ಎಚ್.ಜಿ.ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎ ಆರ್ ಹೆಗ್ಗಣದೊಡ್ಡಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಬ್ರಿಟಿಷರ ವಿರುದ್ಧ ರೋಚಕ ಹಾಗೂ ಐತಿಹಾಸಿಕ ಜಯ ಸಾಧಿಸಿದ ವೀರರಾಣಿ ಚೆನ್ನಮ್ಮಳ ಕ್ರಾಂತಿಕಾರಿ ಹೋರಾಟವು ೧೮೫೭ ರ ಪ್ರಥಮ ಸ್ವಾತಂತ್ರ‍್ಯ ಸಂಗ್ರಾಮಕ್ಕೆ ಪ್ರೇರಣೆಯಾಯಿತು ಎಂದು ಎಚ್.ಜಿ.ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎ ಆರ್ ಹೆಗ್ಗಣದೊಡ್ಡಿ ಅಭಿಪ್ರಾಯಪಟ್ಟರು.
ಪಟ್ಟಣದ ತಹಶೀಲದಾರ ಕಚೇರಿಯಲ್ಲಿ ತಾಲೂಕಾಡಳಿತ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಣಿ ಚೆನ್ನಮ್ಮಾಜಿಯ ೧೪೭ನೇ ಜಯಂತೋತ್ಸವ ಹಾಗೂ ೧೦೧ ನೇಯ ವಿಜಯೋತ್ಸವದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಭಾರತವನ್ನು ಬ್ರಿಟಿಷರ ಸಂಕೋಲೆಯಿಂದ ಬಿಡಿಸಲು ಅಸಂಖ್ಯಾತ ಸ್ವಾತಂತ್ರವೀರರ ತ್ಯಾಗ ಬಲಿದಾನಗಳು ಕಾರಣವಾಗಿವೆ. ಈ ಸಂಗ್ರಾಮದಲ್ಲಿ ತೆರೆಮರೆಯ ಹಿಂದೆ ತಮ್ಮ ರಕ್ತ ಚೆಲ್ಲಿ ಮೌನ ಹೋರಾಟ ಮಾಡಿ ಮರೆಯಾದವರೆಷ್ಟೋ! ಅಂಥವರ ಬಲಿದಾನದ ಇತಿಹಾಸವನ್ನು ಇಂದಿನ ಯುವ ಪೀಳಿಗೆಗೆ ತಿಳಿಯಪಡಿಸುವ ಅಗತ್ಯವಿದೆ ಎಂದ ಅವರು, ರಾಣಿ ಚೆನ್ನಮ್ಮ ವಿಜಯೋತ್ಸವ ಕೇವಲ ಕಿತ್ತೂರಿನ ವಿಜಯೋತ್ಸವವಾಗಿರದೆ ಸಮಸ್ತ ಕನ್ನಡ ನಾಡಿನ ವಿಜಯೋತ್ಸವವಾಗಿತ್ತು ಎಂದರು.
ತಹಶೀಲದಾರ ಕರೆಪ್ಪ ಬೆಳ್ಳಿ ಹಾಗೂ ಅಶೋಕ ಅಲ್ಲಾಪುರ ಮಾತನಾಡಿ, ಮಹಾತ್ಮರ ಜಯಂತಿಗಳು ಆಯಾ ಜಾತಿ ಜನಾಂಗಕ್ಕೆ ಮೀಸಲಾಗಿರಿಸದೆ ಸರ್ವ ಜನಾಂಗದವರೂ ಮಹಾತ್ಮರ ತತ್ವಾದರ್ಶಗಳನ್ನು ಪಾಲಿಸಿ ಗೌರವಿಸುವಂತಾಗಬೇಕು. ಎಲ್ಲ ಜಯಂತಿಗಳಿಗೆ ಎಲ್ಲಾ ಸಮುದಾಯದವರು ಪಾಲ್ಗೊಂಡು ವಿಶಾಲ ಮನೋಭಾವನೆ ಬೆಳಸಿಕೊಳ್ಳಬೇಕೆಂದರು.
ಕಾರ್ಯಕ್ರಮವನ್ನು ಸಿ.ಎಂ.ಮನಗೂಳಿ ಮಹಾವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಅರವಿಂದ ಮನಗೂಳಿ ಉದ್ಘಾಟಿಸಿದರು. ಪಂಚಮಸಾಲಿ ಸಮಾಜದ ಅಧ್ಯಕ್ಷ ಎಂ.ಎಂ.ಹಂಗರಗಿ, ಸಿದ್ದುಗೌಡ ಪಾಟೀಲ ಹೂವಿನಹಳ್ಳಿ, ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ಪಾಟೀಲ, ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ, ಉಪನೋಂದಣಾಧಿಕಾರಿ ಕಿರಣ ಹಂಪಿಹೊಳಿ, ಪ್ರತಿಭಾ ಚಳ್ಳಗಿ ವೇದಿಕೆಯ ಮೇಲಿದ್ದರು.
ಚನ್ನವೀರ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಬಸವರಾಜ ಸೋಂಪುರ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಯಡ್ರಾಮಿ ಸ್ವಾಗತಿಸಿದರು.
ಈ ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಸೋಮನಗೌಡ ಬಿರಾದಾರ. ವ್ಹಿ.ಬಿ.ಕುರಡೆ, ರವಿ ದೇಸಾಯಿ, ಕಾಳಪ್ಪ ಬಗಲಿ, ಆನಂದ ಶಾಬಾದಿ, ಸಂಗನಗೌಡ ಪಾಟೀಲ, ಮಲ್ಲನಗೌಡ ಪಾಟೀಲ ಇಬ್ರಾಂಹಿಪೂರ, ಬಸವರಾಜ ಐರೋಡಗಿ, ರುದ್ರಗೌಡ ಪಾಟೀಲ, ಭೀಮನಗೌಡ ಪಾಟೀಲ, ಚಂದ್ರಶೇಖರ ನಾಗರಬೆಟ್ಟ, ಸಂಗನಗೌಡ ಬಿರಾದಾರ ಯಂಕಂಚಿ, ಇನ್ನಿತರರು ಇದ್ದರು.

