ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಆಲಮಟ್ಟಿ ಜಲಾಶಯದ ಒಳಹರಿವು ಕಳೆದ ನಾಲ್ಕೈದು ದಿನಗಳಿಂದ ಕ್ಷೀಣಗೊಂಡಿದ್ದು, ಶುಕ್ರವಾರ ಸ್ಥಗಿತಗೊಂಡಿದೆ.
ಜುಲೈ ೮ ರಿಂದ ಕೃಷ್ಣಾ ಮೇಲ್ದಂಡೆ ಯೋಜನೆ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ವಾರಾಬಂಧಿ ಇಲ್ಲದೇ ಮುಂಗಾರು ಬೆಳೆಗೆ ನಿರಂತರವಾಗಿ ಹರಿಯುತ್ತಿದ್ದ ನೀರು ಇದೇ ಅ.೨೬ ರಿಂದ ಸ್ಥಗಿತಗೊಳ್ಳಲಿದೆ.
ಯುಕೆಪಿಯ ಮುಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನ.೪ ರವರೆಗೆ ೧೪ ದಿನ ಚಾಲು ಹಾಗೂ ೧೦ ದಿನ ಬಂದ್ ಪದ್ಧತಿಗೆ ಅನುಸಾರ ನೀರು ಹರಿಸುವುದು, ಆದರೆ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಇರುವವರೆಗೂ ರೈತರ ಬೇಡಿಕೆಗೆ ತಕ್ಕಂತೆ ನಿರಂತರ ನೀರು ಹರಿಸಲು ನಿರ್ಧರಿಸಲಾಗಿತ್ತು. ಸದ್ಯ ಆಲಮಟ್ಟಿ ಜಲಾಶಯದ ಒಳಹರಿವು ಸ್ಥಗಿತಗೊಂಡಿದ್ದು ವಾರಾಬಂಧಿ ಅಳವಡಿಸಬೇಕಿದೆ. ವಾರಾಬಂಧಿ ಪ್ರಕಾರ ಅ.೨೬ ರಿಂದ ನ.೪ ರವರೆಗೆ ಬಂದ್ ಅವಧಿಯಿದ್ದು, ಇದು ಮುಂಗಾರು ಹಂಗಾಮಿನ ಕೊನೆಯ ಕಂತಾಗಿದೆ. ಇಲ್ಲಿಯವರೆಗೆ ನಿರಂತರ ನೀರು ಹರಿಸಲಾಗಿದ್ದು ಅ.೨೫ ರವರೆಗೆ ನೀರು ಹರಿಸಿ, ಅ.೨೬ ರಿಂದ ಕಾಲುವೆಗೆ ನೀರು ಹರಿಸುವುದನ್ನು ನಿಲ್ಲಿಸಲಾಗುವುದು ಎಂದು ಅಣೆಕಟ್ಟು ವೃತ್ತ ವಲಯದ ಅಧಿಕಾರಿಗಳು ತಿಳಿಸಿದರು.
ನ.೪ ರಿಂದ ಮುಂಗಾರು ಹಂಗಾಮಿನ ನೀರು ಹರಿಸುವ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ, ಹೀಗಾಗಿ ಹಿಂಗಾರು ಹಂಗಾಮಿಗೆ ನೀರು ಹರಿಸುವ ಅವಧಿ ನಿರ್ಧರಿಸುವ ಐಸಿಸಿ ಸಭೆ ನಡೆಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು ಶೀಘ್ರವೇ ನಿಗದಿಯಾಗಲಿದೆ ಎಂದು ಕೆಬಿಜೆಎನ್ಎಲ್ ಅಧಿಕಾರಿಗಳು ತಿಳಿಸಿದರು.
ಸದ್ಯ ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ೧೨೩.೦೮೧ ಟಿಎಂಸಿ ಅಡಿ ನೀರು ಸಂಗ್ರಹಗೊಂಡರೂ ಬಳಕೆಯೋಗ್ಯ ೧೦೫ ಟಿಎಂಸಿ ಅಡಿ ನೀರು ಇದೆ. ಕುಡಿಯುವ ನೀರು, ವಿದ್ಯುತ್ ಉತ್ಪಾದನಾ ಕೇಂದ್ರ ಮತ್ತೀತರ ಬಳಕೆಗೆ ನೀರು ಸಂಗ್ರಹಿಸಿಟ್ಟುಕೊಂಡು, ವಾರಾಬಂಧಿ ಅಳವಡಿಸಿ ಹಿಂಗಾರು ಹಂಗಾಮಿಗೆ ೨೦೨೬ ರ ಮಾರ್ಚ್ ಎರಡನೇ ರವರೆಗೆ ನೀರು ಹರಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಇದು ಐಸಿಸಿಯಲ್ಲಿ ತೀರ್ಮಾನವಾಗಬೇಕಿದೆ.
