ಲೇಖನ
– ಜಯಶ್ರೀ.ಜೆ.ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ನಮಗೆ ಅತಿ ಬೇಕಾದವರೇ ಅವಮಾನದ ಕೋಟೆಯನ್ನೇರಿಸಿದಾಗ ಇದ್ದು ಪ್ರಯೋಜನವಿಲ್ಲ ಕೊನೆಯುಸಿರೆಳೆಯುವುದೇ ಒಳ್ಳೆಯದು ಎಂದೆನಿಸುವುದು ಸಹಜ. ಅವಮಾನದ ಬೆಟ್ಟ ಕರಗಿಸದೇ ಇದ್ದಿದ್ದರೆ, ಅವಮಾನದ ಕತ್ತಲಿನ ಜೊತೆ ಉಸಿರನ್ನು ಒಂದಾಗಿಸಿದ್ದರೆ ಅದೆಷ್ಟೋ ಮಹಾನ್ ಸಾಧಕರು ಇಂದು ಇತಿಹಾಸದ ಪುಟದಲ್ಲಿ ಮಿಂಚುತ್ತಿರಲಿಲ್ಲ. ನಮ್ಮ ಏಳ್ಗೆಯನ್ನು ಕಂಡು ತಮ್ಮಿಂದ ಅದು ಸಾಧ್ಯವಾಗದಿರುವುದಕ್ಕೆ ಕೊರಗಿ ನಮ್ಮ ಮುಂದೆ ಅವಮಾನವೆಂಬ ಹಗ್ಗವನ್ನು ಇಳಿಬಿಟ್ಟು ಕಟ್ಟಲು ನೋಡುತ್ತಾರೆ. ಇಳಿ ಬಿಟ್ಟ ಹಗ್ಗವನ್ನೇ ಹಿಡಿದು ಮೇಲೇರತೊಡಗಿದರೆ, ಆವಾಕ್ಕಾಗಿ ತುಸು ಹೊತ್ತಿನಲ್ಲೇ ನಮ್ಮಿಂದ ದೂರವಾಗಿ ತಾವೇ ಅವಮಾನದ ಕತ್ತಲಲ್ಲಿ ಕರಗಿ ಹೋಗುತ್ತಾರೆ..

ಅವಮಾನ ಯಾರಿಗಿಲ್ಲ ಹೇಳಿ?
ಜಗದಲ್ಲಿ ಹುಟ್ಟಿದ ಮೇಲೆ ಎಲ್ಲರೂ ಒಂದಿಲ್ಲೊಂದು ದಿನ ಒಂದಿಲ್ಲೊಂದು ಸಂದರ್ಭದಲ್ಲಿ ಅವಮಾನ ಎದುರಿಸಲೇಬೇಕಾಗುತ್ತದೆ. ಮಹಾತ್ಮರೆನಿಸಿಕೊಂಡ ಗಾಂಧೀಜಿಯೂ ಅವಮಾನಿತರಾದವರೆ! ಅರ್ಥಶಾಸ್ತ್ರ ರಚಿಸಿದ ಚಾಣಕ್ಯ ಅವಮಾನಿತಗೊಂಡಿರಲಿಲ್ಲವೇ? ಗಾಂಧೀಜಿ ಹಾಗೂ ಚಾಣಕ್ಯ ಕಿವಿಗೆ ಬಿದ್ದ ಅವಮಾನಭರಿತ ಕಠೋರ ಮಾತುಗಳನ್ನು ಕ್ರೋಧಭರಿತ ಕಂಗಳಿಂದ, ಬಿಗಿ ಹಿಡಿದ ತುಟಿಗಳಿಂದ ಸಹಿಸಿದರು. ಮಡುಗಟ್ಟಿದ ಆತಂಕ ದುಗುಡಗಳನ್ನೆಲ್ಲ ಒಟ್ಟಾಗಿಸಿ ಆಕ್ರೋಶದ ರೂಪ ಹೊತ್ತು ನುಗ್ಗಲು ನೋಡದೇ, ತಾಳ್ಮೆಯನ್ನೆಲ್ಲ ಒಟ್ಟುಗೂಡಿಸಿಕೊಂಡರು. ಅರೆಕ್ಷಣವನ್ನು ಅಪವ್ಯಯಿಸದೇ ತಂತ್ರ ಯೋಜಿಸಿದರು. ಸರಸರನೇ ಅವಮಾನದ ಗೋಡೆಯನ್ನೇರಿ ಕೆಚ್ಚೆದೆಯ ಮೆರೆದರು.. ದೈನಂದಿನ ಬದುಕಿನಲ್ಲಿ ಅವಮಾನದ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ. ಮಾನ ಸ್ವಾಭಿಮಾನ ಎಲ್ಲವೂ ನಮ್ಮ ಸಾಮರ್ಥ್ಯದ ಮೇಲಿದೆ.
