ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ದೀಪಾವಳಿಯ ಬಲಿಪಾಡ್ಯಮಿ ನಿಮಿತ್ತ ಎತ್ತುಗಳಿಗೆ ಕೆಂಡ ಹಾಯಿಸುವ ಸಂಪ್ರದಾಯ ತಾಲ್ಲೂಕಿನಾದ್ಯಂತ ನಾನಾ ಹಳ್ಳಿಗಳಲ್ಲಿ ಜರುಗಿತು.
ಸಮೀಪದ ಬೇನಾಳ ಆರ್.ಎಸ್. ಗ್ರಾಮದಲ್ಲಿ ಬುಧವಾರ ಬೆಳಿಗ್ಗೆಯೇ ರೈತರು ತಮ್ಮ ತಮ್ಮ ಎತ್ತುಗಳನ್ನು ತೊಳೆದು ಸಿಂಗರಿಸಿದರು. ನಂತರ ಕೆಲ ರೈತರು ಮನೆಯ ಹೊಸ್ತಿಲು ಬಳಿ, ಇನ್ನೂ ಕೆಲವರು ಮನೆಯ ಹೊರಗಡೆ ನಾನಾ ವೈದ್ಯಕೀಯ ಗುಣಗಳು ಹೊಂದಿರುವ ತೊಗರಿ ಕಟ್ಟಿಗೆ, ಕಳ್ಳಿ, ತಂಗಟೆ ಹೂವು ಮತ್ತೀತರ ಗಿಡಗಳ ತಪ್ಪಲುಗಳಿಗೆ ಬೆಂಕಿ ಹಚ್ಚಿ, ಅದರ ಮೇಲೆ ಎತ್ತುಗಳನ್ನು ದಾಟಿಸಲಾಗುತ್ತದೆ.
ಮಳೆಗಾಲ ಪೂರ್ಣಗೊಂಡು ಚಳಿಗಾಲ ಆರಂಭಗೊಳ್ಳುವ ಮುನ್ನ ರಾಸುಗಳಿಗೆ ಕಾಲುಬೇನೆ, ಬಾಯಿಬೇನೆ, ರಾಸುಗಳಿಗೆ ಅಂಟಿರುವ ಕ್ರಿಮಿ ಕೀಟಗಳ ನಾಶವಾಗಲು ಈ ಬೆಂಕಿ ದಾಟಿಸುವ ಪ್ರಕ್ರಿಯೆ ನಡೆಯುತ್ತದೆ ಎಂದು ಬೇನಾಳ ಗ್ರಾಮದ ರೈತರಾದ ಮಹಾದೇವಪ್ಪ ಬಿರಾದಾರ, ಶರಣಪ್ಪ ಇಂಗಳೇಶ್ವರ, ಕಾಶೀಮಸಾಬ್ ಗಂಜ್ಯಾಳ, ಹನುಮಂತ ಗಾಳಪ್ಪಗೋಳ, ಪರಸಪ್ಪ ತಳವಾರ ಅಭಿಪ್ರಾಯ ಪಟ್ಟರು.
ಅಮವಾಸ್ಯೆಯ ತನಕ ನಮ್ಮ ದೀಪಾವಳಿ, ಮರುದಿನ ಎತ್ತುಗಳ ದೀಪಾವಳಿ ಎಂದು ಅವರು ಹೇಳಿದರು.
ಬೆಂಕಿ ಹಾಯಿಸುವಾಗಲೂ ಕೆಲ ಕಡೆ ಹಾಡು ಹಾಡುವ ಪದ್ಧತಿಯೂ ಇದೆ.
ಈ ರೀತಿಯ ಸಂಪ್ರದಾಯ ಬೇನಾಳ, ಚಿಮ್ಮಲಗಿ, ಹೆಬ್ಬಾಳ, ಗೊಳಸಂಗಿ, ವಂದಾಲ ಮತ್ತಿತರರ ಕಡೆಯೂ ಕಂಡು ಬಂತು. ಈ ದಿನ ಎತ್ತುಗಳಿಗೆ ವಿಶೇಷ ಆಹಾರವನ್ನು ನೀಡಲಾಗುತ್ತದೆ.

