ಪ್ರೇಮ ಬರಹ ಕೋಟಿ ತರಹ(ಪ್ರಣಯ ಪಕ್ಷಿಗಳ ಮೋಹಕ ಪದಗಳ ಗುಚ್ಛ)
ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಳೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಮಿಂಚು ಕಂಗಳ ಚೆಲುವೆ
ನೀನು ಕಣ್ಣಿಗೆ ಬಿದ್ದಾಗಲಿಂದ ಮನಸ್ಸು ಹಿಡಿತಕೆ ಸಿಗುತಿಲ್ಲ. ಹೊತ್ತು ಗೊತ್ತು ಗೊತ್ತಿಲ್ಲದೇ ಜೀವ ತಿಂತಿದೆ. ಕನಸಿನ ಮುತ್ತುಗಳನು ಪೋಣಿಸುತಿದೆ. ಜಗತ್ತಿನ ಗತ್ತು ಗೊತ್ತಿರದ ಹರೆಯದ ಹೃದಯಕೆ ನಿನ್ನ ಒಡನಾಟವೇ ಬೇಕಂತೆ. ಕಿರು ಬೆರಳಿನಲ್ಲೇ ಜೇನಿನ ಜಾತ್ರೆಗೆ ಕರೆಯುವ ಅಂದಗಾತಿಯ ಮೋಹಕೆ ಸೋತಿದೆ ಈ ಹೃದಯ. ಕಣ್ಣಲ್ಲೇ ಕಚಗುಳಿ ಇಡುವ ನಿನಗಾಗಿಯೇ ರಾಶಿ ರಾಶಿ ಕನಸುಗಳ ಗುಡ್ಡೆ ಹಾಕಿರುವೆ. ನಿನ್ನ ಒಲವಿನ ಪೂಜೆಗೆ ಹೃದಯ ವೇದಿಕೆ ಸಿದ್ಧಗೊಳಿಸಿರುವೆ. ನೂರಾರು ಬಯಕೆಗಳನು ಮನಸ್ಸಿನಲ್ಲಿ ಬೆಚ್ಚಗೆ ಸಾಕುತಿರುವೆ ಕಣೆ. ಕೆಂಪಾದ ಕೆನ್ನೆಗೆ ಗಾಯ ಮಾಡಲು ಕಾದಿರುವೆ. ಅಲೆದಾಡುವ ಮನಸ್ಸಿಗೆ ಮತ್ತಷ್ಟು ಅಲೆದಾಟ ಹಚ್ಚಿರುವ ಚೆಲುವಿ ನೀನು. ಮರುಳಾದ ಹೃದಯಕೆ ನಿನ್ನ ಕೆಂದುಟಿಯ ರಂಗು ಬೇಕಂತೆ. ಮಳೆ ಚಳಿ ಬಿಸಿಲು ಯಾವುದೇ ಇರಲಿ ಅಂತರಂಗ ನಿನ್ನ ಚೆಲುವಿನ ಆಹ್ವಾನಕೆ ಹಂಬಲಿಸುತಿದೆ. ಕಾಮನ ಬಿಲ್ಲಿನ ಕನಸನು ಕಡಿಯುವ ಕಳ್ಳಿ ನೀನು. ಇನ್ನು ನನ್ನ ಹೃದಯ ಯಾವ ಲೆಕ್ಕ ನಿನಗೆ? ಸನಿಹ ನೀನೇ ಬೇಕೆನ್ನುವ ಹುಚ್ಚು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರತಿ ಕ್ಷಣವೂ ನಿನ್ನ ಪ್ರೀತಿ ಮಾಡುವ ಹೃದಯ ಹೊತ್ತು ನಿನ್ನ ಹುಡುಕುತಿರುವೆ. ಅದೆಲ್ಲಿ ಬಚ್ಚಿಟ್ಟುಕೊಂಡಿರುವೆ?

