ಕ್ಷಮೆ ಕೋರಿದರೆ ಕನೇರಿ ಶ್ರೀಗಳು ದೊಡ್ಡವರಾಗುತ್ತಿದ್ದರು | ಶ್ರೀಗಳ ಪ್ರವೇಶ ನಿಷೇಧದ ಹಿಂದೆ ನನ್ನ ಯಾವ ಪಾತ್ರವೂ ಇಲ್ಲ | ಸಚಿವ ಡಾ.ಎಂ.ಬಿ. ಪಾಟೀಲ ಸ್ಪಷ್ಟನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕನೇರಿ ಶ್ರೀಗಳು ತಾವು ಆಡಿರುವ ಮಾತಿಗೆ ಕ್ಷಮೆ ಕೋರಿದರೆ ನಾನೇ ಅವರ ಪಾದ ಮುಟ್ಟಿ ವಿಜಯಪುರಕ್ಕೆ ಕರೆ ತರುವೆ ಎಂದು ಸಚಿವ ಡಾ.ಎಂ.ಬಿ. ಪಾಟೀಲ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷಮೆ ಕೋರಿದರೆ ಕನೇರಿ ಶ್ರೀಗಳು ದೊಡ್ಡವರಾಗುತ್ತಿದ್ದರು, ಈಗಲೂ ಅವರು ಕ್ಷಮೆ ಕೋರಿದರೆ ನಾನೇ ಅವರಿಗೆ ನಮಸ್ಕರಿಸಿ ಪಾದ ಮುಟ್ಟಿ ಅವರನ್ನು ವಿಜಯಪುರಕ್ಕೆ ಕರೆ ತರುವೆ, ಕನೇರಿ ಶ್ರೀಗಳು ನನಗೂ ಆತ್ಮೀಯರು, ಅವರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಶಿಷ್ಯರು, ನಾನು ಸಹ ಶ್ರೀಗಳ ಶಿಷ್ಯನೇ ಎಂದರು.
ಆಡುಮಾತಿನಲ್ಲಿ ಅವರು ಪದಪ್ರಯೋಗ ಮಾಡಿದ್ದಾರೆ ಎನ್ನುವ ವಾದರಲ್ಲಿ ಹುರುಳಿಲ್ಲ, ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಅನೇಕ ದಶಕಗಳಿಂದ ಆಡುಭಾಷೆಯಲ್ಲಿಯೇ ಪ್ರವಚನ ಮಾಡಿದವರು, ಅವರು ಎಂದೂ ಈ ರೀತಿಯ ಪದ ಪ್ರಯೋಗ ಒಂದೆಡೆ ಇರಲಿ ಅದರ ಬಗ್ಗೆ ಯೋಚನೆ ಮಾಡಿಲ್ಲ, ಅಂತಹ ಮಹಾನ್ ಚೇತನದ ಗರಡಿಯಲ್ಲಿ ಬೆಳೆದ ಕನೇರಿ ಶ್ರೀಗಳು ಸಿದ್ದೇಶ್ವರ ಸ್ವಾಮೀಜಿಗಳ ಆಡುಭಾಷೆ ಕಲಿತಿಲ್ಲವೇ? ನಾವು ರಾಜಕೀಯದವರು ಏನೇನೋ ಹೇಳಬಹುದು, ಆದರೆ ಕನೇರಿ ಶ್ರೀಗಳು ಅಧ್ಯಾತ್ಮಿಕ ಚಿಂತಕರು, ಅವರ ಬಾಯಿಯಿಂದ ಈ ಪದ ಪ್ರಯೋಗ ಅದರಲ್ಲೂ ಮಠಾಧೀಶರ ಬಗ್ಗೆ ಪದ ಬಂದಿರುವುದು ಸರಿಯಲ್ಲ, ಈಗಲಾದರೂ ಶ್ರೀಗಳು ಕ್ಷಮೆ ಕೋರಿದರೆ ನಾನೇ ಅವರನ್ನು ಕರೆ ತರುವೆ ಎಂದರು.
ಶ್ರೀಗಳ ಪ್ರವೇಶ ನಿಷೇಧದ ಹಿಂದೆ ನನ್ನ ಯಾವ ಪಾತ್ರವೂ ಇಲ್ಲ, ಅದು ಜಿಲ್ಲಾಡಳಿತದ ನಿರ್ಧಾರ, ಜಿಲ್ಲಾಡಳಿತದ ನಿರ್ಧಾರವನ್ನು ಉಚ್ಛ ನ್ಯಾಯಾಲಯ ಸಹ ಎತ್ತಿ ಹಿಡಿದಿದೆ, ಈ ರೀತಿಯ ವಿಚಾರವನ್ನು ಶ್ರೀಗಳು ಮಾತನಾಡಬಾರದು ಎಂದು ಉಚ್ಛ ನ್ಯಾಯಾಲಯ ಸಹ ಹೇಳಿದೆ, ಹೀಗಾಗಿ ಇದರಲ್ಲಿ ನನ್ನ ಪಾತ್ರವೂ ಇಲ್ಲ, ಈ ವಿಷಯವಾಗಿ ನಾನು ಹೆಚ್ಚಿಗೆ ಮಾತನಾಡುವುದಿಲ್ಲ ಎಂದರು.
