ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಬೆಳೆ ಸಮೀಕ್ಷೆದಾರರಿ(ಪಿಆರ್‌ಗಳಿ)ಗೆ ಸೇವಾಭದ್ರತೆ ಹಾಗೂ ಜೀವವಿಮೆ ಒದಗಿಸಿ ಮತ್ತು ದಿನಗೂಲಿ ಕಾರ್ಮಿಕರನ್ನಾಗಿ ನೇಮಕಗೊಳಿಸಲು ಆಗ್ರಹಿಸಿ ತಾಲ್ಲೂಕು ಬೆಳೆ ಸಮೀಕ್ಷೆದಾರರು ಶಾಸಕ ರಾಜುಗೌಡ ಪಾಟೀಲ (ಕುದರಿ ಸಾಲವಾಡಗಿ) ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದಲ್ಲಿ ಗುರುವಾರ ಬೆಳೆಸಮೀಕ್ಷೆದಾರರು ಶಾಸಕ ರಾಜುಗೌಡ ಪಾಟೀಲರನ್ನು ಕಂಡು ತಮ್ಮ ಮನವಿ ಕುರಿತು ಗಮನ ಸೆಳೆದರು.
ಈ ಸಂದರ್ಭದಲ್ಲಿ ತಾಲ್ಲೂಕು ಬೆಳೆ ಸಮೀಕ್ಷೆದಾರರ ಸಂಘದ ಅಧ್ಯಕ್ಷ ಶಿವಾನಂದ ಹೊಸಮನಿ ಮಾತನಾಡಿ, ನಾವು ಸುಮಾರು ೭-೮ ವರ್ಷಗಳಿಂದ ಬೆಳೆ ಸಮೀಕ್ಷೆ ದಾರರೆಂದೂ ಸೇವೆ ಸಲ್ಲಿಸುತ್ತಿದ್ದೇವೆ. ನಾವು ಜಮೀನುಗಳಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ವಿದ್ಯುತ್ ಅವಘಡಕ್ಕೆ ಒಳಗಾಗುವುದು ಹಾಗೂ ಹಾವು, ನಾಯಿ, ಕಾಡುಹಂದಿ, ತೋಳ, ನರಿಗಳ ದಾಳಿಗೆ ಒಳಗಾಗುವ ಸಾಧ್ಯತೆಗಳಿದ್ದು, ಈಗಾಗಲೇ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮಳಖೇಡ ಹಾಗೂ ಕೋಡ್ಲಾ ಗ್ರಾಮಗಳಲ್ಲಿ ಇಬ್ಬರು ಪಿಆರ್‌ಗಳಿಗೆ ಹಾವು ಕಚ್ಚಿದ ಘಟನೆಗಳು ಸಂಭವಿಸಿ, ಆ ಸಂದರ್ಭದಲ್ಲಿ ಯಾವುದೇ ಅಧಿಕಾರಿಗಳು ಸ್ಪಂದಿಸದೇ ಇರುವುದನ್ನು ಕಾಣಬಹುದಾಗಿದೆ. ವರ್ಷದ ೨-೩ ತಿಂಗಳುಗಳ ಕಾಲ ಅಧಿಕಾರಿಗಳ ಅಣತಿಯಂತೆ ಶ್ರದ್ಧೆಯಿಂದ ಕಾರ್ಯ ನಿರ್ವಹಿಸುವ ನಮನ್ನು ದಿನಗೂಲಿ ಕಾರ್ಮಿಕರೆಂದೂ ನೇಮಕಮಾಡಿ ಸೇವಾಭದ್ರತೆ ಹಾಗೂ ಜೀವವಿಮೆ ಒದಗಿಸಲು ಆಗ್ರಹಿಸಿ ಮನವಿ ಸಲ್ಲಿಸಿದರು.
ಶಾಸಕ ರಾಜುಗೌಡ ಪಾಟೀಲ ಮನವಿ ಸ್ವೀಕರಿಸಿ, ಸರ್ಕಾರದ ಗಮನ ಸೆಳೆಯುವ ಭರವಸೆ ನೀಡಿದರು.
ತಾಲ್ಲೂಕು ಘಟಕದ ಗೌರವಾಧ್ಯಕ್ಷ ಸೋಮಶೇಖರ ನಾಯ್ಕೋಡಿ, ಪ್ರಧಾನ ಕಾರ್ಯದರ್ಶಿ ರಾಜು ರಾಠೋಡ, ಸುಭಾಸ ಸಜ್ಜನ, ಹಣಮಂತ್ರಾಯ ಪಾಟೀಲ ಇದ್ದರು.