ಅವಮಾನವೆಂದರೆ..?
ಲವಲವಿಕೆಗೆ ದಿಢೀರನೇ ಹಾಕುವ ಬ್ರೇಕ್. ನಿಶ್ಚಿಂತೆಯಿಂದ ನಲಿದಾಡುವವರಲ್ಲಿ ಒಮ್ಮೆಲೇ ನಿರಾಸಕ್ತಿ ಮೂಡಿಸುವಂಥದು. ಹುರುಪು ಹುಮ್ಮಸ್ಸಿಗೆ ಲಗಾಮು ಹಾಕುವಂಥದು. ಮನೋಬಲ ಕುಗ್ಗಿಸಿ ಒಳ ಮನಸ್ಸು ಒದ್ದಾಡುವಂತೆ ಮಾಡುವ ಗುಣವುಳ್ಳದ್ದು. ಸಾಮರ್ಥ್ಯವನ್ನು ಕಡೆಗಣಿಸಿದ ಹೀಯಾಳಿಕೆಯ ಮಾತುಗಳಿಗೆ ಸೊಪ್ಪು ಹಾಕುವಂಥದ್ದು. ಆತಂಕ ಹೆಚ್ಚಿಸುವ ವರ್ತನೆ. ಸನ್ನಿವೇಶಗಳನ್ನು ಎದುರಿಸಲು ಅಡ್ಡಗೋಡೆಯಾಗುವಂಥದ್ದು. ಪೀಡಿಸುವವರ ಮಾತಿಗೆ ಮರುಳಾಗಿ ದೃತಿಗೆಡುವ ಸ್ಥಿತಿ.
ಅವಮಾನವೆಂಬ ಶತ್ರುವನ್ನು ಮಿತ್ರನನ್ನಾಗಿಸುವುದು ಹೇಗೆ? ಅವಮಾನವೆಂಬ ಶತ್ರುವನ್ನು ಎದುರಿಸುವುದು ಸುಲಭವಲ್ಲವಾದರೂ ಕಷ್ಟಸಾಧ್ಯ. ಅವಮಾನದ ಬೆಟ್ಟ ಕರಗಿಸಲು ಹೀಗೆ ಮಾಡಿ ನೋಡಿ.
