ಬಿಜೆಪಿ ನಾಯಕರಿಗೆ ಮಾಜಿ ಶಾಸಕ ಪ್ರೊ.ರಾಜು ಆಲಗೂರ ಸವಾಲು
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಾಂಗ್ರೆಸ್ ಪಕ್ಷ ಹಿಂದೂ ಧರ್ಮವನ್ನು ಒಡೆದಿದೆ ಎಂದು ಬಾಯಿಗೆ ಬಂದoತೆ ಮಾತನಾಡುತ್ತಿರುವ ಬಿಜೆಪಿ ನಾಯಕರು ಇದನ್ನು ಸಾಬೀತುಪಡಿಸಲಿ ನೋಡೋಣ ಎಂದು ಮಾಜಿ ಶಾಸಕ ಪ್ರೊ.ರಾಜು ಆಲಗೂರ ಸವಾಲು ಹಾಕಿದರು.
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಸಂಸದ ರಮೇಶ ಜಿಗಜಿಣಗಿ, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಸೇರಿದಂತೆ ಅನೇಕ ನಾಯಕರು ಕಾಂಗ್ರೆಸ್ ಪಕ್ಷ ಧರ್ಮ ಒಡೆಯುತ್ತಿದೆ ಎಂದು ಆರೋಪಿಸಿದ್ದಾರೆ, ಕಾಂಗ್ರೆಸ್ ನಾಯಕರು ಹಿಂದು ಧರ್ಮ ಎಲ್ಲಿ ಹೇಗೆ ಒಡೆಯುತ್ತಿದ್ದಾರೆ ಎಂದು ಸಾಬೀತುಪಡಿಸಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಸರ್ಕಾರ ಬ್ರಿಟಿಷ್ ಮಾದರಿ ಆಡಳಿತ ಅಳವಡಿಸಿಕೊಂಡಿದೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಸಂವಿಧಾನದ ಮೇಲೆ ನಂಬಿಕೆ ಇರಿಸಿದೆ. ಪ್ರಜಾಪ್ರಭುತ್ವ ಮಾದರಿಯಲ್ಲಿ ಸರ್ಕಾರ ನಡೆಸುತ್ತಿದೆ. ಮನುವಾದಿ ಪ್ರಕಾರ ರಾಷ್ಟ್ರ ನಡೆಯಬೇಕೆಂಬ ಬಿಜೆಪಿಗರ ಉದ್ದೇಶ ನಡೆಯಲ್ಲ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ಮೌಲ್ಯ ಇರಿಸಿಕೊಂಡು ಕಾಂಗ್ರೆಸ್ ನಡೆಸುತ್ತಿದೆ, ಮನುವಾದಿ ಆಧರಿಸಿ ಸರ್ಕಾರ ನಡೆಸಬೇಕು ಎಂಬುದು ಬಿಜೆಪಿಗರ ನಿಲುವು, ಈ ನಿಲುವಿಗೆ ಕಾಂಗ್ರೆಸ್ ಆದ್ಯತೆ ನೀಡದೇ ಇರುವುದರಿಂದಲೇ ವಿನಾಕಾರಣ ಜನರಲ್ಲಿ ಕಾಂಗ್ರೆಸ್ ಸರ್ಕಾರದ ಬಗ್ಗೆ ತಪ್ಪು ಗ್ರಹಿಕೆ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.
ಪದಗಳಿಗೆ ಮಾತ್ರ ವಿರೋಧ
ಕನ್ಹೇರಿ ಶ್ರೀಗಳ ಬಗ್ಗೆ ಮಾತನಾಡುತ್ತಿರುವುದರ ಹಿಂದೆ ಏನು ನಡೆಯುತ್ತಿದೆ ಎಂಬುದು ಗೊತ್ತಿದೆ. ಅವರ ಎಲ್ಲ ಕಾರ್ಯಗಳಿಗೆ ವಿರೋಧಿಯಲ್ಲ. ಎಲ್ಲ ಜಾತಿ, ಧರ್ಮವನ್ನು ಸಮಾನವಾಗಿ ಸ್ವೀಕರಿಸುವ ನಾನು ಕನ್ಹೇರಿ ಶ್ರೀಗಳ ಅಶ್ಲೀಲ ಪದಗಳಿಗೆ ನನ್ನ ವಿರೋಧ ಇದೆ. ಸ್ವಾಮೀಜಿ ಮಾತನಾಡುವ ಪದಗಳು ಅವಲ್ಲ. ಸಿದ್ದೇಶ್ವರ ಸ್ವಾಮೀಜಿ ಅವರು ನಡೆದಾಡಿದ ಪವಿತ್ರ ನೆಲವಿದು, ಈ ನೆಲದಲ್ಲಿ ಅಂತಹ ಪದಪ್ರಯೋಗಗಳು ಸಲ್ಲದು, ಕನೇರಿ ಶ್ರೀಗಳು ಮೊನ್ನೆ ಆಡಿದ ಪದಗಳು ಅವರಿಗೆ ಶೋಭೆ ತರುವಂತಹದ್ದಲ್ಲ ಎಂದರು.
