ವಿಜಯಪುರದಲ್ಲಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಕ್ಕರೆ ಕಾರ್ಖಾನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನಿಯಮಾವಳಿ ಪರಿಷ್ಕರಣೆ ಮಾಡಬೇಕು, ಇಲ್ಲವಾದರೆ ಸ್ಪಿನ್ನಿಂಗ್ ಮಿಲ್ ಮಾದರಿಯಲ್ಲಿ ಸಕ್ಕರೆ ಕಾರ್ಖಾನೆಗಳು ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಸಕ್ಕರೆ ಕಾರ್ಖಾನೆಗಳು ಎದುರಿಸುತ್ತಿರುವ ಅದರಲ್ಲೂ ಸಹಕಾರ ಸಕ್ಕರೆ ಕಾರ್ಖಾನೆಗಳು ಎದುರಿಸುತ್ತಿರುವ ದೊಡ್ಡ ಸಮಸ್ಯೆಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಬೆಳಕು ಚೆಲ್ಲಿದ ಅವರು, ಸಕ್ಕರೆ ಕಾರ್ಖಾನೆ ಹಾಗೂ ಕಬ್ಬು ಬೆಳೆಗಾರರ ಹಿತ ಎರಡು ಮುಖ್ಯ, ಆದರೆ ಕೇಂದ್ರ ಸರ್ಕಾರ ನೀತಿಗಳಿಂದ ಸಹಕಾರ ವಲಯದ ಸಕ್ಕರೆ ಕಾರ್ಖಾನೆಗಳಿಗೆ ದೊಡ್ಡ ಆತಂಕ ಎದುರಾಗಿದೆ.
ಇಳುವರಿ ಆಧರಿಸಿ ಎಫ್.ಆರ್.ಪಿ. ನಿಗದಿಯಾಗುತ್ತದೆ, ಭೀಮಾತೀರದಲ್ಲಿ ಕಬ್ಭಿನ ರಿಕವರಿ ಪ್ರಮಾಣ ಕಡಿಮೆ, ಹೀಗಾಗಿ ಎಫ್.ಆರ್.ಪಿ ನಿಗದಿಗೊಳಿಸಲು ಏಕರೂಫದ ಮಾನದಂಡ ವಿಧಿಸುತ್ತಿರುವುದು ಸರಿಯಲ್ಲ, ಭೌಗೋಳಿಕವಾಗಿ ಭಿನ್ನವಾದ ಪರಿಸ್ಥಿತಿ ಇದೆ, ಹೀಗಾಗಿ ಎಂ.ಎಸ್.ಪಿ. ಘೋಷಣೆ ಮಾಡಬೇಕು, ಇಲ್ಲವಾದರೆ ಸಕ್ಕರೆ ಕಾರ್ಖಾನೆಗಳು ಸ್ಪಿನ್ನಿಂಗ್ ಮಿಲ್ ಮಾದರಿಯಲ್ಲಿ ನಶಿಸಿ ಹೋಗುವ ದಿನ ದೂರವಿಲ್ಲ ಎಂದರು.
ಸಕ್ಕರೆ ಕಾರ್ಖಾನೆಗಳಿಗೆ ಸಂಬಂಧಿಸಿದಂತೆ ಇರುವ ನಿಯಮಗಳಿಂದ ಸಕ್ಕರೆ ಕಾರ್ಖಾನೆ ಉದ್ಯಮ ನೆಲಕಚ್ಚುತ್ತಿದೆ, ಇನ್ನೂ ಸಹಕಾರ ಸಕ್ಕರೆ ಕಾರ್ಖಾನೆಗಳಲ್ಲಿ ಪಾರದರ್ಶಕ ಆಡಳಿತ ಇಲ್ಲದೇ ಹೋದರೆ ಆ ಕಾರ್ಖಾನೆ ಮುಚ್ಚಿ ಹೋಗುತ್ತವೆ,
ನಬಾರ್ಡ್ ಹಾಗೂ ಆರ್.ಬಿ.ಐ. ಸಹ ಕಮರ್ಷಿಯಲ್ ಆಗಿ ಬಿಟ್ಟರೆ ಸಹಕಾರಿ ಸಂಸ್ಥೆಗಳು ಹೇಗೆ ನಡೆಸಲು ಸಾಧ್ಯ? ಸಾಲ ನೀಡುವಲ್ಲಿ ಈ ಎಲ್ಲ ಸಂಸ್ಥೆಗಳು ಸಂಪೂರ್ಣ ಕಮರ್ಷಿಯಲ್ ಆಗಿವೆ ಎಂದರು.