ಮನಸ್ಥಿತಿ ಬದಲಿಸಿ
ಒಪ್ಪತ್ತಿನ ಊಟಕ್ಕೂ ಗತಿಯಿಲ್ಲದವರು, ಶಿಕ್ಷಣದಿಂದ ವಂಚಿತರಾದವರು ವಿಭಿನ್ನ ಚೇತನರಂತೂ ಅವಮಾನದ ಮೂಟೆಗಳನ್ನು ಹೊತ್ತೇ ನಡೆಯಬೇಕಾಗುತ್ತದೆ. ಆದರೆ ಅಂಥವರು ಅವಮಾನದ ಕಪಾಳಕ್ಕೆರಡು ಬಿಗಿದು ಸರಿ ಮಾಡುವ ಮನೋಸ್ಥಿತಿ ಕಂಡರೆ ಎಂಥವರಿಗೂ ಸೋಜಿಗವೆನಿಸುತ್ತದೆ. ರಾಷ್ಟ್ರ ಮಟ್ಟದ ವಾಲಿಬಾಲ್ ಆಟಗಾರ್ತಿ ಅರುಣಿಮಾ ಸಿನ್ಹಾ ರೈಲಿನಲ್ಲಿ ಪಯಣಿಸುತ್ತಿದ್ದಾಗ ದುಷ್ಕರ್ಮಿಗಳು ಹೊರಗೆಸೆದ ಪರಿಣಾಮ ಎಡಗಾಲು ಚಲಿಸುತ್ತಿದ್ದ ರೈಲಿಗೆ ಸಿಕ್ಕು ಕತ್ತರಿಸಿ ಹೋಯಿತು. ಆಕೆ ಭವಿಷ್ಯ ಮಣ್ಣುಪಾಲಾಯಿತೆಂದು ಸುತ್ತಲಿನವರು ಅಂದುಕೊಂಡರು. ಆದರೆ ಆಗಿದ್ದೇ ಬೇರೆ. ಆಕೆ ಒಂಟಿಗಾಲಲ್ಲೇ ಎವರೆಸ್ಟ್ನಂಥ ಎತ್ತರದ ಶಿಖರದ ತುತ್ತತುದಿಯನು ಪಾದದಡಿಯಲ್ಲಿರಿಸಿ ಗೆಲುವಿನ ನಗೆ ಬೀರಿದಳು. ಜಗವನ್ನೇ ನಿಬ್ಬೆರಗಾಗಿಸಿದಳು. ನಮ್ಮನ್ನು ಹಿಂದಿಕ್ಕುವುದು ನಮ್ಮ ಮನಸ್ಥಿತಿಯೇ ಹೊರತು ದೇಹ ಸ್ಥಿತಿಯಲ್ಲ ಎಂಬುದನ್ನು ಚೆನ್ನಾಗಿ ನೆನಪಿಡಬೇಕು. ಅವಮಾನ ಮಾಡುವವರ ಮುಂದೆ ಕುರಿಯಂತೆ ಬಲಿಯಾಗಲಾರೆನೆಂದು ಮನಸ್ಥಿತಿ ಬದಲಿಸಿ. ಗಟ್ಟಿಯಾದ ಹೆಜ್ಜೆಗಳನ್ನೂರಿ ಬದುಕು ಮೊದಲಿಗಿಂತ ಹೆಚ್ಚು ಖುಷಿಯಿಂದ ಫಳ ಫಳಿಸುತ್ತದೆ.

ಛಲದ ಲಯಕ್ಕೆ ಒಡ್ಡಿಕೊಳ್ಳಿ
‘ಕುಸಿಯುತ್ತಿರುವ ಆಧಾರವನ್ನು ಗಟ್ಟಿಯಾಗಿ ಹಿಡಿದುಕೊಂಡಷ್ಟು ಅದು ಬೇಗ ಕುಸಿಯುವುದೆಂದು ತಿಳಿದುಕೊಳ್ಳಬೇಕು.’ ಇದು ಕವಿ ರವೀಂದ್ರರ ಮಾತು. ನಮ್ಮ ಬೆಳವಣಿಗೆಗೆ ನಾವೇ ತಡೆಯೊಡ್ಡಲು ಬಳಸುವಂಥ ಹಾದಿಯೇ ಅವಮಾನ.. ಅದು ನೀಡುವ ಯಾತನೆ ಅಷ್ಟಿಷ್ಟಲ್ಲ ಹಾಗಂತ ಅದರ ಬಲಿಯಲ್ಲಿ ಬಿದ್ದರೆ ಅನೇಕ ಅವಕಾಶಗಳು ಅರಿವಿಗೆ ಬಾರದೇ, ಗೆಲುವುಗಳೂ ಜಾರಿ ಹೋಗುವ ಸಂದರ್ಭಗಳೇ ಜಾಸ್ತಿ. ಅವಮಾನವನ್ನು ಒಂದ್ಸಾರಿ ಕಣ್ಮುಂದೆ ತಂದುಕೊಂಡು ಅದನ್ನು ಕೆಳಕ್ಕೆ ಬೀಳಿಸಲು ಯಾವ ಪ್ರತಿ ತಂತ್ರ ಹೆಣೆಯಬೇಕೆಂದು ಯೋಚಿಸಿ. ಅವಮಾನದಿಂದ ಹೊರಗೆ ಬರಲೇಬೇಕು. ಅವಮಾನಿಸಿದವರೇ ಸನ್ಮಾನಿಸಬೇಕು ಹಾಗೆ ಗೆದ್ದು ತೋರುವೆನೆಂದು ನಿಶ್ಚಯಿಸಬೇಕು. ದೊಡ್ಡ ಕಟ್ಟಡ ಕಟ್ಟಿದರೂ ಚೀಪುಗಲ್ಲು ಬೇಕೆನ್ನುವ ಗಾದೆಯಿದೆ. ಹಾಗೆ ಛಲದ ಬಲವಿಲ್ಲದೇ ಎಲ್ಲವೂ ಅಸಾಧ್ಯ. ಆದ್ದರಿಂದ ಛಲದ ಲಯಕ್ಕೆ ಒಡ್ಡಿಕೊಂಡರೆ ಮಾತ್ರ ಅವಮಾನದ ಎಲ್ಲೆಯನ್ನು ದಾಟಿ ಮುನ್ನುಗ್ಗಲು ಸಾಧ್ಯ.
ಪೀಡಕರನ್ನು ಗೌಣವಾಗಿಸಿ
ಬ್ರಿಟಿಷ್ ಅಧಿಕಾರಿ ತನ್ನಂತೆ ಮೊದಲ ದರ್ಜೆ ಬೋಗಿಯಲ್ಲಿ ಭಾರತೀಯನೊಬ್ಬ ಪಯಣಿಸುವುದನ್ನು ಕಂಡು “ಏ ಗುಲಾಮ ನಿನ್ನನ್ನು ಒಳಕ್ಕೆ ಬಿಟ್ಟವರಾರು? ಎಂದು ಅಬ್ಬರಿಸಿದ.ಆತ ಅವಮಾನಿಸಿದ ವ್ಯಕ್ತಿ ಖ್ಯಾತ ವಿದ್ವಾಂಸ ಹೋರಾಟಗಾರ ಮಹಾದೇವ ರಾನಡೆ ಮರು ಮಾತನಾಡಲಿಲ್ಲ. ರಾನಡೆಯವನ್ನು ಜನಸ್ತೋಮ ಹೆಗಲ ಮೇಲೆ ಹೊತ್ತು ಕರೆದೊಯ್ದಿತು. ತಾನು ಅವಮಾನಿಸಿದಾತ ದೊಡ್ಡ ವ್ಯಕ್ತಿ ಎಂದು ಅರಿವಾಯಿತು..ನಂತರ ಅಧಿಕಾರಿ ಗೋಖಲೆಯರ ಹತ್ತಿರ ಕ್ಷಮೆಯಾಚಿಸಿದ.
ಅವಮಾನಕ್ಕೆ ಕಿವಿಗೊಡಬೇಡಿ
ಸಾಮಾನ್ಯವಾಗಿ ಒಬ್ಬ ಭಿಕ್ಷುಕ ಸಿರಿವಂತನ ಬಗ್ಗೆ ಈರ್ಷ್ಯೆ ಹೊಂದಿರುವುದಿಲ್ಲ.ಸಿರಿವಂತನಾಗಬೇಕೆಂಬುದು ಆತನ ಕನಸಾಗಿರುವುದಿಲ್ಲ. ಜೀವ ನಾಶಕದಂಥ ಪೀಡಕರನ್ನು ಗೌಣವಾಗಿಸಿ. ಅವಮಾನಿಸಿದವರ ಮುಂದೆ ಗೋಳಾಡುವುದು ಅಂಗಲಾಚುವುದು ಮೂರ್ಖತನ. ಕೊಳೆತು ನಾರುವ ವಸ್ತುವಿನ ಚೀಲವನ್ನು ಅದೆಷ್ಟು ದಿನ ಹೊತ್ತು ತಿರುಗುತ್ತೀರಿ? ನೋವುಣಿಸುವ ಅವಮಾನದ ಭಾರದ ಚೀಲವನ್ನು ಕೆಳಗಿಳಿಸಿ.ಮಾನ ಹೆಚ್ಚಿಸುವ ಕೆಲಸ ಕಾರ್ಯಗಳಿಗೆ ಮನಸ್ಸನ್ನು ಎಳೆದೊಯ್ಯಿರಿ. ಮಾಸ್ತಿಯವರು ಹೇಳಿದಂತೆ,’ನೆಲದಲ್ಲಿ ಹೊಲಸು ಕಂಡರೆ ನೀನು ಗಗನದತ್ತ ಕಣ್ಣೆತ್ತು.’
