ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಚನ್ನಬಸವಣ್ಣನವರು ಸಾಮಾಜಿಕ ಬದಲಾವಣೆಯ ಹರಿಕಾರರಾಗಿ “ಚಿನ್ಮಯಜ್ಞಾನಿ’ ಎನಿಸಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಜಿ.ಪಿ.ಬಿರಾದಾರ ಹೇಳಿದರು.
ಪಟ್ಟಣದ ರಾವುತರಾಯ ದೇವಸ್ಥಾನದ ಆವರಣದಲ್ಲಿ ಬುಧವಾರ ಚನ್ನಬಸವಣ್ಣನವರ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಅನುಭವ ಮಂಟಪದ ಎರಡನೆಯ ಶೂನ್ಯ ಪೀಠಾಧೀಶರಾಗಿದ್ದ ಚನ್ನಬಸವಣ್ಣ ಪ್ರತಿಯೊಂದು ವಚನಗಳಿಗೆ ಅಂತಿಮವಾಗಿ ಒಪ್ಪಿಗೆಯನ್ನು ಕೊಡುವ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಅಂತೆಯೇ ತಮ್ಮ ೨೧ನೇ ವರ್ಷದಲ್ಲಿ ಖಡ್ಗ ಹಿಡಿದು ಕನ್ನಡ ಶರಣರ ವಚನ ಸಾಹಿತ್ಯವನ್ನು ರಕ್ಷಣೆ ಮಾಡುವುದರ ಮೂಲಕ ಷಟಸ್ಥಲಜ್ಞಾನಿ ಎನಿಸಿದ್ದರು. ಇವರ ಜೀವಿತ ಕಾಲಾವಧಿ ತೀರಾ ಕಡಿಮೆ. ಬದುಕಿದ್ದು ಕೇವಲ ಇಪ್ಪತ್ತನಾಲ್ಕು ವರ್ಷಗಳು ಮಾತ್ರ. ಕೊನೆಗೆ ಉಳವಿಯಲ್ಲಿಯೇ ಲಿಂಗೈಕ್ಯರಾದರು ಎಂದು ೧೨ನೇ ಶತಮಾನದ ಅಸಂಖ್ಯಾತ ಶರಣರಲ್ಲಿ ಪ್ರಮುಖರಾದ ಚನ್ನಬಸವಣ್ಣನವರ ಹಿರಿಮೆಯ ಕುರಿತು ಮಾಹಿತಿ ನೀಡಿದರು.
ಶರಣಸಂಗಮ ಸೇವಾಸಮೀತಿ ತಾಲ್ಲೂಕು ಘಟಕದ ಅಧ್ಯಕ್ಷ ಸಂಗಪ್ಪ ತಡವಲ್, ಜೆ.ಆರ್.ಬಿರಾದಾರ, ಮಲ್ಲು ಭಂಡಾರಿ, ಗೊಲ್ಲಾಳ ಬಿರಾದಾರ(ಹಿಟ್ನಳ್ಳಿ), ಬಸವರಾಜ ಕುಂಬಾರ, ಅನುಮೇಶ ನಂದ್ಯಾಳ, ಆರ್.ಜಿ.ಕೋಟೀನ್ ಕೆ.ಎಮ್.ನಂದಿ, ನಿಂಗು ದಾನಗೊಂಡ, ರಾವುತಪ್ಪ ಜೊಂಡಿ ಸೇರಿದಂತೆ ಮಕ್ಕಳು ಇದ್ದರು.

