ಕೊಲ್ಹಾರದಲ್ಲಿ ತಹಶೀಲ್ದಾರ ಸಂತೋಷ ಮ್ಯಾಗೇರಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರೊಂದಿಗೆ ಯುದ್ಧ ಮಾಡಿ ದೇಶದಲ್ಲಿ ಸ್ವಾತಂತ್ರದ ಕಿಚ್ಚನ್ನು ಮೊಟ್ಟಮೊದಲಿಗೆ ಹಚ್ಚಿದವರು ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ವೀರ ರಾಣಿ ಕಿತ್ತೂರು ಚೆನ್ನಮ್ಮ ಮೊದಲಿಗರು ಎಂದು ತಹಶೀಲ್ದಾರ ಸಂತೋಷ ಮ್ಯಾಗೇರಿ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲೂಕು ಆಡಳಿತ ಹಾಗೂ ಕೊಲ್ಹಾರ ತಾಲೂಕ ಲಿಂಗಾಯತ ಪಂಚಮಸಾಲಿ ಸಮಾಜದ ಸಹ ಯೋಗದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿಯ ಕಾರ್ಯಕ್ರಮದಲ್ಲಿ ಚೆನ್ನಮ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆಗೆ ಸಲ್ಲಿಸಿ ಮಾತನಾಡಿದ ಅವರು, ಬ್ರಿಟಿಷರೊಂದಿಗೆ ಕಪ್ಪು ಕಾಣಿಕೆ ವಿಚಾರ ಬಂದಾಗ ಯುದ್ಧ ಮಾಡಿ ಬ್ರಿಟಿಷರಿಗೆ ಸೋಲಿನ ರುಚಿಯನ್ನು ತೋರಿಸಿದರು. ಇವಳ ಶೌರ್ಯ, ತ್ಯಾಗ ಸಾಹಸವನ್ನು ಕಂಡು ಬ್ರಿಟಿಷರು ಬೆಚ್ಚಿದ್ದರು. ಕಿತ್ತೂರು ಒಂದು ಚಿಕ್ಕ ಸಂಸ್ಥಾನವಾದರೂ ಕೂಡ ಅದನ್ನು ಉಳಿಸಿಕೊಳ್ಳಲು ದೊಡ್ಡ ಹೋರಾಟವನ್ನು ಮಾಡಿದರು. ಚೆನ್ನಮ್ಮನ ಆಚಾರ ವಿಚಾರ ನಡೆ-ನುಡಿಗಳನ್ನು ಇಂದಿನ ಯುವಕರಿಗೆ ತಿಳಿಸಬೇಕಾಗಿದೆ. ಚೆನ್ನಮ್ಮ ಹಾಕಿ ಕೊಟ್ಟಂತ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ ಎಂದರು.
ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ವೀರೇಶ ಹಟ್ಟಿ ಮಾತನಾಡಿ, ಬ್ರಿಟಿಷರೊಂದಿಗೆ ಮೊಟ್ಟ ಮೊದಲನೇ ಯುದ್ಧವನ್ನು ಗೆದ್ದ ಚೆನ್ನಮ್ಮ ಲಾರ್ಡ್ ಡಾಲ್ ಹೌಸಿ ಜಾರಿಗೆ ತಂದ ದತ್ತ ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾನೂನನ್ನು ವಿರೋಧಿಸಿದ್ದಳು. ಚನ್ನಮ್ಮನ ಶೌರ್ಯ ತ್ಯಾಗ ನಮ್ಮೆಲ್ಲರಿಗೂ ಮಾದರಿ ಎಂದರು.
ಪಂಚಮಸಾಲಿ ಸಮಾಜದ ಮುಖಂಡ ಸಂತೋಷ ಚನಗೊಂಡ ಮಾತನಾಡಿ, ಇಂದಿನ ಮಕ್ಕಳಿಗೆ ಚೆನ್ನಮ್ಮನ ದೇಶಭಕ್ತಿ ಹಾಗೂ ಆದರ್ಶವನ್ನು ತುಂಬಬೇಕಾಗಿದೆ. ಬ್ರಿಟಿಷರ ವಿರುದ್ಧ ಯುದ್ಧದಲ್ಲಿ ಗೆದ್ದ ದಿನವನ್ನು ತನ್ನ ಜಯಂತಿಯನ್ನಾಗಿ ಆಚರಿಸದೆ ವಿಜಯೋತ್ಸವದ ರೂಪದಲ್ಲಿ ಆಚರಣೆ ಮಾಡಿ ಎಂದಿದ್ದಳು. ಅದರಂತೆ ಇಂದು ಚೆನ್ನಮ್ಮನ 247ನೇ ಜಯಂತೋತ್ಸವ ಹಾಗೂ 201ನೇ ವಿಜಯೋತ್ಸವವನ್ನು ದೇಶಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದರು.
