ಸಚಿವ ಡಾ. ಎಂ.ಬಿ.ಪಾಟೀಲ ರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಕಿವಿಮಾತು
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಚಿವ ಡಾ.ಎಂ.ಬಿ. ಪಾಟೀಲರು ಮುಖ್ಯಮಂತ್ರಿಯಾಗಲಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ, ಆದರೆ ತಾವು ಮುಖ್ಯಮಂತ್ರಿಯಾಗಲು ಹಿಂದೂ ಸಮಾಜವನ್ನು ಒಡೆಯುವ ದುಸ್ಸಾಹಸಕ್ಕೆ ಕೈ ಹಾಕಬೇಡಿ, ಈ ಹಿಂದೆಯೂ ಲಿಂಗಾಯತ ಧರ್ಮ ಪ್ರತ್ಯೇಕ ವಿಚಾರ ವಿಷಯ ಮುನ್ನೆಲೆಗೆ ತಂದು ಕೈ ಸುಟ್ಟುಕೊಂಡಿದ್ದೀರಿ, ಈಗ ಪುನಃ ಧರ್ಮ ಒಡೆದು ಮುಖ್ಯಮಂತ್ರಿಯಾಗುವ ಕೆಲಸ ಬೇಡ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹೇಳಿದರು.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಮುಖ್ಯಮಂತ್ರಿ ಆಗುವ ಇರಾದೆಯಲಿರುವ ಸಚಿವ ಪಾಟೀಲರು ಈ ಧರ್ಮ ವಿಭಜನೆಯಲ್ಲಿ ತೊಡಗಿದ್ದಾರೆ,
೨೦೨೮ ರಲ್ಲಿ ಮುಖ್ಯಮಂತ್ರಿ ಆಗುವ ಕನಸು ಕಾಣಬೇಡಿ, ನವ್ಹೆಂಬರ್ ಕ್ರಾಂತಿಯಲ್ಲಿಯೇ ನೀವು ಮುಖ್ಯಮಂತ್ರಿ ಆಗಬೇಕು ಹೊರತು ಮುಂದೆ ನಾನು ಮುಖ್ಯಮಂತ್ರಿ ಆಗುವೆ ಎಂಬ ಕನಸು ಕಾಣಲು ಹೋಗಬೇಡಿ, ಮುಂದೆ ಬಿಜೆಪಿ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದರು.
ಕನೇರಿ ಶ್ರೀಗಳ ಮನಸ್ಸಿಗೆ ನೋವು ಮಾಡುವ ಕೆಲಸ ನಡೆದಿದೆ, ಇದೇ ರೀತಿ ಪರಿಸ್ಥಿತಿ ಆದರೆ ಜನರೇ ದಂಗೆ ಏಳುತ್ತಾರೆ, ನಾವು ಸಹ ಧರ್ಮಸ್ಥಳ ಮಾದರಿಯಲ್ಲಿ ಹೋರಾಟ ನಡೆಸಲು ಬದ್ದ ಎಂದರು.
ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಒತ್ತಾಯಿಸಿ ೩೫ ದಿನಗಳಿಂದ ಹೋರಾಟ ನಡೆಯುತ್ತಿದೆ, ಆ ಸ್ಥಳಕ್ಕೆ ಮುಖ್ಯಮಂತ್ರಿಗಳು ಭೇಟಿ ನೀಡಬೇಕಿತ್ತು, ಆದರೆ ಈ ಸರ್ಕಾರ ಮಾತ್ರ ಯಾರಿಗೂ ಸ್ಪಂದನೆಯೇ ಇಲ್ಲದಂತಾಗಿದೆ ಎಂದರು.
ರೈತ ಮೋರ್ಚಾ ಪ್ರಮುಖ ಹಾಗೂ ನ್ಯಾಯವಾದಿ ಡಿ.ಜಿ. ಬಿರಾದಾರ ಮಾತನಾಡಿ, ರೈತರಿಂದ
ಕಾಲುವೆಗಾಗಿ ಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ ಸಂಬಂಧಿಸಿದಂತೆ ರೈತರಿಗೆ ಪರಿಹಾರ ದೊರಕಿಲ್ಲ, ಅತ್ತ ಜಮೀನುಗಳಿಗೆ ನೀರು ದೊರಕಿಲ್ಲ ಈ ರೀತಿಯಾದರೆ ರೈತರು ಎಲ್ಲಿ ಹೋಗಬೇಕು? ವಿಜಯಪುರದಲ್ಲಿಯೇ ೮ ಸಾವಿರಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥವಾಗಿವೆ, ಕೋರ್ಟ್ ಪರಿಹಾರ ಆದೇಶ ನೀಡಿದ ಪ್ರಕರಣಗಳಲ್ಲಿಯೂ ಇಂದಿಗೂ ಸರ್ಕಾರ ಪರಿಹಾರ ನೀಡಿಲ್ಲ, ಈ ಸರ್ಕಾರದ ಅವಧಿಯಲ್ಲಿ ಒಂದೇ ಒಂದು ರೂ. ಪರಿಹಾರ ರೈತರಿಗೆ ಸೇರಿಲ್ಲ ಇದೊಂದು ದಪ್ಪ ಚರ್ಮದ ಸರ್ಕಾರ ಎಂದರು.
ಜಿ.ಪಂ. ಮಾಜಿ ಸದಸ್ಯ ಸಾಬು ಮಾಶ್ಯಾಳ, ಮುಕಂಡ ಈರಣ್ಣ ರಾವೂರ, ಜಿಲ್ಲಾ ವಕ್ತಾರ ವಿಜಯ ಜೋಶಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಬಿಲ್ ಪಾವತಿಯಾಗದೆ ಗುತ್ತಿಗೆದಾರರಿಗೆ ಸಂಕಷ್ಟ!
ರಾಜ್ಯ ಅಷ್ಟೇ ಅಲ್ಲ ಜಿಲ್ಲೆಯ ವ್ಯವಸ್ಥೆ ಅಧೋಗತಿಗೆ ಹೋಗಿದೆ, ಬ್ರಿಟಿಷ್ ಆಡಳಿತ ನೆನಪಿಸುತ್ತಿದೆ. ಜಿಲ್ಲೆಯ ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗಿಲ್ಲ, ಸಾಲದ ಹೊರೆಯಾಗಿ ಅನೇಕ ಗುತ್ತಿಗೆದಾರರು ಊರು ಬಿಡುವಂತಾಗಿದೆ ಇದರ ಬಗ್ಗೆ ಗಮನ ಹರಿಸುವ ಕಾರ್ಯವಾಗಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅಂಗಡಿ ಅಸಮಾಧಾನ ವ್ಯಕ್ತಪಡಿಸಿದರು.