ಇದೇ ಶಬ್ದವನ್ನು ಸಂಘ ಪರಿವಾರದ ಪ್ರಮುಖ ಮೋಹನ್ ಭಾಗವತ್ ಅವರಿಗೋ, ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಿದರೆ ಬಿಜೆಪಿ ನಾಯಕರು ಸುಮ್ಮನಿರುತ್ತಿದ್ದರಾ? ಶ್ರೀಗಳ ಪ್ರವೇಶ ನಿರ್ಭಂಧ ವಿಷಯದಲ್ಲಿ ಡಾ.ಎಂ.ಬಿ. ಪಾಟೀಲರ ಪಾತ್ರವೇ ಇಲ್ಲ, ಅದು ಜಿಲ್ಲಾಧಿಕಾರಿಗಳ ನಿರ್ಧಾರ ಎಂದರು.
ಕನ್ಹೇರಿ ಶ್ರೀಗಳಿಗೆ ಪ್ರವೇಶ ನಿಷೇಧ ವಿಷಯವಾಗಿ ಧಂಗೆಗೆ ಪ್ರೋತ್ಸಾಹ, ಪ್ರಚೋದನೆ ಮಾತು ಸರಿಯಲ್ಲ. ಸಹಬಾಳ್ವೆ, ಪ್ರೀತಿ, ವಿಶ್ವಾಸದ ಮೇಲೆ ನಂಬಿಕೆ ಇಡಬೇಕು. ದೊಣ್ಣೆ ತೆಗೆದುಕೊಂಡು ಏಳುವುದಲ್ಲ ಎಂದರು.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಹಣ ದುರುಪಯೋಗ ಆಗಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಅವಧಿಯಲ್ಲಿ ಎಷ್ಟು ಅನುದಾನ ಬಳಕೆಯಾಗಿದೆ ಎಂಬುದು ಬಹಿರಂಗ ಚರ್ಚೆಗೆ ಬನ್ನಿ ಎಂದರು.
ಕಾಂಗ್ರೆಸ್ ಮುಖಂಡ ಡಾ.ಗಂಗಾಧರ ಸಂಬಣ್ಣಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಬಸವಧರ್ಮ ಎಂಬುದು ಎಂ.ಬಿ.ಪಾಟೀಲರ ಅಸ್ಮಿತೆ
ಎಂ.ಬಿ. ಪಾಟೀಲರು ಧರ್ಮ ಒಡೆದು ಸಿಎಂ ಆಗಲು ಹೊರಟಿದ್ದಾರೆ ಎಂಬ ಆಪಾದನೆ ಸತ್ಯಕ್ಕೆ ದೂರ, ಧರ್ಮ ಒಡೆದು ಮುಖ್ಯಮಂತ್ರಿಯಾಗಬೇಕೆ? ಹಾಗಾದರೆ ಬಿಜೆಪಿಯ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಡಿ.ವಿ. ಸದಾನಂದಗೌಡರೆಲ್ಲರೂ ಧರ್ಮ ಒಡೆದೆ ಮುಖ್ಯಮಂತ್ರಿಯಾಗಿದ್ದಾರೆಯೇ? ಎಂದು ರಾಜು ಆಲಗೂರ ಪ್ರಶ್ನಿಸಿದರು.
ಧರ್ಮ ಒಡೆದು ಮುಖ್ಯಮಂತ್ರಿಯಾಗುವುದು ಬೇಕಿಲ್ಲ, ಹೈಕಮಾಂಡ್ ಬಯಸಿದರೆ ಅವರು ಮುಖ್ಯಮಂತ್ರಿಯಾಗಬಹುದು ಎಂದರು.
ಬಸವಧರ್ಮ ಎಂಬುದು ಎಂ.ಬಿ. ಪಾಟೀಲರ ಅಸ್ಮಿತೆ. ಬಸವಣ್ಣನವರು ತಾತ್ವಿಕ ಸಿದ್ದಾಂತ ಕೊಟ್ಟವರು. ಸಮಾನತೆ ನೀಡಿದವರು. ಕಾಯಕ ತತ್ವ ಬಿಟ್ಟು ಹೋದವರು. ಅವರ ಧರ್ಮದ ಬಗ್ಗೆ ಮಾತನಾಡಿದರೆ ಅಪಪ್ರಚಾರ ಹೇಗಾಗುತ್ತದೆ ಎಂದರು.

