎದೆಯಲ್ಲಿ ಒಮ್ಮೊಮ್ಮೆ ಅಲ್ಲಾಹು, ಬಸವಣ್ಣ, ರಾಮ ಹೀಗೆ ಬದಲಾಗುತ್ತಾ ಹೋಗುತ್ತದೆ, ಆದರೆ ಸಿದ್ಧರಾಮಯ್ಯ ಅವರ ಎದೆಯಲ್ಲಿ ಇರುವುದು ಸಂವಿಧಾನ, ಸಾಮಾಜಿಕ ನ್ಯಾಯದ ಸಿದ್ಧಾಂತ ಮಾತ್ರ, ಅವರ ಎದೆಯಲ್ಲಿ ದೇವರ ಸ್ಥಾನ ಬಸನಗೌಡರಂತೆ ಬದಲಾವಣೆ ಆಗುವುದಿಲ್ಲ ಎಂದರು.
ಕನೇರಿ ಶ್ರೀ ಕ್ಷಮೆ ಕೇಳಿದರೆ ಎಲ್ಲ ವಿವಾದಕ್ಕೂ ಅಂತ್ಯ
ಕನೇರಿ ಶ್ರೀಗಳು ಆಡಿರುವ ಒಂದು ಪದಪ್ರಯೋಗಕ್ಕೆ ನನ್ನ ವಿರೋಧವಿದೆ, ಅವರ ಅಧ್ಯಾತ್ಮ, ಕೃಷಿ ಕ್ಷೇತ್ರದ ಕೊಡುಗೆಗಳ ಬಗ್ಗೆ ನನಗೆ ಈಗಲೂ ಗೌರವವಿದೆ, ಇನ್ನೊಬ್ಬರ ತಾಯಿಗೆ ಬೈಯುವ ಹಕ್ಕು ಯಾರಿಗೂ ನೀಡಿಲ್ಲ, ಕ್ಷಮೆ ಕೇಳಿದರೆ ಎಲ್ಲವೂ ಮುಗಿದು ಹೋಗುತ್ತದೆ ಎಂದು ಸಚಿವ ಡಾ.ಎಂ.ಬಿ. ಪಾಟೀಲ ಪುನರುಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘ ಪರಿವಾರದಲ್ಲಿ ಕನೇರಿ ಶ್ರೀಗಳು ಭಾಗವಹಿಸಿದ್ದಾರೆ, ಆದರೆ ಅದಕ್ಕೆ ನಮ್ಮ ತಕರಾರಿಲ್ಲ, ಅದು ಅವರ ಆಶಯ, ಯಾರೂ ಸಹ ಆ ಪದ ಪ್ರಯೋಗ ಮಾಡಬಾರದು, ನಾವು ಸಾಮಾನ್ಯರು, ನಮಗೂ ಸ್ವಾಮೀಜಿಗಳಿಗೂ ದೊಡ್ಡ ಅಂತರವಿದೆ, ಸೂಳೆ ಎಂದರೆ ಕೆಟ್ಟವಳು ಎಂಬರ್ಥವಲ್ಲ, ಬಡತನ, ನೋವಿನಿಂದ ಆ ವೃತ್ತಿಗೆ ಬಂದಿರುತ್ತಾಳೆ, ಈ ಕಾರಣಕ್ಕಾಗಿ ಸೂಳೆ ಸಂಕವ್ವ ಸಹ ಶರಣೆಯೇ, ಆದರೆ ಕನೇರಿ ಶ್ರೀಗಳು ಹೇಳಿರುವ ಕೆಲವೊಂದು ಪದಗಳಿಂದ ಎಲ್ಲರ ಮನಸ್ಸಿಗೂ ಬೇಜಾಗಿದೆ ಎಂದರು.
ಭೂಗಹರಣಕ್ಕೆ ಕ್ರಮ ನಿಶ್ಚಿತ
ನಾನು ಪರರ ಒಂದಿಂಚೂ ಭೂಮಿಯನ್ನು ಆಸೆಪಡುವವನಲ್ಲ. ಇಲ್ಲಿಯವರೆಗೆ ನಾನು ಜಿ-ಕೆಟಗರಿ ಸೈಟ್ ಸಹ ಪಡೆದುಕೊಂಡಿಲ್ಲ, ನನ್ನ ಹಿಂದೆ ಇರುವವರು ಭೂಹಗರಣ ಮಾಡಿದ್ದನ್ನು ಅವರು ನನಗೆ ದಾಖಲೆ ಕೊಡಲಿ, ನಾನೇ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳುವುದಾಗಿ ಸಂಬಂಧಿಸಿದ ಇಲಾಖೆಗೆ ಹೇಳುವೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.

