ಪದವಿ ಪೂರ್ವ ಮಹಾವಿದ್ಯಾಲಯಗಳ ರಾಜ್ಯ ಮಟ್ಟದ ಬಾಲಕ-ಬಾಲಕಿಯರ ಕುಸ್ತಿ ಪಂದ್ಯಾವಳಿಗೆ ಚಾಲನೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕುಸ್ತಿಗೆ ವಿಶೇಷ ಸ್ಥಾನಮಾನವಿದ್ದು, ಶತಮಾನಗಳ ಇತಿಹಾಸವಿದೆ. ಸಿಂದಗಿ ನಗರದಲ್ಲಿ ಕುಸ್ತಿ ಪಂದ್ಯಾವಳಿ ಆಯೋಜನೆ ಮಾಡಿದ್ದು ಸಂತಸ ತಂದಿದೆ. ಮುಂದಿನ ಯುವ ಪೀಳಿಗೆಗೆ ಇಂತಹ ಕ್ರೀಡೆಗಳ ಬಗ್ಗೆ ತಿಳಿಯಬೇಕಾದರೆ ಮೇಲಿಂದ ಮೇಲೆ ಕ್ರೀಡೆಗಳು ಜರುಗಬೇಕು. ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ಪಟ್ಟಣದ ಎಚ್.ಜಿ.ಕಾಲೇಜಿನ ಆವರಣದಲ್ಲಿ ಬೆಂಗಳೂರು ನಿರ್ದೇಶಕರ ಶಾಲಾ ಶಿಕ್ಷಣ ಇಲಾಖೆ, ವಿಜಯಪುರ ಉಪನಿರ್ದೇಶಕರ ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ ಎಚ್.ಜಿ.ಪಪೂ ಕಾಲೇಜಿನ ಸಹಯೋಗದಲ್ಲಿ ಹಮ್ಮಿಕೊಂಡ ಪದವಿ ಪೂರ್ವ ಮಹಾವಿದ್ಯಾಲಯಗಳ ರಾಜ್ಯ ಮಟ್ಟದ ಬಾಲಕ-ಬಾಲಕಿಯರ ಕುಸ್ತಿ ಪಂದ್ಯಾವಳಿಯನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಸಿಂದಗಿ ತಾಲೂಕೆಂದರೆ ಕುಸತಿಪಟುಗಳ ತವರು ಮನೆ. ಏಕೆಂದರೆ ಸಿಂದಗಿ ನಗರದಲ್ಲಿ ಕಳೆದ ೪೦ವರ್ಷಗಳ ಹಿಂದೆ ಗರಡಿ ಮನೆಯನ್ನು ಸ್ಥಾಪಿಸಿದ ಕೀರ್ತಿ ದಿ.ಆರ.ಬಿ.ಬೂದಿಹಾಳ ಗುರುಗಳಿಗೆ ಸಲ್ಲುತ್ತದೆ. ಅವರ ಇಡೀ ಜೀವನವನ್ನು ಕುಸ್ತಿಗಾಗಿ ಮೀಸಲಿಟ್ಟಿದ್ದರು. ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲ ಕ್ರೀಡಾಪಟುಗಳು ಕ್ರೀಡಾ ಮನೋಭಾವನೆಯಿಂದ ಪಾಲ್ಗೋಂಡು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಲು ಕರೆ ನೀಡಿದರು.
ರಾಜ್ಯ ಮಟ್ಟದಲ್ಲಿ ವಿಜೇತರಾದ ನಂತರ ರಾಷ್ಟ್ರ ಮಟ್ಟದಲ್ಲಿಯೂ ಸಹ ತಮ್ಮ ಛಾಪನ್ನು ಮೂಡಿಸಬೇಕು. ಕಾರ್ಯಕ್ರಮ ಯಶಸ್ವಿಗೆ ಈ ಭಾಗದ ಗಣ್ಯ ವ್ಯಕ್ತಿಗಳು, ವಿವಿಧ ಕಾಲೇಜಿನ ಪ್ರಾಚಾರ್ಯರು, ದೈಹಿಕ ಉಪನ್ಯಾಸಕರು, ಕ್ರೀಡಾಭಿಮಾನಿಗಳು, ಪದವಿ ಪೂರ್ವ ಇಲಾಖೆ, ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿ ಸೇರಿದಂತೆ ಅನೇಕರು ಸಹಕಾರ ನೀಡಿದ್ದಾರೆ. ಈ ಭಾಗದ ಗ್ರಾಮೀಣ ಕ್ರೀಡೆಯಾದ ಕುಸ್ತಿಗೆ ಪ್ರೋತ್ಸಾಹ ನೀಡಲು ಬದ್ಧನಾಗಿದ್ದೇನೆ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಸಾರಂಗಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ವಹಿಸಿದ್ದರು. ಉಪನಿರ್ದೇಶಕ ಡಾ.ಸಿ.ಕೆ. ಹೊಸಮನಿ, ಶಾಂತೇಶ ದುರ್ಗಿ, ಪ್ರಕಾಶ ಗೊಂಗಡಿ, ಸಂಸ್ಥೆಯ ನಿರ್ದೇಶಕರಾದ ಶಿವಪ್ಪಗೌಡ ಬಿರಾದಾರ, ವಿ.ಬಿ.ಕುರುಡೆ, ಬಿ.ಜಿ.ನೆಲ್ಲಗಿ, ಪುರಸಭೆ ಉಪಾಧ್ಯಕ್ಷ ಸಂದೀಪ ಚೌರ, ಆಲಮೇಲ ಪಪಂ ಅಧ್ಯಕ್ಷ ಸಾದಿಕ್ ಸುಂಬಡ, ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ, ಕೆ.ಎಚ್.ಸೋಮಾಪೂರ, ಡಾ.ರವಿ ಗೋಲಾ, ಸತೀಶ ಬಸರಕೋಡ, ಗವಿಸಿದ್ದಪ್ಪ ಆನೆಗುಂದಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ ವಿವಿಧ ಕಾಲೇಜಿನ ಪ್ರಾಚಾರ್ಯರು, ದೈಹಿಕ ಉಪನ್ಯಾಸಕರು, ಕುಸ್ತಿಪಟುಗಳು ಹಾಗೂ ಕ್ರೀಡಾಭಿಮಾನಿಗಳು ಇದ್ದರು.
ಜನಪ್ರತಿನಿಧಿಗಳು, ಅಧಿಕಾರಿಗಳ ಗೈರು
ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ಉದ್ಘಾಟನೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಜಿಲ್ಲೆಯ ಸಂಸದರು,, ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಮತ್ತು ಮಳೆ ಬರುವ ಮುನ್ಸೂಚನೆ ಇದ್ದರೂ ಸಹ ಇಲಾಖೆ ಮತ್ತು ಪಂದ್ಯಾವಳಿ ಆಯೋಜಕರು ಯಾವುದೇ ಪರ್ಯಾಯ ವ್ಯವಸ್ಥೆ ಮಾಡಿ ಕೊಳ್ಳದೇ ಇರುವುದರಿಂದ ಮಳೆ ಬಂದ ಸಂದರ್ಭದಲ್ಲಿ ಕೆಲ ಕಾಲ ಪಂದ್ಯ ನಿಂತು ಅಸ್ಥವ್ಯಸ್ಥಗೊಂಡು ಕ್ರೀಡಾಭಿಮಾನಿಗಳು, ಕುಸ್ತಿಪಟುಗಳು, ದೈಹಿಕ ಉಪನ್ಯಾಸಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

