ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕನೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರ ವಿಜಯಪುರ ಜಿಲ್ಲಾ ಪ್ರವೇಶ ನಿರ್ಭಂಧ ಖಂಡನೀಯ, ಕೂಡಲೇ ಈ ವಿಷಯದಲ್ಲಿ ರಾಜ್ಯಪಾಲರು ಮಧ್ಯಪ್ರವೇಶಿಸಿ ಈ ನಿರ್ಬಂಧ ತೆರವುಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಕೂಡಲೇ ನಿರ್ದೇಶನ ನೀಡುವಂತೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ವಿಜಯಪುರಕ್ಕೆ ಆಗಮಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕ್ರಾಂತಿವೀರ ಬ್ರಿಗೇಡ್ ನೇತೃತ್ವದಲ್ಲಿ ನಿಯೋಗದೊಂದಿಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ಈಶ್ವರಪ್ಪ, ಶ್ರೀಗಳ ನಿರ್ಬಂಧ ಆದೇಶವನ್ನು ವಾಪಸ್ಸು ಪಡೆಯುವಂತೆ ಒತ್ತಾಯಿಸಿದರು.
ಕನೇರಿ ಶ್ರೀಗಳು ಕಳೆದ ಹಲವಾರು ದಶಕಗಳಿಂದ ಅಧ್ಯಾತ್ಮ, ಕೃಷಿ, ಗೋ ರಕ್ಷಣೆ, ಭಾರತೀಯ ಸಂಸ್ಕೃತಿ ಪ್ರಸಾರ ಸೇರಿದಂತೆ ಅನೇಕ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ, ಜನರ ಆರೋಗ್ಯಕ್ಕಾಗಿ ಆಯುರ್ವೇದದ ಮೂಲಕ ಪರಿಹಾರ ಕಲ್ಪಿಸಿ ಜನರ ಆರೋಗ್ಯ ರಕ್ಷಣೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ, ಸಾವಯುವ ಕೃಷಿ ಉತ್ಪಾದನೆ, ಕೃಷಿಕರಿಗೆ ಉತ್ತೇಜನ ಹೀಗೆ ನಾನಾ ರೀತಿಯಲ್ಲಿ ನಾಡಿಗೆ ಸೇವೆ ಮಾಡುತ್ತಿದ್ದಾರೆ, ಆದರೆ ಕೆಲವರು ಶ್ರೀಗಳ ವಿರುದ್ಧ ಇಲ್ಲ ಸಲ್ಲದ ವಿಷಯವನ್ನು ದೊಡ್ಡದು ಮಾಡಿ ರಾಜಕೀಯ ಲಾಭ ಪಡೆದುಕೊಳ್ಳಲು ಯತ್ನಿಸುತ್ತಿವೆ, ಸಂತರನ್ನು ಈ ರೀತಿ ಅಗೌರವದಿಂದ ನಡೆದುಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರದ ನಡೆ ಸರಿಯಲ್ಲ, ಈ ಹಿನ್ನೆಲೆಯಲ್ಲಿ ಈ ವಿಷಯವನ್ನು ರಾಜ್ಯಪಾಲರು ಸಹ ಗಂಭೀರವಾಗಿ ಪರಿಗಣಿಸಿ ಕೂಡಲೇ ಈ ವಿಷಯವಾಗಿ ಮಧ್ಯ ಪ್ರವೇಶಿಸಿ ವಿಜಯಪುರ, ಬಾಗಲಕೋಟೆ ಅವಳಿ ಜಿಲ್ಲೆಗಳಿಗೆ ಶ್ರೀಗಳ ಪ್ರವೇಶ ನಿರ್ಭಂಧ ಅದೇಶವನ್ನು ಹಿಂದಕ್ಕೆ ಪಡೆಯುವಂತೆ ಸೂಕ್ತ ನಿರ್ದೇಶನ ನೀಡುವಂತೆ ಈಶ್ವರಪ್ಪ ಒತ್ತಾಯಿಸಿದರು.
ಕ್ರಾಂತಿವೀರ ಬ್ರಿಗೇಡ ರಾಜ್ಯಾಧ್ಯಕ್ಷ ಬಸವರಾಜ ಬಾಳಿಕಾಯಿ, ಕಾರ್ಯಾಧ್ಯಕ್ಷ ಕೆ.ಇ. ಕಾಂತೇಶ, ಅಶೋಕ ಒಡೆಯರ, ವೀರಣ್ಣ ಹಳೆಗೌಡರ, ಕಲ್ಲು ಸೊನ್ನದ, ವೆಂಕಟೇಶ ಕಪ್ಪ, ರಾಹುಲ್ ಔರಂಗಾಬಾದ್, ಕಾಶೀನಾಥ ಒಡೆಯರ ಪಾಲ್ಗೊಂಡಿದ್ದರು.