ಹಾಗೆ ನೋಡಿದರೆ ನೀನು ಸಾಮಾನ್ಯದವಳಲ್ಲ. ನಿನ್ನ ಜಾಣ್ಕೆಗೆ ಇಡೀ ಊರೇ ಸಂಭ್ರಮಿಸುವಂತೆ ಮಾಡಿದವಳು. ಆಟೋಟದಲ್ಲಿ ನೀ ಮೆರೆದ ಪಾರಮ್ಯ ಯಾರೂ ಮೀರಲಾರರು. ಎಲ್ಲದರಲ್ಲೂ ಅತ್ಯಪರೂಪದ ಗೆಲುವು ನಿನ್ನದು. ಹೀಗಾಗಿ ಇಡೀ ಕಾಲೇಜಿನ ಹುಡುಗರು ನಿನ್ನ ಬೆನ್ನ ಹಿಂದೆಯೇ ಸುತ್ತುತ್ತಿದ್ದರು. ನಿನ್ನಲ್ಲಿರುವ ಪ್ರತಿಭೆಗೆ ನಿಜ ಪ್ರೋತ್ಸಾಹ, ಬೆಲೆ ಸಿಕ್ಕಿದ್ದರೆ ನೀನಿಂದು ಓಟದ ರಾಣಿಯಾಗಿ ಮಿಂಚುತ್ತಿದ್ದೆ. ದೇಶ ಹೆಮ್ಮೆ ಪಡುವಂಥ ಸಾಧನೆಯ ಒಡತಿ ನೀನಾಗಿರುತ್ತಿದ್ದೆ. ಹೆಣ್ಮಕ್ಕಳು ಆಡಿ ಏನುದ್ಧಾರ ಮಾಡೋದಿದೆ ಎಂಬ ಹಡೆದಪ್ಪನ ಮಾತಿಗೆ, ಸಮಾಜದ ಕಟು ಟೀಕೆಗಳಿಗೆ ಸೊಪ್ಪು ಹಾಕದೇ, ಗೆಲ್ಲುವ ಕುದುರೆಯಂತೆ ಓಡುತ್ತಲೇ ಇದ್ದೆ. ನಮ್ಮೂರು ನಮ್ಮೋರು ಹೆಮ್ಮೆ ಪಡುವ ಎತ್ತರಕ್ಕೆ ಏರುವೆ ಎಂಬ ಗುರಿಗೆ ಗುರಿ ಇಟ್ಟಿದ್ದೆ.
ದುರಂತವೆಂದರೆ ನಿನ್ನಲ್ಲಿರುವ ಕ್ರೀಡಾ ಶಕ್ತಿಯನ್ನು ಗುರುತಿಸದೇ ಇದ್ದುದು. ‘ಹೆಣ್ಣೆಂದರೆ ನಾಲ್ಕು ಗೋಡೆಗಳಲ್ಲಿಯೇ ಬಂಧಿಯಾಗಿರಬೇಕು. ಮೈದಾನದಲ್ಲಿ ಎಲ್ಲೆರದುರು ಆಡುವುದು ಅಕ್ಷಮ್ಯ ಅಪರಾಧ. ಅದೂ ನಿಮ್ಮಂಥ ಸುಸಂಸ್ಕೃತ ಮನೆತನದ ಹುಡುಗಿ, ಊರ ಪಡ್ಡೆ ಹೈಕಳ ಮುಂದೆ ಓಡಾಡುವುದು ಸರಿಯಲ್ಲ. ಹೀಗೇ ಮುಂದುವರೆದರೆ ಆಪತ್ತು ಕಾದಿದೆ,’ ಎಂದು ಎಚ್ಚರಿಸಿದ ಪೂಜಾರಪ್ಪನ ಹುಚ್ಚುತನದ ಮಾತುಗಳಿಗೆ ಮಣೆ ಹಾಕಿ ನಿನ್ನಪ್ಪ ನಿನ್ನನ್ನು ಮನೆಯಲ್ಲಿ ಕೂಡಿ ಹಾಕಿದ್ದು ನಿಜಕ್ಕೂ ನಿನ್ನ ಮನಸ್ಸನ್ನು ಅದೆಷ್ಟು ಘಾಸಿಗೊಳಿಸಿತ್ತು ಎಂದು ನಾನು ಊಹಿಸಬಲ್ಲೆ. ನಿನ್ನ ಕನಸಿನ ಕಾಲಿಗೆ, ಕಾಣದ ಕೈಗಳು ದೂರದಿಂದಲೇ ಹಗ್ಗ ಎಸೆದು ಕೆಳಕ್ಕೆ ಬೀಳಿಸುವ ಪ್ರಯತ್ನ ಮಾಡಿದ್ದವು. ಮನ ನೊಂದ ನೀನು ನೀರು ಆಹಾರ ಬಿಟ್ಟು ಕುಳಿತಿದ್ದು ನಿನ್ನ ಅಪ್ಪಯ್ಯ ಮತ್ತು ಅವ್ವನನ್ನು ಕಂಗೆಡಿಸಿತ್ತು. ನನ್ನ ಕಂಡ್ರೆ ನಿನಗೆ ಪ್ರಾಣ ನಾ ಹೇಳಿದರೆ ನೀ ಕೇಳ್ತಿಯಾ ಸುದ್ದಿ ಗೊತ್ತಾಗಿ ನನ್ನ ಬಳಿ ಬಂದ ನಿನ್ನಪ್ಪ ಸಣ್ಣ ಮಗುವಿನಂತೆ ಬಿಕ್ಕಿದರು. ಸಮಾಧಾನಿಸುವ ಪರಿ ಅರಿಯದೇ ಗಲಿಬಿಲಿಗೊಂಡೆ. ನಂತರ ಸಾವರಿಸಿಕೊಂಡು ಇಂದಿನ ಸ್ತ್ರೀ ಶಕ್ತಿಯ ಮಹಾಗಾಥೆ ವಿವರಿಸಿದೆ. ಪೂಜಾರಪ್ಪನವರಂಥ ಮನಸ್ಸಿನವರು ತಾವೂ ಮೇಲೇರುವುದಿಲ್ಲ. ಬೇರೆಯವರನ್ನೂ ಏರಲು ಬಿಡುವುದಿಲ್ಲ ಎಂಬ ಸಂಗತಿ ಮನಗಂಡರು. ಮರುದಿನವೇ ಪಕ್ಕದ ನಗರದಲ್ಲಿ ಓಟದ ತರಬೇತಿಗೆ ನಿನ್ನ ಹೆಸರು ನೊಂದಾಯಿಸಿದರು.
ಅಂದಿನಿಂದ ಇಂದಿನವರೆಗೂ ನೀ ಏರಿದ ಎತ್ತರ ಬೆರಗು ಮೂಡಿಸುವಂಥದ್ದು ಬೆಡಗಿ. ಸಾಧನೆಯ ಪ್ರತಿ ಮೆಟ್ಟಿಲೇರಿದಾಗಲೂ ಅದಕ್ಕೆಲ್ಲ ನಾನೇ ಕಾರಣ. ಎಂದು ಕಣ್ಮಿಟುಕಿಸಿ ಕಿರು ನಗೆ ಚೆಲ್ಲುತ್ತಿದ್ದೆ. ಥಳಕು ಬಳಕಿಲ್ಲದ ನಿನ್ನ ರೂಪ ಲಾವಣ್ಯಕೆ ಸೋತ ನನ್ನ ಗತಿಯೇನು? ಎಂದು ನಾ ಕೇಳಿದಾಗೊಮ್ಮೆ.ನನ್ನ ಹೆತ್ತವರನ್ನು ನಿನ್ನನ್ನು ಸಾಕಲು ಉದ್ಯೋಗ ಹಿಡಿದು ಬಾ ಎಂದು ನನ್ನ ಹುರುದುಂಬಿಸುತ್ತಿದ್ದೆ. ನಾನೀಗ ನಿನ್ನ ಪ್ರೇಮಿ ಮಾತ್ರವಲ್ಲ. ಹೆತ್ತವರ ಪ್ರೀತಿಸಿ ಪೋಷಿಸುವ ಮಗನಾಗಿದ್ದೇನೆ. ಬರಿ ನಿನ್ನ ಹಾಡಿ ಹೊಗಳುವ ಪಡ್ಡೆ ಹುಡುಗ ನಾನಲ್ಲ. ಜೀವನ ಪೂರ್ತಿ ನಿನ್ನೊಬ್ಬಳನ್ನೇ ಆರಾಧಿಸುವ ರಸಿಕ ಅಷ್ಟೇ ಅಲ್ಲ ಚೆಲ್ವಿ. ಬದುಕಿನ ಜವಾಬ್ದಾರಿ ಅರಿತ ಗಂಡು. ನಿನ್ನ ಕೊರಳ ಹಾಯಾಗಿ ಚುಂಬಿಸಿದ ಪದಕಗಳೆಲ್ಲ ನಾಚುವಂತೆ ಚುಂಬಿಸುವ ನಿನ್ನ ಬಾಳ ಪದಕ ನಾನು.
ನಿನ್ನ ಕೋಮಲ ಹಂಸ ಪಾದದ ಗುರುತು ಈ ಹೃದಯದಲ್ಲಿ ಮೂಡಿಸು ಬಾ.ಗೆಳತಿ. ಸೋಬಾನಕ್ಕೂ ಮುನ್ನ ಸೋಕುವುದು ಬೇಡ ಎನ್ನುತ್ತಿದ್ದವಳು, ಮೊನ್ನೆ ಕುಂಟು ನೆಪ ಹೇಳಿ ತೀರ ಬಳಿ ಬಂದು ನಿನಗಾಗಿ ಮಿಡಿವ ಎದೆಗೆ ಮುತ್ತಿನಾಂಕಿತ ನೀಡಿದೆ. ಮರು ಕ್ಷಣವೇ ಮರೆಯಾದೆ. ಅಂದಿನಿಂದ ಹೃದಯ ಬಡಿತದ ತಾಳ ತಪ್ಪಿ ಹೋಗಿದೆ. ಡವಗುಡುವ ಎದೆ ಬಡಿತ ಇನ್ನಷ್ಟು ತಪ್ಪಿಸಲು ನೀನೇ ಬೇಕು ಕೊನೆ ಸುತ್ತಿನವರೆಗೂ. ಪ್ರೀತಿಯ ಆಟ ಆಡುವಾಸೆ. ನಿನ್ನ ಉದರದಲ್ಲಿ ನಿನ್ನಂಥ ಮಿಂಚು ಕಂಗಳ ಚೆಲುವಿಯ ಪ್ರತಿರೂಪ ಮೂಡಿಸುವಾಸೆ. ಯಾವುದೇ ಕಾರಣಕ್ಕೂ ನೀನಿರದೇ ಈ ಜೀವ ಬದುಕಲಾರದು. ಬಾಳಲಾರೆ ಚೆಲುವೆ ಬೇರೆಯಾಗಿ. ನನ್ನ ಒಲವಿನ ಕೋಟೆಗೆ ಬಂದು ಬಿಡು. ಮನದಂಗಳದಲ್ಲಿ ಒಲವ ಹಣತೆ ಹಚ್ಚಿದ ನಿನಗಾಗಿ ಕೈಯಲ್ಲಿ ಹೂಮಾಲೆ ಹಿಡಿದು ಕಾಯುತಿರುವೆ.
ಇಂತಿ ನಿನ್ನ ಪ್ರೇಮಿ
ಜಯ್