ಆತುರದಲ್ಲಿ ನಿರ್ಧರಿಸಬೇಡಿ
ಅವಮಾನಿಸಿದವರನ್ನು ಹಾಗೆ ಕಾಡುವೆ. ಹೀಗೆ ಸದೆ ಬಡಿಯುವೆನೆಂದು ಆತುರದಲ್ಲಿ ದುಡುಕಿ ನಿರ್ಧರಿಸಬೇಡಿ. ‘ಹಸಿರಿರುವಾಗಲೇ ಕೊಯ್ದರೆ, ಕಸಗಾಯಿಯನ್ನೇ ತಿನ್ನಬೇಕಾಗುವುದು.’ಎಂಬ ರಶಿಯನ್ ಗಾದೆ ಮಾತು. ‘ಬೆಂಕಿ ಆರಿಸುವೆನೆಂದು, ಅದರ ಮೇಲೆ ಬಿದ್ದ ಪತಂಗದಂತಾಗಬಾರದು.’ ಎಂಬ ಪಂಚತಂತ್ರದ ಮಾತು ಅದೆಷ್ಟು ಸತ್ಯವಲ್ಲವೇ? ಅವಮಾನಿಸಿದ ವ್ಯಕ್ತಿಗೆ ಧನ್ಯವಾದ ಹೇಳಬೇಕು. ಆತ ಕೆಣಕದಿದ್ದರೆ ನಮ್ಮಲ್ಲಿಯ ಸಾಮರ್ಥ್ಯ ಪ್ರತಿಭೆಗಳು ಇಡಿಯಾಗಿ ಹೊರ ಬರುತ್ತಿರಲಿಲ್ಲ. ಅವಮಾನಿಸಿದವರೊಂದಿಗೆ ಪ್ರೀತಿಯ ಮಾತು, ರೈಲು ರಸ್ತೆ ಮಾರ್ಗದಲ್ಲಿನ ಸ್ವಿಚ್ಛನಂತೆ ವಿನಾಶ ಮತ್ತು ಸರಾಗ ಚಾಲನೆ ನಡುವಿನ ಒಂದು ಅಂಗುಲ ದೂರ. ಮನಸ್ಸಿನ ಸಮಸ್ಥಿತಿಯನ್ನು ಕಳೆದುಕೊಂಡು ಮನೋ ದೌರ್ಬಲ್ಯವನ್ನು ಹೆಚ್ಚಿಸಿಕೊಂಡು ಆತುರದಲ್ಲಿ ಮೂಗು ಕೊಯ್ದುಕೊಂಡರೆ ಕುಸಿದು ಕುಳಿತುಕೊಳ್ಳಬೇಕಾಗುತ್ತದೆ. ಕಾದು ಕೆಂಪಗಾದ ಕಬ್ಬಿಣದ ಮೇಲೆ ಕಮ್ಮಾರ ಹೊಡೆಯುವ ಸುತ್ತಿಗೆ ಏಟಿನಂತೆ ಅವಮಾನಕ್ಕೆ ಬಲು ಸೈರಣೆಯಿಂದ ಉತ್ತರಿಸಬೇಕು.
ಎದ್ದು ನಿಲ್ಲುವ ಶಕ್ತಿ
‘ನೀನು ಅನುಮತಿಸದಿದ್ದರೆ ನಿನ್ನನ್ನು ಯರೂ ಅವಮಾನಿಸಲಾರರು.’ ಗೀತೆಯ ಮಾತಿನಲ್ಲಿ ಹೇಳಬೇಕೆಂದರೆ ಶತ್ರುಗಳು ಹೊರಗಿಲ್ಲ.ಹೊರಗಿನ ಶತ್ರುಗಳ ಬಗ್ಗೆ ಅಳುಕಿಲ್ಲ. ನಿನ್ನ ಶತ್ರು ನೀನೇ ನಿನ್ನ ಮಿತ್ರನೂ ನೀನೇ. ನಿನಗೆ ನೀನೇ ಅತ್ಯುತ್ತಮ ಮಿತ್ರನಾಗು. ಹೃದಯ ದೌರ್ಬಲ್ಯವನ್ನು ಹತ್ತಿಕ್ಕಿ ಮನೋಬಲವನ್ನು ಹೆಚ್ಚಿಸಿಕೋ. ಅದೇ ಅವಮಾನದ ಬಲೆಯಿಂದ ಪಾರಾಗಲು ಪ್ರೇರಣಾಸ್ತೋತ್ರ. ಅವಮಾನ ಮನುಷ್ಯನನ್ನು ಕೆಳಗೆ ನೂಕುತ್ತದೆ ನಿಜ. ಆದರೆ ಎದ್ದು ನಿಲ್ಲುವ ಶಕ್ತಿ ನಮ್ಮಲ್ಲೇ ಇದೆ. ‘ಕೊರತೆಗಳನ್ನು ನೀಗಿಸಿಕೊಳ್ಳಲು ಬಯಕೆಗಳನ್ನು ಬಿಟ್ಟು ಬಿಡು ಎಂದು ಉಪದೇಶಿಸುವುದೂ ಪಾದರಕ್ಷೆಗಳ ಅವಶ್ಯಕತೆ ನೀಗಿಸಿಕೊಳ್ಳಲು ಕಾಲನ್ನು ಕಡಿಯಬೇಕೆನ್ನುವುದೂ ಒಂದೇ.’ ಅವಮಾನ ಸ್ವೀಕರಿಸುವ ಭಾವ ಬದಲಿಸಬೇಕು. ಆಗ ಕಷ್ಟ-ನಷ್ಟ ಸಂಕಟ- ಸಮಸ್ಯೆಗಳನ್ನು ನಗು ನಗುತ್ತ ಎದುರಿಸುವ ಮನೋಭಾವ ಕುದುರುತ್ತದೆ. ಅವಮಾನಕ್ಕೆ ಹೆದರಿ ಬೆನ್ನು ಹಾಕಿ ಓಡುವುದು ದೊಡ್ಡ ಅವಮಾನ. ಅವಮಾನವೆಂಬ ಕಲ್ಲಿನ ಗೋಡೆಯನ್ನು ಧೈರ್ಯದ ಕಾಲುಗಳಿಂದ ಕಚ್ಚಿ ಹಿಡಿದುಕೊಂಡು ಏರಿ ಹೋಗಬೇಕು. ಅವಮಾನಗಳ ಹೆಬ್ಬಂಡೆಗಳನ್ನೇರಿ ಗೆಲುವಿನ ಕೋಟೆಯತ್ತ ಹಾರಬೇಕೆಂದು ಗಟ್ಟಿಯಾಗಿ ಅಂದುಕೊಂಡಾಗ ಮಾತ್ರ ಅವಮಾನದ ಬೆಟ್ಟ ಕರಗಿಸಲು ಸಾಧ್ಯ. ಸುಂದರವಾಗಿ ಅರಳಿದ ಜೀವನಕ್ಕೆ ಕಣ್ಣು ತೆರೆಯಲು ಸಾಧ್ಯ.