ಈ ನಿರ್ಧಾರ ತೆಗೆದುಕೊಂಡಿದ್ದು ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಗುಪ್ತಚರ ಹಾಗೂ ಪರಿಸ್ಥಿತಿ ಆಧರಿಸಿ ನಿಯಮಾವಳಿ ಪ್ರಕಾರ ಈ ಹೆಜ್ಜೆ ಇರಿಸಿದ್ದಾರೆ, ಅದರಲ್ಲಿ ನನ್ನ ಪಾತ್ರದ ಪ್ರಶ್ನೆಯೇ ಬರುವುದಿಲ್ಲ ಎಂದರು.
ನಿಷೇಧದ ವಿಷಯ ಮುನ್ನೆಲೆಗೆ ಬಂದಿದೆ, ಆದರೆ ಶ್ರೀಗಳು ಆಡಿರು ಮಾತು ಸರಿಯೇ? ಎಂಬ ಬೆಳಕಿನಲ್ಲಿ ಚರ್ಚೆಯೇ ನಡೆಯುತ್ತಿಲ್ಲ, ಅವರು ಆಡಿರುವ ಮಾತುಗಳನ್ನು ನಾವೇ ಅನಿಸಿಕೊಂಡು ಸುಮ್ಮನೆ ಕೂರಲು ಸಾಧ್ಯವೇ? ಎಂದು ಆತ್ಮವಲೋಕನ ಮಾಡಿಕೊಳ್ಳಿ, ಸ್ವಾಮೀಜಿಯಾಗಿ ಬೇರೆ ಸ್ವಾಮೀಜಿಗಳಿಗೆ ಆ ಪದ ಪ್ರಯೋಗ ಮಾಡಿರುವುದು ಮನಸ್ಸಿಗೆ ನೋವು ತರುವುದು ಸಹಜ, ಎಲ್ಲರಿಗೂ ಆ ಪದ ಪ್ರಯೋಗ ನೋವು ತರಿಸುತ್ತದೆ ಎಂದರು.
ಒಂದು ವೇಳೆ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಗಲಾಟೆಯಾಗಿದ್ದರೆ ಅದರ ಹೊಣೆಯನ್ನು ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಕಟ್ಟುತ್ತೀದ್ದೀರಿ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಪಾಟೀಲ ಪ್ರಶ್ನಿಸಿದರು. ಉಚ್ಛ ನ್ಯಾಯಾಲಯ ಸಹ ಜಿಲ್ಲಾಧಿಕಾರಿಗಳ ಆದೇಶವನ್ನು ಎತ್ತಿ ಹಿಡಿದಿದೆ ಎಂದರು.
ಸಿದ್ದೇಶ್ವರ ಶ್ರೀಗಳ ಪುಸ್ತಕದಲ್ಲೂ ಲಿಂಗಾಯತ ಧರ್ಮದ ಉಲ್ಲೇಖ
ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಪುಸ್ತಕವೊಂದನ್ನು ಬರೆದಿದ್ದಾರೆ, `ಜಾಗತಿಕ ಧರ್ಮಗಳ ಸಾರ ಸೂಕ್ತಿಗಳು’ ಎಂಬ ಪುಸ್ತಕ ಬರೆದಿದ್ದು, ಅದರಲ್ಲಿ ಜಾಗತಿಕ ಎಲ್ಲ ಧರ್ಮಗಳ ಉಲ್ಲೇಖಗಳಿವೆ, ಅದರಲ್ಲಿ ಜಾಗತಿಕ ಧರ್ಮಗಳ ಸ್ಥಾನದಲ್ಲಿ ಲಿಂಗಾಯತ ಧರ್ಮಕ್ಕೂ ಶ್ರೀಗಳು ಸ್ಥಾನ ನೀಡಿದ್ದಾರೆ, ಜಾಗತಿಕ ಧರ್ಮಗಳಲ್ಲಿ ಲಿಂಗಾಯತ ಧರ್ಮವನ್ನು ಶ್ರೀಗಳೇ ಉಲ್ಲೇಖಿಸಿದ್ದಾರೆ, ಲಿಂಗಾಯತ ಧರ್ಮ ಜಾಗತಿಕ ಧರ್ಮ ಎಂಬುದನ್ನು ಶ್ರೀಗಳೇ ಗುರುತಿಸಿ ದಾಖಲಿಸಿದ್ದಾರೆ ಎಂದು ದಾಖಲೆ ಸಮೇತ ಸಚಿವ ಡಾ. ಎಂ.ಬಿ.ಪಾಟೀಲ ವಿವರಿಸಿದರು.

