ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಡುರಸ್ತೆಯಲ್ಲಿ ಹಾಡುಹಗಲೇ ತನ್ನ ಪತ್ನಿಯನ್ನೇ ಮಾರಕಾಸ್ತ್ರದಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಸಿಂದಗಿ ಪಟ್ಟಣದ ಆನಂದ ಟಾಕೀಸ್ ಬಳಿ ಸಂಭವಿಸಿದೆ.
ಘಟನೆಯಿಂದಾಗಿ ತೀವ್ರವಾಗಿ ಗಾಯಗೊಂಡಿರುವ ಮಹಿಳೆಯನ್ನು ಅನುಸೂಯಾ ಮಾದರ ಎಂದು ಗುರುತಿಸಲಾಗಿದ್ದು, ಹಲ್ಲೆ ನಡೆಸಿದ ವ್ಯಕ್ತಿಯನ್ನು ಯಮನಪ್ಪ ಮಾದರ ಎಂದು ಗುರುತಿಸಲಾಗಿದೆ.
ನಡು ರಸ್ತೆಯಲ್ಲಿಯೇ ಮಚ್ಚು ಹಿಡಿದು ಹಲ್ಲೆ ನಡೆಸಿರುವ ಭೀಬತ್ಸ ದೃಶ್ಯ ಮೊಬೈಲ್‌ಗಳಲ್ಲಿ ಸೆರೆಯಾಗಿದೆ. ಏಕಾಏಕಿಯಾಗಿ ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿದಾಗ ಅಲ್ಲಿದ್ದ ಜನರು ಸಹ ಪ್ರಾಣದ ಹಂಗು ತೊರೆದು ಕಾಪಾಡಲು ಮುಂದಾದರೂ ಅವರತ್ತಲೂ ಮಾರಕಾಸ್ತ್ರ ಪ್ರದರ್ಶಿಸಿದ್ದಾನೆ, ಆದರೂ ಕೆಲವು ಯುವಕರು ಕಲ್ಲು ಹಾಗೂ ಬಡಿಗೆಯ ಸಹಾಯದಿಂದ ಆತನನ್ನು ಹಿಡಿದು ಅನಾಹುತ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಮಹಿಳೆಯನ್ನು ಸಿಂದಗಿ ತಾಲೂಕಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿಂದಗಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಮುಂದುವರೆದಿದೆ.

