ನಿವರಗಿ ಗ್ರಾಮದಲ್ಲಿ ಜಿಲ್ಲೆಯಲ್ಲಿಯೇ ಹೆಚ್ಚಿನ ಪಟಾಕಿಗಳ ಸದ್ದು
ಉದಯರಶ್ಮಿ ದಿನಪತ್ರಿಕೆ
ರೇವತಗಾಂವ: ಚಡಚಣ ತಾಲೂಕಿನ ನಿವರಗಿ ಗ್ರಾಮದಲ್ಲಿ ದೀಪಾವಳಿ ಪಾಡ್ಯದ ನಿಮಿತ್ತ ಬುಧವಾರದಂದು ಶ್ರೀ ಸಂಗಮೇಶ್ವರ ಹಾಗೂ ಶ್ರೀ ಮಹಾಲಕ್ಷ್ಮಿ ದೇವರುಗಳ ಪಲ್ಲಕ್ಕಿಗಳ ಭೇಟಿ ಕಾರ್ಯಕ್ರಮವು ಬಹು ಅದ್ಧೂರಿಯಾಗಿ ನೆರವೇರಿತು.
ಗ್ರಾಮದಲ್ಲಿ ನಸುಕಿನ ಜಾವ ೫ ಗಂಟೆಗೆ ಶ್ರೀ ಸಂಗಮೇಶ್ವರ ಹಾಗೂ ಮಹಾಲಕ್ಷ್ಮಿದೇವಿಗೆ ಪೂಜೆ, ಮಹಾಮಂಗಳಾರತಿ, ರುದ್ರಾಭಿಷೇಕ, ಉಡಿ ತುಂಬುವ, ಸಬೀನ್ ತಿರುಗುವ ಹಾಗೂ ನೈವೇದ್ಯ ಕಾರ್ಯಕ್ರಮ ನಡೆಯಿತು. ನಂತರ ಡೋಳ್ಳಿನ ಪದಗಳು ಜರುಗಿದವು.
ಸಾಯಂಕಾಲ ೫ ಗಂಟೆಗೆ ಆಕರ್ಷಕ ಗೊಂಬೆ ಕುಣಿತಗಳೊಂದಿಗೆ, ವಿವಿಧ ವಾದ್ಯ ವೈಭವಗಳೊಂದಿಗೆ ಶ್ರೀ ಮಹಾಲಕ್ಷ್ಮಿ ದೇವರ ಪಲ್ಲಕ್ಕಿ ಉತ್ಸವವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗ್ರಾಮದ ದೊಡ್ಡ ಹಳ್ಳದ ವಿಶಾಲವಾದ ಮೈದಾನ ತಲುಪಿತು. ಈ ವೇಳೆ ಭೀಮಾ ನದಿಯ ದಂಡದ ಮೇಲೆ ನೆಲೆ ನಿಂತಿರುವ ಶ್ರೀ ಸಂಗಮೇಶ್ವರ ದೇವರ ಪಲ್ಲಕ್ಕಿ ಉತ್ಸವವು ಕೂಡಾ ಹಳ್ಳದ ವಿಶಾಲವಾದ ತಲುಪಿತು. ಸಾಯಂಕಾಲ ೬ ಗಂಟೆಯ ಸುಮಾರಿಗೆ ಅಣ್ಣ ತಂಗಿಯ ಭೇಟಿ ಕಾರ್ಯಕ್ರಮವು ನೆರವೇರಿತು. ಈ ವೇಳೆ ಪೂಜಾರಿಯರಿಂದ ನುಡಿ ಮುತ್ತುಗಳು ಜರುಗಿದವು. ಈ ಭಕ್ತರು ಭಂಡಾರವನ್ನು ಪಲ್ಲಕ್ಕಿಗಳ ಮೇಲೆ ಎಸೆದು ತಮ್ಮ ಹರಕೆಗಳನ್ನು ತೀರಿಸಿದರು.
ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚಿನ ಪಟಾಕಿಗಳನ್ನು ಸಿಡಿಸುವ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಗ್ರಾಮದಲ್ಲಿ ಕಿರಿಯರಿಂದ ಹಿಡಿದು ಹಿರಿಯರವರೆಗಿನ ಎಲ್ಲ ವಯೋಮಾನದವರು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು. ಹನುಮಾನ ದೇವಸ್ಥಾನದ ಮುಂಭಾಗ ಭಕ್ತರು ಸಿಡಿಗಾಯಿಯನ್ನು ಒಡೆಯುವ ಮೂಲಕ ಭಕ್ತರು ತಮ್ಮ ಹರಕೆಗಳನ್ನು ತೀರಿಸುವ ಮೂಲಕ ಸಂಭ್ರಮದಿಂದ ದೀಪಾವಳಿಯನ್ನು ಆಚರಿಸಿದರು.
ರಾತ್ರಿ ೧೦ ಗಂಟೆಗೆ ಗ್ರಾಮದ ಕಲಾವಿದರಿಂದ ‘ಮಾತು ಬಿದ್ದಿತು ಮೌನ ಗೆದ್ದಿತು’ ಎಂಬ ಹಾಸ್ಯ ಭರಿತವಾದ ನಾಟಕವು ಪ್ರದರ್ಶನಗೊಂಡಿತು.