ಬ್ರಿಟಿಷರಿಗೆ ಸಿಂಹ ಸ್ವಪ್ನ ವಾಗಿದ್ದ ಚೆನ್ನಮ್ಮ ಅವರ ಶಕ್ತಿಯನ್ನು ಅಡಗಿಸಿದ್ದಳು. ಮಹಾನ ವ್ಯಕ್ತಿಗಳನ್ನ ನಾವು ಜಾತಿ ಧರ್ಮದಿಂದ ನೋಡಿದಾಗ ಅವರು ಬಹಳ ಚಿಕ್ಕವರಾಗುತ್ತಾರೆ ಆದರೆ ಅವರ ಸಾಧನೆ ಮತ್ತು ಇತಿಹಾಸವನ್ನು ನೋಡಬೇಕಾಗಿದೆ ಎಂದರು. ಮಕ್ಕಳಿಗೆ ಶೈಕ್ಷಣಿಕವಾಗಿ ಕಿತ್ತೂರು ಚೆನ್ನಮ್ಮನ ಇತಿಹಾಸವನ್ನು ತಿಳಿಸಬೇಕಾಗಿದೆ ಸರ್ಕಾರ ಇದರ ಬಗ್ಗೆ ಆಲೋಚನೆಯನ್ನು ಮಾಡಬೇಕು ಎಂದರು.
ವೀರರಾಣಿ ಕಿತ್ತೂರು ಚೆನ್ನಮ್ಮನ 247ನೇ ಜಯತ್ಯೋತ್ಸವ ಹಾಗೂ 201ನೇ ಕಿತ್ತೂರು ವಿಜಯೋತ್ಸವವನ್ನು ಬಹಳ ಸಡಗರದಿಂದ ಆಚರಿಸಲಾಯಿತು.
ಈ ವೇಳೆ ಪಂಚಮಸಾಲಿ ಸಮಾಜದ ಮುಖಂಡರಾದ ಮಲ್ಲು ದೇಸಾಯಿ ಬೀಳಗಿ, ಬಸವರಾಜ ಬೀಳಗಿ , ಶಿವಶಂಕರ ಬೀಳಗಿ , ಸಂಗಮೇಶ ಚಿಮ್ಮಲಗಿ, ಬಸವರಾಜ ಸಾಲಳ್ಳಿ, ವಿಜಯ ಪಾವಡದ, ಮಲ್ಲು ವಾಲಿಕಾರ, ಸಂಗಮೇಶ ಗೂಗಿಹಾಳ, ಮಲ್ಲು ಹೆರಕಲ, ಸಂಗಮೇಶ ಹೆರಕಲ, ಶರಣಪ್ಪ ಧರೆಗೊಳ, ವಿಠ್ಠಲ ಹೆರಕಲ್, ಪರಶುರಾಮ ಬೆನ್ನೂರ, ಸಂಗಮೇಶ ಬಿರಾದಾರ, ಮಲ್ಲು ಬಿಳಗಿ, ಪಟ್ಟಣ ಪಂಚಾಯಿತಿ ಸದಸ್ಯರಾದ ತೌಸೀಫ ಗಿರಗಾವಿ, ಬಾಬು ಭಜಂತ್ರಿ, ದಶರಥ ಈಟಿ, ರವಿ ಗೊಳಸಂಗಿ, ಯಮನೂರಿ ಮಾಕಾಳೆ, ಮಹೇಶ ಗೋಕಾವಿ, ವಿವಿಧ ಇಲಾಖೆ ಅಧಿಕಾರಿಗಳು ತಹಶೀಲ್ದಾರ್ ಕಚೇರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಶಿರಸ್ತೆದಾರ ಕೃಷ್ಣ ಗೂಡೂರ ಕಾರ್ಯಕ್ರಮ ನಡೆಸಿಕೊಟ್ಟರು.
ಈ ವೇಳೆ ಪಡದಯ್ಯ ಹಿರೇಮಠ, ಪಟ್ಟಣದ ಗಣ್ಯರು, ಸಮಾಜದ ಮುಖಂಡರು, ಪಟ್ಟಣ ಪಂಚಾಯತಿ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಸಂಘಟನೆಯ ಪದಾಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಿತ್ತೂರು ಚೆನ್ನಮ್ಮ ಭಾವಚಿತ್ರಕ್ಕೆ ಪೂಜೆ
ಪಟ್ಟಣದ ರಾಣಿ ಚೆನ್ನಮ್ಮ ಸರ್ಕಲನಲ್ಲಿ ತಾಲೂಕು ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಕಿತ್ತೂರು ಚೆನ್ನಮ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ತಹಶೀಲ್ದಾರ ಸಂತೋಷ್ ಮ್ಯಾಗೇರಿ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೀರೇಶ ಹಟ್ಟಿ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು.