ಸಾಲದ ವಿಷಯದಲ್ಲಿಯೂ ವೈಜ್ಞಾನಿಕ ನಿಯಮವಾಳಿ ಇಲ್ಲ, ಇದರಿಂದಾಗಿಯೇ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಅನೇಕ ತೊಂದರೆ ಎದುರಿಸಿದೆ, ಮೊನ್ನೆ ಸಾಮಾನ್ಯ ಸಭೆಯಲ್ಲಿ ಕಾರ್ಖಾನೆ ಖಾಸಗಿಯವರಿಗೆ ಲೀಜ್ ಕೊಡುವ ಮಟ್ಟಕ್ಕೂ ವಿಷಯ ಪ್ರಸ್ತಾಪಿಸಿರುವೆ ಎಂದರು.
೮ ರಿಂದ ೧೦ ಕಿ.ಮೀ. ವ್ಯಾಪ್ತಿಯಲ್ಲಿ ಕಾರ್ಖಾನೆ ಸ್ಥಾಪನೆಯಾಗುತ್ತಿವೆ, ಬೆಲೆ ನಿರ್ಧಾರದಲ್ಲೂ ಆರೋಗ್ಯಕರ ಸ್ಪರ್ಧೆ ಇಲ್ಲ, ಈ ಎಲ್ಲ ತೊಡಕುಗಳಿಂದ ಸಕ್ಕರೆ ಉದ್ಯಮ ನಲುಗುವಂತಾಗಿದೆ ಎಂದರು.
ಅಮೇರಿಕೆಯಿಂದ ಎಥೆನಾಲ್ ಆಮದು ಸಲ್ಲದು
ಎಥೆನಾಲ್ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರೂಪಿಸಿರುವ ನೀತಿ ನಿಯಮವಾವಳಿಗಳು ದೊಡ್ಡ ತೊಡಕಾಗಿವೆ, ಈ ಎಲ್ಲವೂ ಮಾರ್ಪಾಡಬೇಕು, ಈ ಹಿಂದೆ ಎಥೆನಾಲ್ ಉತ್ಪಾದನೆಗೆ ಪ್ರೋತ್ಸಾಹ ನೀಡಿದ ಪರಿಣಾಮ ದೊಡ್ಡ ಮಟ್ಟವನ್ನು ಎಥೆನಾಲ್ ಉತ್ಪಾದನೆಯಾಗುತ್ತಿದೆ, ಆದರೆ ಬೆಲೆ ಕಡಿಮೆ ಎಂದು ಅಮೇರಿಕೆಯಿಂದ ಆಮದು ಮಾಡಿಕೊಳ್ಳಲು ಮುಂದಾಗಿರುವುದು ದೊಡ್ಡ ಆತಂಕ ಸೃಷ್ಟಿ ಮಾಡಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಅಮೇರಿಕೆಯಿಂದ ಎಥೆನಾಲ್ ಆಮದು ಮಾಡಿಕೊಳ್ಳುವುದು ಬೇಡ ಎಂದರು.
ಉತ್ಪಾದನೆ ಮಾಡಿದ ಎಥೆನಾಲ್ ಹಾಗೂ ಪೂರಕವಾದ ಉತ್ಪನ್ನಗಳನ್ನು ಕೇಂದ್ರ ಸರ್ಕಾರ ಖರೀದಿ ಮಾಡುತ್ತಿಲ್ಲ, ಈ ರೀತಿಯಾದರೆ ಉತ್ಪಾದನೆ ಮಾಡಲು ಉತ್ತೇಜನ ನೀಡಿದ್ದು ಯಾಕೆ ಎಂದು ಪ್ರಶ್ನಿಸಿದರು.

